ಕ್ರೀಡೆ

ಕನ್ನಡಿಗ ಅರ್ಜುನ್​ಗೆ ಕಂಚಿನ ಪದಕ: ಏಷ್ಯಾ ಕುಸ್ತಿ ಚಾಂಪಿಯನ್​ಷಿಪ್, ಚಿನ್ನದ ಬರ ನೀಗಿಸಿದ ಸುನೀಲ್

ನವದೆಹಲಿ: ಭಾರತದ ಸುನೀಲ್ ಕುಮಾರ್, ಏಷ್ಯಾ ಕುಸ್ತಿ ಚಾಂಪಿಯನ್​ಷಿಪ್​ನ ಪುರುಷರ 87 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಕೆಡಿ ಜಾಧವ್ ಒಳಾಂಗಣ ಸ್ಟೇಡಿಯಂನಲ್ಲಿ ಚಾಂಪಿಯನ್​ಷಿಪ್​ನ ಮೊದಲ ದಿನವಾದ ಮಂಗಳವಾರ ನಡೆದ ಗ್ರೀಕೊ-ರೋಮನ್ ಸ್ಪರ್ಧೆಯಲ್ಲಿ ಸುನೀಲ್ ಕುಮಾರ್ ರ್ಕಿಗಿಸ್ಥಾನದ ಅಜಾತ್ ಸಾಲಿಡಿನೊವ್ ಅವರನ್ನು 5-0 ಯಿಂದ ಮಣಿಸಿದರು.

ಗ್ರೀಕೊ-ರೋಮನ್ ವಿಭಾಗದಲ್ಲಿ 27 ವರ್ಷಗಳ ಬಳಿಕ ಭಾರತದ ಪೈಲ್ವಾನ್ ಸ್ವರ್ಣ ಗೆದ್ದ ಸಾಧನೆ ಮಾಡಿದರು. 2019ರ ಚಾಂಪಿಯನ್​ಷಿಪ್​ನಲ್ಲೂ ಫೈನಲ್​ಗೇರಿದ್ದ ಸುನೀಲ್ ಕುಮಾರ್ ಬೆಳ್ಳಿ ಪದಕ ಜಯಿಸಿದ್ದರು. . ಈ ಮೂಲಕ ಆತಿಥೇಯ ಭಾರತ ತಂಡಕ್ಕೆ ಟೂರ್ನಿಯ ಮೊದಲ ದಿನವೇ ಸುನೀಲ್ ಸ್ವರ್ಣ ತಂದುಕೊಟ್ಟರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್​ನಲ್ಲಿ ಸುನೀಲ್ ಕುಮಾರ್ 1-8 ರಿಂದ ಕಜಾಖ್​ಸ್ತಾನದ ಅಜಾಮತ್ ಕುಸ್ತುಬಾಯೊವ್ ಅವರನ್ನು ಮಣಿಸಿದ್ದರು.

ಇತರ ಕುಸ್ತಿಪಟುಗಳಾದ ಮೆಹರ್ ಸಿಂಗ್, ಸಚಿನ್ ರಾಣಾ ಹಾಗೂ ಸಜನ್ ನಿರಾಸೆ ಮೂಡಿಸಿದರು. 130 ಕೆಜಿ ವಿಭಾಗದ ಸೆಮಿಫೈನಲ್​ನಲ್ಲಿ ಮೆಹರ್ ಸಿಂಗ್ 1-9 ರಿಂದ ಕೊರಿಯಾದ ಮಿನ್​ಸಿಯೊಕ್ ಕಿಮ್ೆ ಶರಣಾದರು. ಭಾರತದ ನಂ.1 ರೆಸ್ಲರ್ ನವೀನ್ ಗಾಯದ ಸಮಸ್ಯೆಯಿಂದ ಚಾಂಪಿಯನ್​ಷಿಪ್​ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಮೆಹರ್ ಸಿಂಗ್, ಮೊದಲ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಡಾಲೆರ್ ರಖಾಮೊಟೊವ್ ಎದುರು ಜಯ ದಾಖಲಿಸಿದರು. 77 ಕೆಜಿ ವಿಭಾಗದ ಅರ್ಹತಾ ಸುತ್ತಿನ ಹೋರಾಟದಲ್ಲಿ ಭಾರತ ಸಜನ್ ಮೊದಲ ಸುತ್ತಿನಲ್ಲೇ ಆಘಾತ ಎದುರಿಸಿದರು. ಪದಕದ ಭರವಸೆಯಾಗಿದ್ದ ಸಜನ್ 6-9 ರಿಂದ 23 ವಯೋಮಿತಿ ಏಷ್ಯನ್ ಚಾಂಪಿಯನ್ ರೆನಾಟ್ ಇಲಿಯಾಜುಲು ಎದುರು ಸೋಲನುಭವಿಸಿದರು. ಎದುರಾಳಿ ಸ್ಪರ್ಧಿಗೆ ಪ್ರತಿಹೋರಾಟ ನೀಡುವಲ್ಲಿ ಭಾರತದ ಪೈಲ್ವಾನ್ ಎಡವಿದರು. 63ಕೆಜಿ ವಿಭಾಗದಲ್ಲಿ ಭಾರತದ ಮತ್ತೋರ್ವ ಪೈಲ್ವಾನ್ ಸಚಿನ್ ರಾಣಾ ಕೂಡ ನಿರಾಸೆ ಕಂಡರು.

