ಬೆಂಗಳೂರು: ಆಗಸ್ಟ್ 11ರಿಂದ 27ರವರೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಗೆ ಪೂರ್ವಭಾವಿಯಾಗಿ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ಖಾಸಗಿ ಹೋಟೆಲ್ ನಡೆಯಲಿದೆ. ಸರಿಸುಮಾರು ಸಾವಿರ ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಸಲಿದ್ದಾರೆ. ಈ ಬಾರಿ ಆರ್ಸಿಬಿ ತಂಡದ ಐಪಿಎಲ್ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದ್ದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಕಳೆದ ಆವೃತ್ತಿಯಲ್ಲಿ ಸಿಕ್ಸರ್ ಮಳೆ ಸುರಿಸಿದ್ದ ಅಭಿನವ್ ಮನೋಹರ್, ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಹಾಗೂ ಚೇತನ್ ಎಲ್ಆರ್ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಪಡೆಯುವ ನಿರೀಕ್ಷೆ ಇದೆ.
ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್, ರನ್ನರ್ಅಪ್ ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮಂಗಳೂರು ಡ್ಯ್ರಾಗನ್ಸ್ ಫ್ರಾಂಚೈಸಿಗಳ ನಡುವೆ ಆಟಗಾರರ ಖರೀದಿಗೆ ಪೈಪೋಟಿ ಏರ್ಪಡಲಿದೆ. ಹರಾಜಿಗೆ ಸಾವಿರ ಸನಿಹ ಆಟಗಾರರು ಹೆಸರು ನೋಂದಾಯಿಸಿದ್ದು, ಫ್ರಾಂಚೈಸಿಗಳ ಆಸಕ್ತಿ ಹಾಗೂ ಆದ್ಯತೆಯ ಮೇರೆಗೆ ಪಟ್ಟಿ ಪರಿಷ್ಕರಿಸುವ ಸಾಧ್ಯತೆಗಳಿವೆ. ಹರಾಜಿಗೆ ನೋಂದಾಯಿಸಲ್ಪಟ್ಟಿರುವ ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿದೆ. ಹುಬ್ಬಳ್ಳಿ ಟೈಗರ್ಸ್ ತಂಡ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದು, ಎ ಕೆಟಗರಿಯಲ್ಲಿ ಟೀಮ್ ಇಂಡಿಯಾ ಮತ್ತು ಐಪಿಎಲ್ನಲ್ಲಿ ಆಡಿರುವ ಆಟಗಾರರಿದ್ದಾರೆ. ಅಂದರೆ ಕಳೆದ ಆವೃತ್ತಿಯ 2ನೇ ಗರಿಷ್ಠ ರನ್ ಸ್ಕೋರರ್ ಅಭಿನವ್ ಮನೋಹರ್, ಮನೀಷ್ ಪಾಂಡೆ, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ. ಗೌತಮ್ ಸ್ಥಾನ ಪಡೆದಿದ್ದಾರೆ.
ದೇಶೀಯ ಟೂರ್ನಿಗಳಲ್ಲಿ (ವಿಜಯ್ ಹಜಾರೆ, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಆಡಿರುವ ಆಟಗಾರರು ಬಿ ಕೆಟಗರಿಯಲ್ಲಿದ್ದು, ಕಳೆದ ಆವೃತ್ತಿಯ ದುಬಾರಿ ಆಟಗಾರ ಚೇತನ್ ಎಲ್ಆರ್, ವಿಧ್ಯಾದರ್ ಪಾಟೀಲ್, ನಿಕಿನ್ ಜೋಸ್, ಕೆವಿ ಸಿದ್ದಾರ್ಥ್, ದರ್ಶನ್ ಎಂಬಿ, ರೋಹನ್ ಪಾಟೀಲ್ ಪ್ರಮುಖರು. ಜೂನಿಯರ್ ವಿಭಾಗದ ಸಿ ಕೆಟಗರಿಯಲ್ಲಿ ಎಲ್ಆರ್ ಕುಮಾರ್, ಸಮರ್ಥ ನಾಗಾರಾಜ್, ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಹರ್ಷಿಲ್ ಧರ್ಮಾನಿ ಅವರಂಥ ಉದಯೋನ್ಮುಖ ತಾರೆಗಳಿದ್ದಾರೆ. ಕೆಎಸ್ಸಿಎಯಲ್ಲಿ ಹೆಸರು ನೋಂದಾಯಿಸಿರುವ ಆಟಗಾರರು ಡಿ ಕೆಟಗರಿಯಲ್ಲಿ ಇರಲಿದ್ದಾರೆ.
