ಕ್ರೀಡೆ

ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ವಾಪಸಾದ ಆಸ್ಟ್ರೇಲಿಯಾದ ಕೋಚ್..!

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಟಾಮ್ ಮೂಡಿ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 55 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸನ್‌ರೈಸರ್ಸ್‌ ತಂಡಕ್ಕೆ 7 ವರ್ಷಗಳ ಕಾಲ (2019 ರವರೆಗೂ) ಕೋಚ್ ಆಗಿದ್ದರು. 2016ರಲ್ಲಿ ತಂಡ ಚಾಂಪಿಯನ್ ಆಗುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಜುಲೈನಲ್ಲಿ ಮೂಡಿ ಬದಲಿಗೆ ಇಂಗ್ಲೆಂಡ್ ವಿಶ್ವಕಪ್ ವಿಜೇತ ತಂಡದ ಕೋಚ್ ಆಗಿದ್ದ ಟ್ರೇವೊರ್ ಬೈಲಿಸ್ ಅವರನ್ನು ತಂಡದ ಮುಖ್ಯಕೋಚ್ ಆಗಿ ನೇಮಿಸಲಾಗಿತ್ತು.

ತಂಡದ ಕ್ರಿಕೆಟ್ ನಿರ್ದೇಶಕರನ್ನಾಗಿ ಟಾಮ್ ಮೂಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸನ್‌ರೈಸರ್ಸ್‌ ತಂಡದ ಟ್ವಿಟರ್‌ನಲ್ಲಿ ಪ್ರಕಟಿಸಲಾಗಿದೆ. ಟಾಮ್ ಮೂಡಿ ತಂಡದ ಕೋಚ್ ಆಗಿದ್ದ 7 ವರ್ಷಗಳಲ್ಲಿ 5 ಬಾರಿ ಸನ್‌ರೈಸರ್ಸ್‌ ಪ್ಲೇಆಫ್ ಹಂತಕ್ಕೇರಿತ್ತು.

ಪ್ರಸಕ್ತ ವರ್ಷ ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶರಣಾಗಿತ್ತು. ಎಲಿಮಿನೇಟರ್ ಹೋರಾಟದಲ್ಲಿ ಆರ್‌ಸಿಬಿ ಎದುರು ಜಯ ದಾಖಲಿಸಿತ್ತು.