ಪ್ಯಾರಿಸ್: ಸತತ ಎರಡು ಒಲಿಂಪಿಕ್ಸ್ ಕಂಚಿನ ಪದಕದೊಂದಿಗೆ 18 ವರ್ಷಗಳ ಹಾಕಿ ವೃತ್ತಿಬದುಕಿಗೆ ಸ್ಮರಣೀಯ ವಿದಾಯ ಹೇಳಿದ ಭಾರತ ಪುರುಷರ ಹಾಕಿ ತಂಡದ ಗೋಲು ಕೀಪರ್ ಪಿಆರ್ ಶ್ರೀಜೇಶ್, ಭಾನುವಾರ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭಕ್ಕೆ ಭಾರತದ ತಂಡದ ಪುರುಷ ಧ್ವಜಧಾರಿಯಾಗಿ ಆಯ್ಕೆಯಾಗಿದ್ದಾರೆ. ಪಿಸ್ತೂಲ್ ಶೂಟಿಂಗ್‌ನಲ್ಲಿ 2 ಪದಕ ಜಯಿಸಿರುವ ಸ್ಟಾರ್ ಶೂಟರ್ ಮನು ಭಾಕರ್ ಮಹಿಳಾ ಧ್ವಜಧಾರಿ ಎನಿಸಿದ್ದಾರೆ.
ಶ್ರೀಜೇಶ್ ಅವರನ್ನು ಆಯ್ಕೆ ಮಾಡುವ ಮುನ್ನ ಜಾವೆಲಿನ್ ಥ್ರೋನಲ್ಲಿ ರಜತ ಪದಕ ಗೆದ್ದ ನೀರಜ್ ಚೋಪ್ರಾ ಅವರೊಂದಿಗೆ ಮಾತನಾಡಲಾಯಿತು. ‘ಮೇಡಂ, ನೀವು ನನ್ನನ್ನು ಕೇಳದಿದ್ದರೂ, ನಾನು ಶ್ರೀಜೇಶ್ ಭಾಯ್ (ಅಣ್ಣ) ಹೆಸರನ್ನು ಸೂಚಿಸುತ್ತಿದ್ದೆ’ ಎಂದು ಹೇಳಿದರು. ಇದು ಶ್ರೀಜೇಶ್ ಅವರ ಬಗ್ಗೆ ನೀರಜ್ಗಿರುವ ಅಪಾರ ಗೌರವ ಮತ್ತು ಭಾರತೀಯ ಕ್ರೀಡೆಗೆ ಅವರ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಮುಖ್ಯಸ್ಥೆ ಪಿಟಿ ಉಷಾ ತಿಳಿಸಿದ್ದಾರೆ. ಕೂಟದ ಸಮಾರೋಪ ಸಮಾರಂಭದಲ್ಲಿ ಪಿಸ್ತೂಲ್ ಶೂಟರ್ ಮನು ಭಾಕರ್ ಅವರೊಂದಿಗೆ ಜಂಟಿ ಧ್ವಜಧಾರಿಯಾಗಿ ಹಾಕಿ ಗೋಲುಕೀಪರ್ ಪಿಆರ್ ಶ್ರೀಜೇಶ್ ಭಾರತ ತಂಡವನ್ನು ಪ್ರತಿನಿಧಿಸಲಿದ್ದು, ಕಳೆದ ವರ್ಷ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿಯೂ ಶ್ರೀಜೇಶ್ ಧ್ವಜಧಾರಿಯಾಗಿದ್ದರು.