ನವದೆಹಲಿ: ಸಾಮಾನ್ಯವಾಗಿ ಏಪ್ರಿಲ್-ಮೇನಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿಯ ವೇಳೆ ಶಾಲಾ-ಕಾಲೇಜುಗಳ ರಜಾ ದಿನಗಳಿಂದಾಗಿ ಹೆಚ್ಚಿನ ವೀಕ್ಷಕರು ಮತ್ತು ಆ ಮೂಲಕವಾಗಿ ಹೆಚ್ಚಿನ ಜಾಹೀರಾತು ಬೇಡಿಕೆ ಸಿಗುತ್ತಿತ್ತು. ಈ ಬಾರಿ ಐಪಿಎಲ್ ಟೂರ್ನಿ ಸೆಪ್ಟೆಂಬರ್-ಅಕ್ಟೋಬರ್-ನವೆಂಬರ್ ಸಮಯದಲ್ಲಿ ನಡೆಯುತ್ತಿದ್ದು, ಇದು ನವರಾತ್ರಿ, ದೀಪಾವಳಿಯಂಥ ಪ್ರಮುಖ ಹಬ್ಬದ ಋತುವಾಗಿದೆ. ಹೀಗಾಗಿ ಇದರ ಲಾಭವೆತ್ತಲು ಸಜ್ಜಾಗಿರುವ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್, ಐಪಿಎಲ್ 13ನೇ ಆವೃತ್ತಿಯ ಜಾಹೀರಾತುಗಳಿಂದ 2 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಆದಾಯದ ನಿರೀಕ್ಷೆಯಲ್ಲಿದೆ.
ಕಳೆದ ಐಪಿಎಲ್ ವೇಳೆ 2 ಸಾವಿರ ಕೋಟಿ ರೂ. ಲಾಭ ಪಡೆದುಕೊಂಡಿದ್ದ ಸ್ಟಾರ್ ಸ್ಪೋರ್ಟ್ಸ್, ಈ ವರ್ಷ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯ ನಡುವೆಯೂ ಅದಕ್ಕಿಂತ ಹೆಚ್ಚಿನ ಆದಾಯ ಗಳಿಸುವ ಹಂಬಲದಲ್ಲಿದೆ. ಸ್ಟಾರ್ ಸ್ಪೋರ್ಟ್ಸ್ ಈ ಬಾರಿ ಜಾಹೀರಾತುಗಳಿಗೆ ಪ್ರತಿ 10 ಸೆಕೆಂಡ್‌ಗೆ 12.5 ಲಕ್ಷ ರೂ.ನಂತೆ ಚಾರ್ಜ್ ಮಾಡಲಿದೆ. ಇದು ಕಳೆದ ವರ್ಷಕ್ಕಿಂತ ಶೇ. 10ರಷ್ಟು ಅಧಿಕವಾಗಿದೆ. ಸ್ಟಾರ್ ಸ್ಪೋರ್ಟ್ಸ್ 2017ರಲ್ಲಿ 5 ವರ್ಷಗಳಿಗೆ 16,347.5 ಕೋಟಿ ರೂಪಾಯಿ ಮೊತ್ತಕ್ಕೆ ಐಪಿಎಲ್ ಪಂದ್ಯಗಳ ನೇರಪ್ರಸಾರದ ಹಕ್ಕು ಪಡೆದುಕೊಂಡಿತ್ತು.
200ಕ್ಕೂ ಅಧಿಕ ಬ್ರಾಂಡ್‌ಗಳು ಪೈಪೋಟಿಯಲ್ಲಿವೆ
ಐಪಿಎಲ್ ವೇಳೆ ಜಾಹೀರಾತು ನೀಡುವುದಕ್ಕಾಗಿ 200ಕ್ಕೂ ಅಧಿಕ ಬ್ರಾಂಡ್‌ಗಳು ತುದಿಗಾಲಲ್ಲಿ ನಿಂತಿವೆ. ಹಬ್ಬದ ಋತು ಆಗಿರುವುದರಿಂದ ದ್ವಿಚಕ್ರ ವಾಹನ, ಕಾರು, ಉಡುಪಿನ ಬ್ರಾಂಡ್‌ಗಳೂ ಪೈಪೋಟಿಯಲ್ಲಿವೆ.
ಆನ್‌ಲೈನ್ ಕಂಪನಿಗಳೇ ಅಧಿಕ!
ಕರೊನಾ ಕಾಲದಲ್ಲಿ ಈಗ ವರ್ಕ್ ಫ್ರಂ ಹೋಮ್, ಆನ್‌ಲೈನ್ ಶಿಕ್ಷಣ ಸೇರಿದಂತೆ ಆನ್‌ಲೈನ್ ವ್ಯವಹಾರಗಳೇ ಹೆಚ್ಚಾಗಿವೆ. ಈ ನಡುವೆ ಆನ್‌ಲೈನ್ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿಯಾದ ‘ಡ್ರೀಮ್11’ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿರುವುದು ಸೇರಿದಂತೆ ಈ ಬಾರಿ ಐಪಿಎಲ್ ಪ್ರಾಯೋಜಕತ್ವ ಮತ್ತು ಜಾಹೀರಾತುಗಳಲ್ಲಿ ಆನ್‌ಲೈನ್ ಕಂಪನಿಗಳೇ ಹೆಚ್ಚಿನ ಪೈಪೋಟಿಗೆ ಇಳಿದಿವೆ. ಆನ್‌ಲೈನ್ ಗೇಮ್, ಆನ್‌ಲೈನ್ ಶಿಕ್ಷಣ ಆ್ಯಪ್ ಕಂಪನಿಗಳೇ ಐಪಿಎಲ್ ಪ್ರಾಯೋಜಕತ್ವ, ಜಾಹೀರಾತುಗಳಿಗೆ ಹೆಚ್ಚಿನ ಆಸಕ್ತಿ ತೋರಿವೆ.
ಬಾಲಿವುಡ್ ಪೈಪೋಟಿ ಇಲ್ಲ?
ಸಾಮಾನ್ಯವಾಗಿ ಏಪ್ರಿಲ್-ಮೇನಲ್ಲಿ ಐಪಿಎಲ್ ನಡೆಯುತ್ತಿದ್ದಾಗ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳೂ ಬಿಡುಗಡೆಯಾಗುತ್ತಿದ್ದವು. ಆದರೆ ಸದ್ಯ ಚಿತ್ರಮಂದಿರಗಳು ಯಾವಾಗ ತೆರೆಯಲಿವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಬಾರಿ ಐಪಿಎಲ್‌ಗೆ ಬಾಲಿವುಡ್ ಸಿನಿಮಾಗಳ ಸವಾಲು ಎದುರಾಗದು ಮತ್ತು ವೀಕ್ಷಕರ ಸಂಖ್ಯೆಯೂ ಹೆಚ್ಚಿರುತ್ತದೆ ಎನ್ನಲಾಗಿದೆ.