ಕ್ರೀಡೆ

ಯುಎಇಯಲ್ಲಿ ಐಪಿಎಲ್​ ಖಚಿತಗೊಂಡ ಬೆನ್ನಲ್ಲೇ ಟ್ರೋಲ್​ ಆದ ಸುರೇಶ್ ರೈನಾ..

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್​ 2ನೇ ಭಾಗಕ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಹೂರ್ತ ಫಿಕ್ಸ್​ ಮಾಡಿದೆ. ಶನಿವಾರ ನಡೆದ ಮಂಡಳಿಯ ವಿಶೇಷ ಮಹಾಸಭೆಯಲ್ಲಿ ಯುಎಇಯಲ್ಲಿ ಲೀಗ್​ ಆಯೋಜಿಸಲು ಅಧಿಕೃತವಾಗಿ ಒಪ್ಪಿಗೆ ಸೂಚಿಸಲಾಗಿದೆ. ಇದರೊಂದಿಗೆ ಮೂರನೇ ಬಾರಿಗೆ ಅರಬ್​ ನಾಡಿನಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ನಡೆಯುವುದು ಖಚಿತವಾಗಿದೆ. ಐಪಿಎಲ್​ ಎರಡನೇ ಬಾರಿಗೆ ಮುಹೂರ್ತ ಫಿಕ್ಸ್​ ಆದ ಬೆನ್ನಲ್ಲೇ ಸಿಎಸ್​ಕೆ ಸ್ಟಾರ್​ ಬ್ಯಾಟ್ಸ್​ಮನ್​ ಸುರೇಶ್​ ರೈನಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ 2020ರಲ್ಲಿ ಟೂನಿರ್ಯೂ ಮೊದಲೇ ಯುಎಇಯಿಂದ ತವರಿಗೆ ವಾಪಸಾಗಿದ್ದರು. ಬಾಲ್ಕನಿ ಹೊಂದಿರುವ ರೂಂ ಬುಕ್​ ಮಾಡಿ ಎಂದು ಸಿಎಸ್​ಕೆ ಆಡಳಿತ ಮಂಡಳಿಗೆ ಹೇಳುವ ಮೂಲಕ ರೈನಾಗೆ ಟಾಂಗ್​ ನೀಡಿದ್ದಾರೆ. ಮತ್ತೊಂದೆಡೆ, ರೈನಾ, ಸೀ ಯೂ ಸೂನ್​ ದುಬೈ ಎಂದು ಟ್ವೀಟ್​ ಮಾಡಿದ್ದಾರೆ.

ಇದೇ ವರ್ಷದ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ದ್ವಿಪಕ್ಷೀಯ ಸರಣಿ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ಬಿಸಿಸಿಐ 14ನೇ ಐಪಿಎಲ್​ ಆಯೋಜಿಸಿತು. ಆದರೆ, ಬಯೋಬಬಲ್​ ವ್ಯಾಪ್ತಿಯಲ್ಲೂ ಸತತ 2 ದಿನ ಕೋವಿಡ್​ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿವರೆಗೆ ಲೀಗ್​ ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್​-ಅಕ್ಟೋಬರ್​ ತಿಂಗಳಲ್ಲಿ ಲೀಗ್​ ನಡೆಯಲಿದ್ದು, ಬಹುತೇಕ ಭಾರತೀಯ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಲೀಗ್​ನಲ್ಲಿ ಆಡುವುದನ್ನು ಸುರೇಶ್​ ರೈನಾ ಖಚಿತಪಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಬಾರಿ ಭಾಲ್ಕನಿ ಹೊಂದಿರುವ ಹೊಟೇಲ್​ ಕೊಠಡಿ ನೀಡಲಿಲ್ಲ ಎಂದು ಸುರೇಶ್​ ರೈನಾ ತವರಿಗೆ ವಾಪಸಾದರು ಎಂದೆಲ್ಲಾ ಸುದ್ದಿಯಾಗಿತ್ತು. ಇದಕ್ಕೆ ಅಭಿಮಾನಿಗಳು ರೈನಾ ಅವರನ್ನು ಟ್ವಿಟರ್​ನಲ್ಲಿ ಕಾಲೆಳೆದಿದ್ದಾರೆ.

2014ರಲ್ಲಿ ಸಾರ್ವತ್ರಿಕ ಚುನಾವಣೆಯಿಂದಾಗಿ ಅರ್ಧಟೂನಿರ್ ಯುಎಇಯಲ್ಲಿ ನಡೆದರೆ, 2020ರಲ್ಲಿ ಪೂರ್ಣ ಟೂನಿರ್ಯೇ ನಡೆದಿತ್ತು. ಇಂಗ್ಲೆಂಡ್​ನ ಮೊಯಿನ್​ ಅಲಿ ಲೀಗ್​ಗೆ ಅಲಭ್ಯರಾದರೆ, ಸುರೇಶ್​ ರೈನಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲಿದ್ದಾರೆ. ಸಿಎಸ್​ಕೆ ತಂಡ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯ ದಾಖಲಿಸಿ ಲೀಗ್​ ಹಂತದಲ್ಲಿ 2ನೇ ಸ್ಥಾನದಲ್ಲಿದೆ.