ಸಿಡ್ನಿ: ಏಕದಿನ ವಿಶ್ವಕಪ್ ಆರಂಭಕ್ಕೆ ದಿನಗಣನೆಗೂ ಮುನ್ನವೇ ಆಸ್ಟ್ರೇಲಿಯಾ ತಂಡ ಹಿನ್ನಡೆ ಎದುರಿಸಿದೆ. ಸ್ಟಾರ್ ಆಟಗಾರರಾದ ಸ್ಟೀವನ್ ಸ್ಮಿತ್ ಹಾಗೂ ಮಿಚೆಲ್ ಸ್ಟಾರ್ಕ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿಯಲಿದ್ದು, ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್ ಅಂತ್ಯದಲ್ಲಿ ಆರಂಭವಾಗಲಿರುವ ಭಾರತ ವಿರುದ್ಧ ಸರಣಿಗೆ ಫಿಟ್ ಆಗುವ ವಿಶ್ವಾಸ ಹೊಂದಿದ್ದಾರೆ.
ಆಸೀಸ್ ತಂಡದ ಕಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಮಣಿಕಟ್ಟಿನ ಗಾಯದ ಸಮಸ್ಯೆಯಿಂದಾಗಿ ದ.ಆಫ್ರಿಕಾ ವಿರುದ್ಧ ಸರಣಿ ತಪ್ಪಿಸಿಕೊಂಡಿದ್ದು, ಸ್ಟೀವನ್ ಸ್ಮಿತ್‌ಗೆ ನಾಯಕತ್ವ ವಹಿಸಲಾಗಿತ್ತು. ಆದರೆ ಸ್ಟೀವನ್ ಸ್ಮಿತ್ ಎಡ ಮಣಿಕಟ್ಟಿನ ಸ್ನಾಯುರಜ್ಜು ಗಾಯಕ್ಕೆ ತುತ್ತಾಗಿದ್ದು ಸಂಪೂರ್ಣವಾಗಿ ಗುಣಮುಖರಾಗಲು 4 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ತಿಳಿಸಿದೆ. ಇನ್ನೂ ವಿಶ್ರಾಂತಿಯಲ್ಲಿರುವ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ತೊಡೆಸಂದು ನೋವಿನಿಂದ ಬಳಲುತ್ತಿದ್ದು ಭಾರತ ಪ್ರವಾಸಕ್ಕೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.
ಸ್ಟೀವನ್ ಸ್ಮಿತ್ ಬದಲಿಗೆ ಟಿ20 ತಂಡದಲ್ಲಿರುವ ವೇಗಿ ಸ್ಪೆನ್ಸರ್ ಜಾನ್ಸನ್ ಏಕದಿನಕ್ಕೂ ಆಯ್ಕೆಯಾಗಿದ್ದಾರೆ. ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಾಯಕನಾಗಿ ನೇಮಕಗೊಂಡಿದ್ದ ಮಿಚೆಲ್ ಮಾರ್ಷ್, ಐದು ಪಂದ್ಯಗಳ ಏಕದಿನ ಸರಣಿಯಲ್ಲೂ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ.