ಕಿಂಗ್ಸ್ಟನ್: ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನೀಲ್ ನಾರಾಯಣ್ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಧಿಕೃತ ವಿದಾಯ ಘೋಷಿಸಿದ್ದಾರೆ. ನಾರಾಯಣ್ 2019ರ ಆಗಸ್ಟ್ನಲ್ಲಿ ಕೊನೆಯದಾಗಿ ವೆಸ್ಟ್ ಇಂಡೀಸ್ ಪರ ಆಡಿದ್ದರು.
"ನಾನು ವಿಂಡೀಸ್ ಪರ ಕೊನೇ ಪಂದ್ಯ ಆಡಿ 4 ವರ್ಷಗಳೇ ಕಳೆದಿವೆ. ಆದರೆ ಇಂದು ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಪ್ರಕಟಿಸುತ್ತಿದ್ದೇನೆ' ಎಂದು 35 ವರ್ಷದ ನಾರಾಯಣ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 2011ರ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಟ್ರಿನಿಡಾಡ್-ಟೊಬಾಗೊ ಪರ ಮಿಂಚುವ ಮೂಲಕ ಸುನೀಲ್ ನಾರಾಯಣ್ ಎಲ್ಲರ ಗಮನಸೆಳೆದಿದ್ದರು. ಬಳಿಕ ಅದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ವಿಂಡೀಸ್ ಪರ ಅವರು ಒಟ್ಟು 122 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಈ ಪೈಕಿ 6 ಟೆಸ್ಟ್, 65 ಏಕದಿನ ಮತ್ತು 51 ಟಿ20 ಪಂದ್ಯಗಳು ಸೇರಿದ್ದು, ಕ್ರಮವಾಗಿ 21, 92 ಮತ್ತು 52 ವಿಕೆಟ್ ಕಬಳಿಸಿದ್ದಾರೆ. 2012ರಲ್ಲಿ ಮೊದಲ ಬಾರಿ ಟಿ20 ವಿಶ್ವಕಪ್ ಗೆದ್ದ ವಿಂಡೀಸ್ ತಂಡದ ಭಾಗವೂ ಆಗಿದ್ದರು.