ಕ್ರೀಡೆ

ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಸತತ 4ನೇ ಸೋಲು; ಸನ್‌ರೈಸರ್ಸ್ 69 ರನ್​ಗಳ ಜಯ

ದುಬೈ: ಆರಂಭಿಕರಾದ ಜಾನಿ ಬೇರ್‌ಸ್ಟೋ (97 ರನ್, 55 ಎಸೆತ, 7 ಬೌಂಡರಿ, 6 ಸಿಕ್ಸರ್) ಹಾಗೂ ನಾಯಕ ಡೇವಿಡ್ ವಾರ್ನರ್ (52 ರನ್, 40 ಎಸೆತ, 5 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ರಶೀದ್ ಖಾನ್ (12ಕ್ಕೆ 3) ಮಾರಕ ದಾಳಿ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-13ರ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 69 ರನ್‌ಗಳಿಂದ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಸನ್‌ರೈಸರ್ಸ್‌ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯ ಕಿಂಗ್ಸ್ ಇಲೆವೆನ್ ಸತತ 4ನೇ ಸೋಲನುಭವಿಸಿ ಕೊನೇ ಸ್ಥಾನದಲ್ಲೇ ಉಳಿಯಿತು.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ತಂಡ, 6 ವಿಕೆಟ್‌ಗೆ 201 ರನ್ ಪೇರಿಸಿತು. ಪ್ರತಿಯಾಗಿ ನಿಕೋಲಸ್ ಪೂರನ್ (77 ರನ್, 37 ಎಸೆತ, 5 ಬೌಂಡರಿ, 7 ಸಿಕ್ಸರ್) ಏಕಾಂಗಿ ನಿರ್ವಹಣೆ ನಡುವೆಯೂ ಪಂಜಾಬ್ ತಂಡ 16.5 ಓವರ್‌ಗಳಲ್ಲಿ 132 ರನ್‌ಗಳಿಗೆ ಸರ್ವಪತನ ಕಂಡಿತು.

ಸನ್‌ರೈಸರ್ಸ್‌ ಹೈದರಾಬಾದ್: 6 ವಿಕೆಟ್‌ಗೆ 201 (ಡೇವಿಡ್ ವಾರ್ನರ್ 52, ಬೇರ್‌ಸ್ಟೋ 97, ವಿಲಿಯಮ್ಸನ್ 20*, ರವಿ ಬಿಷ್ಣೋಯಿ 29ಕ್ಕೆ 3, ಅರ್ಷದೀಪ್ ಸಿಂಗ್ 33ಕ್ಕೆ 2), ಕಿಂಗ್ಸ್ ಇಲೆವೆನ್ ಪಂಜಾಬ್: 16.5 ಓವರ್‌ಗಳಲ್ಲಿ 132 (ರಾಹುಲ್ 11, ಮಯಾಂಕ್ ಅಗರ್ವಾಲ್ 9, ಪೂರನ್ 77, ಖಲೀಲ್ ಅಹಮದ್ 24ಕ್ಕೆ 2, ಟಿ.ನಟರಾಜನ್ 24ಕ್ಕೆ 2, ರಶೀದ್ ಖಾನ್ 12ಕ್ಕೆ 3).