ಮೆಲ್ಬೋರ್ನ್: ಭಾರತದ ಆಟಗಾರ ಸುಮಿತ್ ನಗಾಲ್ ವೃತ್ತೀಜಿವನದ ಅತಿದೊಡ್ಡ ಗೆಲುವಿನೊಂದಿಗೆ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೆಲಿಯನ್ ಓಪನ್ನಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ವಿಶ್ವ ನಂ. 27 ಕಜಾಕ್ಸ್ತಾನದ ಆಟಗಾರ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ ನೇರಸೆಟ್ಗಳಿಂದ ಗೆಲ್ಲುವ ಮೂಲಕ ನಗಾಲ್ ಮೆಲ್ಬೋರ್ನ್ ಪಾರ್ಕ್ನಲ್ಲಿ ಹಲವು ಭಾರತೀಯ ದಾಖಲೆಗಳನ್ನು ನಿರ್ಮಿಸಿದರು. ಅವರು ಕಳೆದ 35 ವರ್ಷಗಳಲ್ಲಿ ಗ್ರಾಂಡ್ ಸ್ಲಾಂ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಶ್ರೇಯಾಂಕಿತನನ್ನು ಸೋಲಿಸಿದ ಮೊದಲ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ. 2000ದ ಬಳಿಕ ಆಸ್ಟ್ರೆಲಿಯನ್ ಓಪನ್ನಲ್ಲಿ ಸಿಂಗಲ್ಸ್ ಪಂದ್ಯ ಗೆದ್ದ ಕೇವಲ 3ನೇ ಭಾರತೀಯರೂ ಆಗಿದ್ದಾರೆ.
ಅರ್ಹತಾ ಸುತ್ತಿನಿಂದ ಮೇಲೇರಿದ್ದ 26 ವರ್ಷದ ಸುಮಿತ್ ನಗಾಲ್ ಮಂಗಳವಾರ ನಡೆದ ಮೊದಲ ಸುತ್ತಿನ ಕಾದಾಟದಲ್ಲಿ 31ನೇ ಶ್ರೇಯಾಂಕಿತ ಬಬ್ಲಿಕ್ ವಿರುದ್ಧ 6-4, 6-2, 7-6ರಿಂದ ಎರಡು ಗಂಟೆ 38 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. ವಿಶ್ವ ನಂ. 137 ಆಟಗಾರ ನಗಾಲ್ಗೆ ಇದು 2021ರ ಬಳಿಕ ಗ್ರಾಂಡ್ ಸ್ಲಾಂ ಪ್ರಧಾನ ಸುತ್ತಿನಲ್ಲಿ ಇದು ಮೊದಲ ಪಂದ್ಯವಾಗಿತ್ತು. 2ನೇ ಸುತ್ತಿನಲ್ಲಿ ಅವರು ವಿಶ್ವ ನಂ. 140 ಚೀನಾದ ಜುನ್ಚೆಂಗ್ ಶಾಂಗ್ ವಿರುದ್ಧ ಸೆಣಸಲಿದ್ದಾರೆ. 3ನೇ ಸುತ್ತಿಗೇರಿದರೆ ವಿಶ್ವ ನಂ. 2 ಸ್ಪೇನ್ ತಾರೆ ಕಾಲೋರ್ಸ್ ಅಲ್ಕರಾಜ್ ಸವಾಲು ಎದುರಾಗುವ ನಿರೀಕ್ಷೆ ಇದೆ.
1989ರಲ್ಲಿ ಕೊನೆಯದಾಗಿ ರಮೇಶ್ ಕೃಷ್ಣನ್ ಗ್ರಾಂಡ್ ಸ್ಲಾಂನಲ್ಲಿ ಶ್ರೇಯಾಂಕಿತ ಆಟಗಾರನನ್ನು ಮಣಿಸಿದ ಭಾರತೀಯ ಎನಿಸಿದ್ದರು. ರಮೇಶ್ ಕೃಷ್ಣ ಆಸ್ಟ್ರೆಲಿಯನ್ ಓಪನ್ನಲ್ಲೇ ಆಗಿನ ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್ ಸ್ವೀಡನ್ನ ಮ್ಯಾಟ್ಸ್ ವಿಲಾಂಡರ್ಗೆ ಸೋಲುಣಿಸಿದ್ದರು. ನಗಾಲ್ 2019ರ ಯುಎಸ್ ಓಪನ್ನಲ್ಲಿ ಗ್ರಾಂಡ್ ಸ್ಲಾಂಗೆ ಪದಾರ್ಪಣೆ ಮಾಡಿದಾಗ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ವಿರುದ್ಧ ಮೊದಲ ಸೆಟ್ ಗೆದ್ದು ಗಮನಸೆಳೆದಿದ್ದರು. ಬಳಿಕ 2020ರ ಆವೃತ್ತಿಯಲ್ಲಿ ಅವರು ಗ್ರಾಂಡ್ ಸ್ಲಾಂ ಪ್ರಧಾನ ಸುತ್ತಿನಲ್ಲಿ ಮೊದಲ ಗೆಲುವಿನ ಸಾಧನೆ ಮಾಡಿದ್ದರು.