ಕ್ರೀಡೆ

ಸ್ಯಾಮ್​​ ಕಾನ್​ಸ್ಟಾಸ್​ ಜತೆ ವಿರಾಟ್​​ ಕೊಹ್ಲಿ ವಾಗ್ವಾದ! ದಂಡ ಕಟ್ಟಲು ರೆಡಿಯಿರಿ ಎಂದ ಸುನಿಲ್ ಗವಾಸ್ಕರ್​ | Virat Kohli

Virat Kohli: ಇಂದು (ಡಿ.26) ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಬಾರ್ಡರ್​ ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ. ಮೊದಲ ದಿನವೇ ವಿವಾದ ಭುಗಿಲೆದ್ದಿದ್ದು, ಭಾರತದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮೊದಲ ದಿನದಾಟದ ವೇಳೆ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆರಂಭಿಕ ಯುವ ಬ್ಯಾಟರ್​ ಸ್ಯಾಮ್​​ ಕಾನ್​ಸ್ಟಾಸ್​ ನಡುವೆ ಊಂಟಾದ ವಾಗ್ವಾದ ಸದ್ಯ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಚೊಚ್ಚಲ ಪಂದ್ಯ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಪರ 19 ವರ್ಷದ ಸ್ಯಾಮ್ ಕಾನ್​ಸ್ಟಾಸ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದರು. ವಿಶ್ವದ ಬೆಸ್ಟ್​ ಬೌಲರ್​ ಎಂದೇ ಖ್ಯಾತಿ ಗಳಿಸಿರುವ ಜಸ್​ಪ್ರೀತ್​ ಬುಮ್ರಾ ಅವರಂತಹ ಕ್ಲಾಸ್​ ಬೌಲರ್‌ನ ಬೌಲಿಂಗ್​ಗೆ ಮೈದಾನದಲ್ಲಿ ಅಬ್ಬರಿಸಿದ್ದಾರೆ. ಈ ದೃಶ್ಯವನ್ನು ಪಂದ್ಯ ವೀಕ್ಷಿಸುತ್ತಿದ್ದ ಕ್ರಿಕೆಟ್ ಪ್ರಿಯರಿಗೆ ನಂಬಲು ಅಸಾಧ್ಯ ಅನಿಸುವ ವೇಳೆಗೆ ಕ್ರೀಸ್​ನಿಂದ ಬ್ಯಾಟ್ ಹಿಡಿದು ಬರುತ್ತಿದ್ದ ಸ್ಯಾಮ್​ಗೆ ಡಿಕ್ಕಿ ಹೊಡೆದ ವಿರಾಟ್ ಕೊಹ್ಲಿ, ನಂತರ ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಸದ್ಯ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇನ್ನು ವಿರಾಟ್​ ಕೊಹ್ಲಿ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತಿರುವ ಆಸೀಸ್​ ಆಟಗಾರರ ಮಧ್ಯೆ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್​ ಪ್ರತಿಕ್ರಿಯಿಸಿದ್ದಾರೆ. "ಇದನ್ನು ತಪ್ಪಿಸಬಹುದಿತ್ತು. ನನ್ನ ಪ್ರಕಾರ, ನೀವು ಜನನಿಬಿಡ ಪ್ರದೇಶದ ಪಾದಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ನಿಮ್ಮ ಎದುರಿಗೆ ಬರುತ್ತಿದ್ದಾರೆ ಎಂಬುದನ್ನು ನೀವು ಗಮನಿಸಿದರೆ, ದೂರ ಸರಿಯುತ್ತೀರಿ ಅಲ್ವೇ? ಎದುರು ಬರುವವರಿಗೆ ಜಾಗ ಮಾಡಿಕೊಟ್ಟರೆ ನೀವೇನು ಚಿಕ್ಕವರಾಗುವುದಿಲ್ಲ. ಮೈದಾನದಲ್ಲಿ ಇಂತಹ ವಿಷಯಗಳನ್ನು ನೋಡಲು ಯಾರೂ ಬಯಸುವುದಿಲ್ಲ” ಎಂದಿದ್ದಾರೆ.

ದಂಡ ನಿರೀಕ್ಷಿಸಿ

"ನಾನು ಗಮನಿಸಿದಂತೆ ಇಬ್ಬರೂ ನೆಲವನ್ನು ನೋಡುತ್ತ ಬಂದಿದ್ದಾರೆ. ಇಲ್ಲಿ ಒಬ್ಬರಿಗೊಬ್ಬರು ಸರಿಯಾಗಿ ಗಮನಿಸಿಲ್ಲ. ಕಾನ್ಸ್ಟಾಸ್ ತಮ್ಮ ಬ್ಯಾಟ್​ನ ನೋಡುತ್ತ ಬಂದರೆ, ಕೊಹ್ಲಿ ತಮ್ಮ ಕೈಯಲ್ಲಿದ್ದ ಚೆಂಡನ್ನು ನೋಡುತ್ತ ಬಂದಿದ್ದಾರೆ. ಈ ವೇಳೆ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ. ಆದ್ರೆ, ಈ ದೃಶ್ಯ ನೋಡಿದ ಬಳಿಕ ಇಂದು ಸಂಜೆಯ ವೇಳೆಗೆ ಯಾರಿಗೆ ಹೆಚ್ಚು ದಂಡ ವಿಧಿಸಲಾಗುವುದು ಎಂಬುದನ್ನು ಕಾದು ನೋಡಬೇಕಿದೆ" ಎಂದು ಗವಾಸ್ಕರ್​ ಹೇಳಿದ್ದಾರೆ.