ಐರನ್ಮ್ಯಾನ್ ರೇಸ್ ಪೂರ್ಣಗೊಳಿಸಿದ ಕನ್ನಡಿಗ ಶ್ರೀನಿವಾಸ್ ಪ್ರಭು
ಬೆಂಗಳೂರು: ಕರ್ನಾಟಕದ ಶ್ರೀನಿವಾಸ್ ಪ್ರಭು ಮುಂಡ್ಕೂರು ನವೆಂಬರ್ 9ರಂದು (ಭಾನುವಾರ) ಗೋವಾದ ಮಿರಾಮರ್ನಲ್ಲಿ ನಡೆದ ಐರನ್ಮ್ಯಾನ್ 70.3 ಟ್ರಯಾಥ್ಲಾನ್ ಸ್ಪರ್ಧೆಯನ್ನು (Ironman 70.3 Triathlon) ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ವಿಶ್ವದ ಅತ್ಯಂತ ಕಠಿಣ ಕ್ರೀಡೆಗಳಲ್ಲಿ ಒಂದಾದ ಈ ಸ್ಪರ್ಧೆಯಲ್ಲಿ ಬೆಂಗಳೂರಿನ 26 ವರ್ಷದ ಶ್ರೀನಿವಾಸ್ ಪ್ರಭು, ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿರುವುದು ಗಮನಾರ್ಹ. ದೈಹಿಕ ಕ್ಷಮತೆಗೆ ಅತ್ಯಂತ ಸವಾಲುದಾಯಕವಾಗಿರುವ ಐರನ್ಮ್ಯಾನ್ 70.3 ಟ್ರಯಾಥ್ಲಾನ್ ಸ್ಪರ್ಧೆಯು ಸಮುದ್ರದಲ್ಲಿ 1.9 ಕಿಲೋಮೀಟರ್ ಈಜು, 90 ಕಿಲೋಮೀಟರ್ ಸೈಕ್ಲಿಂಗ್ ಮತ್ತು 21.1 ಕಿಲೋಮೀಟರ್ (Run) ಓಟವನ್ನು ಒಳಗೊಂಡಿರುತ್ತದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಶ್ರೀನಿವಾಸ್ ಪ್ರಭು ಅವರು ಈ ಹಿಂದೆ ಒಲಿಂಪಿಕ್ ಟ್ರಯಾಥ್ಲಾನ್ ಮತ್ತು ಸ್ಪ್ರಿಂಟ್ ಟ್ರಯಾಥ್ಲಾನ್ನಲ್ಲಿ ಭಾಗವಹಿಸಿದ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಸ್ಪರ್ಧೆ ಮುಗಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದರು. ಇದೀಗ ಅದಕ್ಕಿಂತಲೂ ಒಂದು ಹಂತ ಕಠಿಣವಾದ ಐರನ್ಮ್ಯಾನ್ 70.3 ಟ್ರಯಾಥ್ಲಾನ್ನಲ್ಲೂ ಅದೇ ಸಾಧನೆ ಪುನರಾವರ್ತಿಸಿರುವುದು ವಿಶೇಷವಾಗಿದೆ. ಶ್ರೀನಿವಾಸ್ ಪ್ರಭು ಅವರು ಮುಂಡ್ಕೂರಿನ ಶಿವಶಂಕರ್ ಪ್ರಭು ಮತ್ತು ಶುಭಲಕ್ಷ್ಮೀ ದಂಪತಿಯ ಪುತ್ರರಾಗಿದ್ದಾರೆ. ಬೆಂಗಳೂರಿನ ಆರ್ವಿ ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಅವರು, ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.
ಈ ಟ್ರಯಥ್ಲಾನ್‌ಗಳು ದೈಹಿಕ ಸಹಿಷ್ಣುತೆಯನ್ನು ಮಾತ್ರವಲ್ಲದೆ, ಮಾನಸಿಕ ಶಕ್ತಿ, ಶಿಸ್ತು ಮತ್ತು ಕಾರ್ಯತಂತ್ರದ ವೇಗವನ್ನು ಸಹ ಬಯಸುತ್ತವೆ. ಇದು ವಿಶ್ವದ ಅತ್ಯಂತ ಸವಾಲಿನ ಮತ್ತು ಪ್ರತಿಷ್ಠಿತ ದೈಹಿಕ ಸಹಿಷ್ಣುತೆಯ ಸ್ಪರ್ಧೆಗಳಲ್ಲಿ ಒಂದಾಗಿದೆ.
ಸಂಸದ ತೇಜಸ್ವಿಸೂರ್ಯ ಮತ್ತು ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಇದೇ ಕೂಟದಲ್ಲಿ ಐರನ್ಮ್ಯಾನ್ 70.3 ಟ್ರಯಾಥ್ಲಾನ್ ರೇಸ್ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.