ಹರಾಜಿನಲ್ಲಿ ಪ್ರತಿ ಫ್ರಾಂಚೈಸಿ ಕನಿಷ್ಠ 16ರಿಂದ ಗರಿಷ್ಠ 18 ಆಟಗಾರರನ್ನು ಒಳಗೊಂಡ ತಂಡವನ್ನು ಕಟ್ಟಲು ಅವಕಾಶವಿದೆ. ಪ್ರತಿ ಕೆಟಗರಿಯಿಂದ ಕನಿಷ್ಠ ಇಬ್ಬರು ಆಟಗಾರರನ್ನುಫ್ರಾಂಚೈಸಿಗಳು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ಆಟಗಾರರ ರಿಟೇನ್ ಬಳಿಕ ತಲಾ 50 ಲಕ್ಷ ರೂ. ಬಜೆಟ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ₹41.50 ಲಕ್ಷ, ಮಂಗಳೂರು ಡ್ರಾಗನ್ಸ್ ₹37.70 ಲಕ್ಷ, ಮೈಸೂರು ವಾರಿಯರ್ಸ್ ₹36.50 ಲಕ್ಷ, ಶಿವಮೊಗ್ಗ ಲಯನ್ಸ್ ₹30.80 ಲಕ್ಷ, ಬೆಂಗಳೂರು ಬ್ಲಾಸ್ಟರ್ಸ್ ₹28.40 ಲಕ್ಷ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ₹24.05 ಲಕ್ಷ ಉಳಿಸಿಕೊಂಡಿವೆ.
*ಹರಾಜು ಪ್ರಕ್ರಿಯೆ ಆರಂಭ: ಬೆಳಗ್ಗೆ 10.00
*ನೇರಪ್ರಸಾರ: ಫ್ಯಾನ್ ಕೋಡ್
ಸ್ಟಾರ್ ಆಟಗಾರರು
ಮನೀಷ್ ಪಾಂಡೆ, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಅಭಿನವ್ ಮನೋಹರ್, ಚೇತನ್ ಎಲ್.ಆರ್, ಕೆ.ಗೌತಮ್, ಅನೀಶ್ ಕೆವಿ, ನಿಕಿನ್ ಜೋಸ್, ವಿದ್ವತ್ ಕಾವೇರಪ್ಪ, ರೋನಿತ್ ಮೋರೆ.
ರಿಟೇನ್ ಆಟಗಾರರು:
ಮೈಸೂರು ವಾರಿಯರ್ಸ್: ಕರುಣ್ ನಾಯರ್ (6.8 ಲಕ್ಷ ರೂ.), ಪ್ರಸಿದ್ಧ ಕೃಷ್ಣ (2 ಲಕ್ಷ ರೂ.), ಕಾರ್ತಿಕ್ ಎಸ್ಯು (50 ಸಾವಿರ ರೂ.), ಕಾರ್ತಿಕ್ ಸಿಎ (4.2 ಲಕ್ಷ ರೂ.).
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್ (14 ಲಕ್ಷ ರೂ.), ಶುಭಾಂಗ್ ಹೆಗ್ಡೆ (4.3 ಲಕ್ಷ ರೂ.), ಸೂರಜ್ ಅಹುಜಾ (1 ಲಕ್ಷ ರೂ.), ನವೀನ್ ಎಂಜಿ(2.3 ಲಕ್ಷ ರೂ.)
ಹುಬ್ಬಳ್ಳಿ ಟೈಗರ್ಸ್ : ಮನ್ವಂತ್ ಕುಮಾರ್ ಎಲ್ (1 ಲಕ್ಷ ರೂ.), ಶ್ರೀಜಿತ್ ಕೆಎಲ್ (2.1 ಲಕ್ಷ ರೂ.), ಕಾರ್ಯಪ್ಪ ಕೆಸಿ (4.2 ಲಕ್ಷ ರೂ), ಕಾರ್ತಿಕೇಯ ಕೆಪಿ (1.2 ಲಕ್ಷ ರೂ.)
ಗುಲ್ಬರ್ಗಾ ಮಿಸ್ಟಿಕ್ಸ್: ಲವನೀತ್ ಸಿಸೋಡಿಯಾ (7.2 ಲಕ್ಷ ರೂ.), ಪ್ರವಿಣ್ ದುಬೆ (6.8 ಲಕ್ಷ ರೂ.), ವೈಶಾಕ್ (8.8 ಲಕ್ಷ ರೂ.), ಸ್ಮರಣ್ ಆರ್. (3.15 ಲಕ್ಷ ರೂ.)
ಶಿವಮೊಗ್ಗ ಲಯನ್ಸ್: ಕೌಶಿಕ್ ವಿ (5.9 ಲಕ್ಷ ರೂ.), ನಿಹಾಲ್ ಉಳ್ಳಾಲ (2.1 ಲಕ್ಷ ರೂ.), ಹಾರ್ದಿಕ್ ರಾಜ್ (5.8 ಲಕ್ಷ ರೂ.), ಅವಿನಾಶ್ ಡಿ(5.4 ಲಕ್ಷ ರೂ.)
ಮಂಗಳೂರು ಡ್ರಾಗನ್ಸ್: ಅಭಿಲಾಷ್ ಶೆಟ್ಟಿ (6.3 ಲಕ್ಷ ರೂ.), ಮ್ಯಾಕ್ನೀಲ್ ನೊರೊನ್ಹಾ (5 ಲಕ್ಷ ರೂ.), ಪಾರಸ್ ಗುರ್ಬಕ್ಷ್ ಆರ್ಯ (0.5 ಲಕ್ಷ ರೂ.), ಲೋಚನ್ ಎಸ್ ಗೌಡ (50 ಸಾವಿರ ರೂ.)