ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ 14 ವರ್ಷದ ವಯೋಮಿತಿ ಒಳಗಿನ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡ. 
ಕ್ರೀಡೆ

ರಾಜ್ಯಮಟ್ಟದ ಫುಟ್ಬಾಲ್: ಚಿಕ್ಕಮಗಳೂರು, ಶಿವಮೊಗ್ಗ ಚಾಂಪಿಯನ್

ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ಸುಂದರ್ ಸಿಂಗ್ ಸ್ಮರಣಾರ್ಥ ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಗ್ರಾಸ್‌ರೂಟ್ ಫುಟ್ಬಾಲ್ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ 12 ಮತ್ತು 14 ವರ್ಷದೊಳಗಿನ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕ್ರಮವಾಗಿ ಚಿಕ್ಕಮಗಳೂರು ಫುಟ್ಬಾಲ್ ಅಸೋಸಿಯೇಶನ್ ಮತ್ತು ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡಗಳು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡವು.

ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ 12 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. 12 ವರ್ಷದೊಳಗಿನವರ ಫೈನಲ್ ಪಂದ್ಯದಲ್ಲಿ ಚಿಕ್ಕಮಗಳೂರು ಫುಟ್ಬಾಲ್ ಅಸೋಸಿಯೇಶನ್ ತಂಡವು ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡದ ವಿರುದ್ಧ ಜಯಿಸಿ ಪ್ರಥಮ ಬಹುಮಾನ ಪಡೆಯಿತು. ಈ ಮೂಲಕ ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡವು ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿತು. ಶಿವಮೊಗ್ಗದ ಕಾಸ್ಮೋಸ್ ತಂಡವು ತೃತೀಯ ಸ್ಥಾನ ಪಡೆಯಿತು.
14 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡವು ಚಿತ್ರದುರ್ಗ ತಂಡ ವಿರುದ್ಧ ಜಯ ಸಾಧಿಸಿತು. ಇದರೊಂದಿಗೆ ಚಿತ್ರದುರ್ಗ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡರೆ, ಚಿಕ್ಕಮಗಳೂರು ಫುಟ್ಬಾಲ್ ತಂಡವು ತೃತೀಯ ಸ್ಥಾನ ಪಡೆಯಿತು. ಸುಂದರ್ ಸಿಂಗ್ ಅಕಾಡೆಮಿ ತರಬೇತುದಾರರಾದ ದೀಪಕ್ ಸಿಂಗ್, ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಿರಿಯ ತರಬೇತಿದಾರ ನಾದನ್, ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡದ ತರಬೇತುದಾರ ಸುನಿಲ್ ಡಿಸೋಜ ಹಾಗೂ ಜೈ ಭಾರತ್ ಎಫ್‌ಸಿ ತಂಡದ ತರಬೇತುದಾರ ರಾಮಣ್ಣ ಪಂದ್ಯಾವಳಿಯ ಉಸ್ತುವಾರಿ ವಹಿಸಿದ್ದರು.