ಬೆಂಗಳೂರು: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಸುನೀಲ್ ಛೇಟ್ರಿ ಹಾಗೂ ಸೋನಮ್ ಭಟ್ಟಾಚಾರ್ಯ ದಂಪತಿಗೆ ಗಂಡು ಮಗ ಜನಿಸಿದ್ದು, ಈ ಬಗ್ಗೆ ಛೇಟ್ರಿ ಅಧಿಕೃತವಾಗಿ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಅಪ್ಪನಾಗಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ 30 ರಂದು ಮಗು ಜನಿಸಿದ್ದರೂ ಎಲ್ಲಿಯೂ ಅಧಿಕೃತವಾಗಿ ಖಚಿತಪಡಿಸದ ಛೇಟ್ರಿ, ತನ್ನ ತಂದೆಯ ಜನ್ಮದಿನದಂದೇ ತನ್ನ ಮಗುವಿನ ಹೆಸರು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದು, ಮಗುವಿಗೆ ಧ್ರುವ್ ಎಂದು ಹೆಸರಿಟ್ಟಿದ್ದಾರೆ.
ಆಗಸ್ಟ್ 30 ರಂದು ನಮ್ಮ ಮಾರ್ಗದರ್ಶಿಯ ನಕ್ಷತ್ರ ಜನಿಸಿದೆ. ಇದು ಜೀವನದ ಪ್ರಮುಖ ಭಾಗವಾಗಿದೆ. ಆದರೆ ಇದು ಸುಲಭವಾಗಿರಲಿಲ್ಲ, ಪಾಲಕರಾಗಬೇಕೆಂಬ ನಮ್ಮ ಬಯಕೆ ಪ್ರತಿ ಅಡಚಣೆಯನ್ನು ಸೋಲಿಸಿ, ಗೆಲ್ಲುವು ಸಾಧಿಸಿದೆ. ನೂತನ ಪ್ರಪಂಚಕ್ಕೆ ಪರಿಚಯಿಸಲು ಅವನಿಗೆ ನಾಮಕರಣ ಮಾಡಿದ ದಿನವನ್ನು ಒಳ್ಳೆಯದ ದಿನ ಎಂದು ಭಾವಿಸುತ್ತೇವೆ ಎಂದು ಛೇಟ್ರಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಜೂನ್‌ನಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಟೂರ್ನಿಯ ಪಂದ್ಯದಲ್ಲಿ ಭಾರತದ ಪರ ಗೆಲುವಿನ ಗೋಲು ಸಿಡಿಸಿದ ಸುನೀಲ್ ಛೇಟ್ರಿ ಬಳಿಕ ಚೆಂಡನ್ನು ತನ್ನ ಜೆರ್ಸಿಯ ಒಳಗೆ ಇಟ್ಟುಕೊಳ್ಳುವ ಮೂಲಕ ಗ್ಯಾಲರಿಯಲ್ಲಿದ್ದ ಮಡದಿ ಸೋನಮ್ ಭಟ್ಟಾಚಾರ್ಯಗೆ ವಿಶೇಷವಾಗಿ ಅಭಿನಂದಿಸಿ ಗುಡ್‌ನ್ಯೂಸ್ ಬಹಿರಂಗಪಡಿಸಿದರು. ಸೋನಮ್ ಚಪ್ಪಾಳೆ ತಟ್ಟುವ ಮೂಲಕ ನಗು ಚೆಲ್ಲಿದರು. ಛೇಟ್ರಿ-ಸೋನಮ್ 2017ರಲ್ಲಿ ವಿವಾಹವಾಗಿದ್ದರು.