ಮುಖ್ಯಕೋಚ್ ಗಂಭೀರ್ ಜತೆಗೆ ಶುಭಮಾನ್ ಗಿಲ್. ವಿರಾಟ್ ಕೊಹ್ಲಿ. ಏಜೆನ್ಸಿ
ಕ್ರೀಡೆ

ಭಾರತ-ನ್ಯೂಜಿಲೆಂಡ್ ಮೂರನೇ ಏಕದಿನ ಬಳಿಕ ತರಬೇತಿ ಬಳಗ ವಿಭಜನೆ: ಗುರ್ನೂರ್, ಅಕಿಬ್ ನೆಟ್ ಬೌಲರ್ಸ್​!

ಸತತ ಎರಡು ಪಂದ್ಯಗಳ ಗೆಲುವಿನ ಜೋಶ್‌ನಲ್ಲಿರುವ ಶುಭಮಾನ್ ಗಿಲ್ ಪಡೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯರಿಗೆ ಸರಣಿ ಗೆಲುವಿನ ಉಡುಗೊರೆ ನೀಡುವ ನಿರೀಕ್ಷೆ ಹರಡಿದೆ. ಭಾರತ ಹಾಗೂ ಅತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಭಾರತ ಹ್ಯಾಟ್ರಿಕ್ ಜಯದ ತವಕದಲ್ಲಿದ್ದು, ಪಂದ್ಯಕ್ಕೆ ಮಳೆ ಭೀತಿಯೂ ಕಾಡುತ್ತಿದೆ.

ಹ್ಯಾಮಿಲ್ಟನ್: ಸತತ ಎರಡು ಪಂದ್ಯಗಳ ಗೆಲುವಿನ ಜೋಶ್‌ನಲ್ಲಿರುವ ಶುಭಮಾನ್ ಗಿಲ್ ಪಡೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯರಿಗೆ ಸರಣಿ ಗೆಲುವಿನ ಉಡುಗೊರೆ ನೀಡುವ ನಿರೀಕ್ಷೆ ಹರಡಿದೆ. ಭಾರತ ಹಾಗೂ ಅತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಭಾರತ ಹ್ಯಾಟ್ರಿಕ್ ಜಯದ ತವಕದಲ್ಲಿದ್ದು, ಪಂದ್ಯಕ್ಕೆ ಮಳೆ ಭೀತಿಯೂ ಕಾಡುತ್ತಿದೆ.

ಸತತ ಸೋಲು ಹಾಗೂ ಆಟಗಾರರ ಗಾಯದ ಸಮಸ್ಯೆಯಿಂದ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿರುವ ನ್ಯೂಜಿಲೆಂಡ್ ತಂಡ ತವರಿನಲ್ಲಿ ಸತತ 12 ಸರಣಿ ಗೆಲುವಿನ ಅಜೇಯ ಓಟ ಕಾಯ್ದುಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 2019ರಲ್ಲಿ ಭಾರತದ ಎದುರೇ ಕಿವೀಸ್ ಕೊನೆಯದಾಗಿ ಏಕದಿನ ಸರಣಿ ಸೋತಿತ್ತು. ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್, ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಸವಾಲೊಡ್ಡುವ ಸಾಧ್ಯತೆಯಿದೆ.

ಮಾಜಿ ನಾಯಕ ರೋಹಿತ್ ಶರ್ಮ (0, 23 ರನ್) ಜತೆಗೆ ನಾಯಕ ಶುಭಮಾನ್ ಗಿಲ್ ಆತಿಥೇಯ ಬೌಲರ್‌ಗಳ ಎದುರು ಪರದಾಡಿದ್ದರು. ಟೆಸ್ಟ್ ಸರಣಿ ಸಿದ್ಧತೆಗೆ ತೆರಳುವ ಮುನ್ನ ಸರಣಿ ಗೆಲುವು ಖಾತ್ರಿಪಡಿಸಿಕೊಳ್ಳುವ ಗುರಿ ಶುಭಮಾನ್ ಮುಂದಿದೆ. ಕೊನೇ ಎರಡು ಪಂದ್ಯಗಳಲ್ಲಿ ಉಪನಾಯಕ ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಆದರೆ, ಕೆಎಲ್ ರಾಹುಲ್‌ಗಿಂತ ಮೊದಲು ಅಕ್ಷರ್ ಪಟೇಲ್‌ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿರುವುದು ಚರ್ಚೆ ಹುಟ್ಟು ಹಾಕಿದೆ. ಚೆಂಡು ಅನಿರೀಕ್ಷಿತವಾಗಿ ಹೆಚ್ಚು ಪುಟಿಯುವ ಪರಿಸ್ಥಿತಿಗೆ ಅಕ್ಷರ್ ಆಟದ ಶೈಲಿ ಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿವೆ. ಬೌಲರ್‌ಗಳಿಗೆ ಸ್ವರ್ಗ ಎನಿಸಿರುವ ಹ್ಯಾಮಿಲ್ಟನ್ ಅಂಗಣದಲ್ಲಿ ಗುರ್ನೂರ್ ಬ್ರಾರ್, ಅಂಶುಲ್ ಕಂಬೋಜ್ ಹಾಗೂ ಅರ್ಷದೀಪ್ ಸಿಂಗ್ ಮತ್ತೊಮ್ಮೆ ಪರಿಣಾಮಕಾರಿ ಎನಿಸಲಿದ್ದಾರೆ.

ತರಬೇತಿ ಬಳಗ ವಿಭಜನೆ

ಹ್ಯಾಮಿಲ್ಟನ್ ಏಕದಿನ ಪಂದ್ಯದ ಬಳಿಕ ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರರು ನವೆಂಬರ್ 11ರಿಂದ ರೆಡ್‌ಬಾಲ್ ಸರಣಿಗೆ ಪೂರ್ವ ಸಿದ್ಧತೆ ಆರಂಭಿಸಲಿದ್ದಾರೆ. ಇದಕ್ಕಾಗಿ ಶುಭಮಾನ್ ಗಿಲ್, ಕೆಎಲ್ ರಾಹುಲ್ ಜತೆಗೆ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ಬೌಲಿಂಗ್ ಕೋಚ್ ಮಾರ್ನ್ ಮಾರ್ಕೆಲ್ ವೆಲ್ಲಿಂಗ್ಟನ್‌ಗೆ ತೆರಳಲಿದ್ದು, ಭಾರತ ಎ ತಂಡದಲ್ಲಿರುವ ವೇಗಿ ಜಸ್‌ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್ ಸಹ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಏಕದಿನ ಸರಣಿಯ ಕೊನೇ ಎರಡು ಪಂದ್ಯಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್, ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಳೆ ಮಾತ್ರ ಭಾರತ ತಂಡದ ಜತೆಗಿರಲಿದ್ದಾರೆ. ನ. 19ರಂದು ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆರಂಭವಾಗಲಿದೆ.

ಗುರ್ನೂರ್, ಅಕಿಬ್ ನೆಟ್ ಬೌಲರ್ಸ್‌

ಏಕದಿನ ಸರಣಿಗೆ ಮಾತ್ರ ಭಾರತ ತಂಡದ ಭಾಗವಾಗಿರುವ ವೇಗಿಗಳಾದ ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್ ಹಾಗೂ ಅಕಿಬ್ ನಬಿ ಪ್ರವಾಸದ ಅಂತ್ಯದವರೆಗೂ ತಂಡದ ಜತೆಗೆ ಮುಂದುವರಿಯುವ ನಿರೀಕ್ಷೆ ಹರಡಿದೆ. ಟೆಸ್ಟ್ ತಂಡದ ಜತೆಗೆ ಮೂವರು ವೇಗಿಗಳನ್ನು ನೆಟ್ ಬೌಲರ್‌ಗಳಾಗಿ ಕೊಂಡೊಯ್ಯಲು ತರಬೇತಿ ಬಳಗ ಚಿಂತನೆ ನಡೆಸಿದ್ದು, ಕೋಚ್ ಗಂಭೀರ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.