ಮಾಸ್ಕ್ ಧರಿಸಿ ಆಡಿದ ಪೈಲ್ವಾನ್​ಗಳು!: ಭಾರತದಲ್ಲಿ ಕರೋನಾ ಭೀತಿ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಏಷ್ಯಾ ಕುಸ್ತಿ ಚಾಂಪಿಯನ್​ಷಿಪ್ ವೇಳೆ ಜಪಾನ್, ಕೊರಿಯಾ ಹಾಗೂ ಚೀನಾ ತೈಪೆ ಕುಸ್ತಿ ಪಟುಗಳು ಮುಖಕ್ಕೆ ಮಾಸ್ಕ್ ಧರಿಸಿ ಕಣಕ್ಕಿಳಿದಿದ್ದಾರೆ. ಮಹಾಮಾರಿ ಚೀನಾದಲ್ಲಿ ಹೆಚ್ಚಾಗಿ ಹರಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಕುಸ್ತಿಪಟುಗಳಿಗೆ ಭಾರತ ಸರ್ಕಾರ ವೀಸಾ ನಿರಾಕರಿಸಿತ್ತು. ‘28 ಸದಸ್ಯರ ತಂಡವಿದ್ದು, ಕೆಲ ಕುಸ್ತಿಪಟುಗಳು ಹಾಗೂ ಅಧಿಕಾರಿಗಳು ಮಾಸ್ಕ್ ಧರಿಸಿದ್ದಾರೆ. ಇಲ್ಲಿ ಯಾವುದೇ ವೈರಸ್ ಭೀತಿ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಹಾಕಿದ್ದಾರೆ’ ಎಂದು ಕೊರಿಯಾದ ವೈದ್ಯಕೀಯ ಸಿಬ್ಬಂದಿ ಸಿಯೊನ್ ಲೀ ತಿಳಿಸಿದ್ದಾರೆ. ದೆಹಲಿಯ ಗಾಳಿ ಆರೋಗ್ಯಕರವಾಗಿಲ್ಲ. ಏಷ್ಯಾದ ಕೆಲ ನಗರಗಳ ವಾತಾವರಣ ಹದಗೆಟ್ಟಿದೆ’ ಎಂದು ಜಪಾನ್ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಬಾಗಲಕೋಟೆಯ ಅರ್ಜುನ್ ಹಲಕುರ್ಕಿಗೆ ಕಂಚು

ಬಾಗಲಕೋಟೆ ಮೂಲದ ಅರ್ಜುನ್ ಹಲಕುರ್ಕಿ ಪುರುಷರ 55ಕೆಜಿ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ. ಸೀನಿಯರ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕದ ಕುಸ್ತಿಪಟುವಿಗೆ ಮೊದಲ ಪದಕ ಇದಾಗಿದೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕನ್ನಡಿಗ ಅರ್ಜುನ್, ಕೊರಿಯಾದ ಡಾಂಗ್ಯೊಕ್ ಅವರನ್ನು 7-4 ರಿಂದ ಮಣಿಸಿ ಪದಕಕ್ಕೆ ಕೊರಳೊಡಿದ್ದಾರೆ. ಕೂದಲೆಳೆ ಅಂತರದಲ್ಲಿ ಫೈನಲ್ ಹಾದಿ ತಪ್ಪಿಸಿಕೊಂಡಿದ್ದ ಅರ್ಜುನ್ ಕಂಚಿನ ಹೋರಾಟದಲ್ಲಿ ಸರ್ವಾಂಗೀಣ ನಿರ್ವಹಣೆ ಮೂಲಕ ಗಮನಸೆಳೆದರು. ದಾವಣಗೆರೆ ಕ್ರೀಡಾ ಹಾಸ್ಟೆಲ್​ನವರಾದ ಅರ್ಜುನ್, ಸೆಮಿಫೈನಲ್ ಹೋರಾಟದಲ್ಲಿ ಇರಾನ್​ನ ಪೌಯಾ ಮೊಹಮದ್ ನಸೆರ್​ಪೌರ್ ಎದುರು 7-1 ರಿಂದ ಮುನ್ನಡೆಯಲ್ಲಿದ್ದರೂ 7-8 ರಿಂದ ಸೋಲನುಭವಿಸಿದ್ದರು. ಈ ಮೂಲಕ ಭಾರತಕ್ಕೆ ಮೊದಲ ದಿನ 2ನೇ ಪದಕ ತಂದುಕೊಟ್ಟರು.