ಕ್ರೀಡೆ

ಸೂಪರ್ ಓವರ್‌ನಲ್ಲಿ ಸೋತ ವಿಂಡೀಸ್: ಡಚ್ಚರಿಗೆ ರೋಚಕ ಗೆಲುವು

ಹರಾರೆ: ಆತಿಥೇಯ ಜಿಂಬಾಬ್ವೆ ಬಳಿಕ ನೆದರ್ಲೆಂಡ್ ವಿರುದ್ಧವೂ ಸೋಲು ಕಾಣುವುದರೊಂದಿಗೆ ವೆಸ್ಟ್ ಇಂಡೀಸ್ ತಂಡ ಏಕದಿನ ವಿಶ್ವಕಪ್‌ಗೆ ಅರ್ಹತೆ ಸಂಪಾದಿಸುವ ಹಾದಿ ದುರ್ಗಮಗೊಂಡಿದೆ. ಎ ಗುಂಪಿನ ಪಂದ್ಯದಲ್ಲಿ 374 ರನ್‌ಗಳ ಬೃಹತ್ ಮೊತ್ತ ಪೇರಿಸಿಯೂ ಟೈಗೆ ತೃಪ್ತಿಪಟ್ಟ ವಿಂಡೀಸ್ ಬಳಿಕ ಸೂಪರ್ ಓವರ್‌ನಲ್ಲಿ 30 ರನ್ ಬಿಟ್ಟುಕೊಟ್ಟು 22 ರನ್‌ಗಳಿಂದ ಹೀನಾಯವಾಗಿ ಸೋತಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್‌ಗೆ ಆರಂಭಿಕ ಬ್ಯಾಟರ್ ಬ್ರಾಂಡನ್ ಕಿಂಗ್ (76) ಹಾಗೂ ಜಾನ್ಸನ್ ಚಾರ್ಲ್ಸ್ (54) ಜೋಡಿ ಉತ್ತಮ ಆರಂಭ ಒದಗಿಸಿತು. ನಂತರ ವಿಕೆಟ್ ಕೀಪರ್-ಬ್ಯಾಟರ್ ನಿಕೋಲಸ್ ಪೂರನ್ (104) ಬಿರುಸಿನ ಶತಕದ ನೆರವಿನಿಂದ 6 ವಿಕೆಟ್‌ಗೆ 374 ರನ್ ಪೇರಿಸಿತು. ಪ್ರತಿಯಾಗಿ ನೆದರ್ಲೆಂಡ್ ತಂಡ ತೇಜ ನಿಡಮನೂರು (111) ಸ್ಫೋಟಕ ಶತಕದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 374 ರನ್ ಪೇರಿಸಿ ಟೈ ಸಾಧಿಸಿತು.

ಸೂಪರ್ ಓವರ್‌ನಲ್ಲಿ ಜೇಸನ್ ಹೋಲ್ಡರ್ ಎದುರು (4,6,4,6,6,4) ಲೋಗನ್ ವಾನ್ ಬೀಕ್ 30 ರನ್ ಚಚ್ಚಿದರು. ಈ ಗುರಿ ಬೆನ್ನತ್ತಿದ್ದ ವಿಂಡೀಸ್ ತಂಡ 5 ಎಸೆತಗಳಲ್ಲಿ 8 ರನ್‌ಗೆ 2 ವಿಕೆಟ್ ಕಳೆದುಕೊಂಡು ಶರಣಾಯಿತು. ಇದರಿಂದ ವಿಂಡೀಸ್ ಸೂಪರ್ ಸಿಕ್ಸ್ ಹಂತಕ್ಕೆ ಯಾವುದೇ ಅಂಕವಿಲ್ಲದೆ ತೆರಳಲಿದೆ.