ನವದೆಹಲಿ: ಡೆಡ್ಲಿ ಕರೊನಾ ವೈರಸ್ ಸೋಂಕಿಗೆ ದೇಶದಲ್ಲಿ ಈಗಾಗಲೇ ಎರಡು ಜೀವಗಳು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 83ಕ್ಕೇರಿದೆ. ಸೋಂಕು ಮತ್ತಷ್ಟು ಹರಡದಿರಲು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜನರಿಗೆ ಅರಿವು ಮೂಡಿಸುವ ಪ್ರಯತ್ನಗಳಾಗುತ್ತಿದ್ದು, ಇದಕ್ಕೆ ಕೈಜೋಡಿಸಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಟ್ವೀಟ್ ಮೂಲಕ ಜನರಿಗೆ ಧೈರ್ಯ ತುಂಬಿದ್ದಾರೆ.
ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಬಲವಾಗಿ ಉಳಿದುಕೊಂಡು ಸ್ಪೋಟಗೊಂಡಿರುವ ಕರೊನಾ ವೈರಸ್ ವಿರುದ್ಧ ಹೋರಾಡಿ. ಸುರಕ್ಷಿತವಾಗಿ ಉಳಿಯಿರಿ, ಜಾಗೃತರಾಗಿರಿ ಮತ್ತು ರೋಗ ಬರದಂತೆ ತಡೆಯುವುದು ಚಿಕಿತ್ಸೆಗಿಂತಲೂ ಉತ್ತಮ ಎಂಬುದನ್ನು ಬಹು ಮುಖ್ಯವಾಗಿ ನೆನಪಿನಲ್ಲಿಡಿ. ಎಲ್ಲರೂ ರಕ್ಷಣೆಯ ಕಡೆಗೆ ಗಮನಕೊಂಡಿ ಎಂದು ವಿರಾಟ್ ಮನವಿ ಮಾಡಿದ್ದಾರೆ.
ಕೊಹ್ಲಿ ಟೀಮ್ ಮೇಟ್ ಕನ್ನಡಿಗ ಕೆ.ಎಲ್. ರಾಹುಲ್ ಕೂಡ ಕರೊನಾ ಭೀತಿ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸೋಂಕಿನ ಪರೀಕ್ಷಾ ಸಮಯದಲ್ಲಿ ಎಲ್ಲರೂ ಬಲವಾಗಿ ಉಳಿದುಕೊಂಡು ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಳ್ಳಿ. ಆರೋಗ್ಯ ಪರಿಣಿತರು ನೀಡುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿ ಮತ್ತು ಕರೊನಾ ವೈರಸ್ನಿಂದ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.
ದೇಶದೆಲ್ಲೆಡೆ ಆವರಿಸಿರುವ ಕರೊನಾ ಭೀತಿ ಕ್ರಿಕೆಟ್ ಮೇಲೂ ಬೀರಿದ್ದು, ಇದರ ಪರಿಣಾಮವಾಗಿ ದಕ್ಷಿಣಾ ಆಫ್ರಿಕಾ ವಿರುದ್ಧ ಏಕದಿನ ಸರಣಿ ರದ್ದಾಗಿದ್ದಲ್ಲದೆ, ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.
ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ತಿಳಿಸಿದ್ದಾರೆ. (ಏಜೆನ್ಸೀಸ್)