ಕ್ರೀಡೆ

ಒಲಿಂಪಿಕ್ಸ್ ಚಿಂತೆ ಇಲ್ಲ, ಅಥ್ಲೀಟ್ ಹಿಮಾ ದಾಸ್ ಈಗ ಕ್ರಿಕೆಟ್​ನಲ್ಲಿ ಮಗ್ನ...!

ನವದೆಹಲಿ: ಕರೊನಾ ವೈರಸ್​ ಭೀತಿಯಿಂದಾಗಿ ಜಾಗತಿಕ ಕ್ರೀಡಾ ಚಟುವಟಿಕೆಗಳೇ ಸಂಪೂರ್ಣ ಅಸ್ತವ್ಯಸ್ಥಗೊಂಡಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಜಪಾನ್​ನ ಟೋಕಿಯೊ ನಗರದಲ್ಲಿ ಒಲಿಂಪಿಕ್​ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭಗೊಳ್ಳಬೇಕಿತ್ತು. ಪ್ರತಿಷ್ಠಿತ ಕ್ರೀಡಾಕೂಟ ಒಂದು ವರ್ಷ ಮುಂದಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಅಥ್ಲೀಟ್​ಗಳ ಗಮನ ಇದೀಗ ಅರ್ಹತಾ ಸುತ್ತಿನತ್ತ ನೆಟ್ಟಿದೆ. ಆದರೆ, ಭಾರತದ ಯುವ ಓಟಗಾರ್ತಿ ಹಿಮದಾಸ್​ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಪಟಿಯಾಲದ ಎನ್​ಐಎಸ್​ನಲ್ಲಿರುವ ಹಿಮಾದಾಸ್​, ಸೈಕ್ಲಿಂಗ್​ ಮಾಡುವುದು, ಕ್ರಿಕೆಟ್​ ಆಡುವತ್ತ ಗಮನಹರಿಸಿದ್ದಾರೆ.

ಕೋವಿಡ್​-19ರಿಂದಾಗಿ ಸದ್ಯದಲ್ಲಿ ಯಾವುದೇ ಸ್ಪರ್ಧೆಗಳು ಇಲ್ಲ. ಇದಕ್ಕಾಗಿ ಈಗಲೇ ಕಠಿಣ ತರಬೇತಿ ಪಡೆಯುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಸಾಧ್ಯವಾದಷ್ಟು ತರಬೇತಿ ಪಡೆಯುತ್ತಿದ್ದೇನೆ ಎನ್ನುತ್ತಾರೆ ಹಿಮಾ ದಾಸ್​. ಬೆಳಗಿನ ವಾತಾವರಣ ಸಿಕ್ಕಾಪಟ್ಟೆ ಹೀಟ್​ ಇರುವುದರಿಂದ ಸೈಕ್ಲಿಂಗ್​ ಮಾಡುವುದು, ಕ್ರಿಕೆಟ್​ ಚೆಂಡಿನಲ್ಲಿ ಬೌಲಿಂಗ್​ ಮಾಡುವುದನ್ನು ರೂಡಿಸಿಕೊಂಡಿದ್ದೇನೆ. ಕೂಟದ ಬಗ್ಗೆ ಸ್ಪರ್ಧಾತ್ಮಕವಾಗಿ ಹಾಗೂ ಸಕರಾತ್ಮಕವಾಗಿ ಯೋಚಿಸುತ್ತೇನೆ. ಈಗಲೇ ಅವಸರದ ತರಬೇತಿ ಅವಶ್ಯಕತೆ ಇಲ್ಲ ಎನ್ನುತ್ತಾರೆ ಯುವ ಅಥ್ಲೀಟ್​ ಹಿಮಾ ದಾಸ್​. ಸಾಧ್ಯವಾದಷ್ಟು ಜೀವನವನ್ನು ಮನರಂಜನಾತ್ಮಕವಾಗಿ ಕಳೆಯಲು ಬಯಸುತ್ತೇನೆ ಎಂದು 400 ಮೀಟರ್​ ಓಟದ ವಿಶ್ವ ಜೂನಿಯರ್​ ಚಾಂಪಿಯನ್​ ಹಿಮಾ ದಾಸ್​ ಹೇಳುತ್ತಾರೆ.

ಟೋಕಿಯೊ ಒಲಿಂಪಿಕ್ಸ್​ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್​ 30ರವರೆಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಅಮಾನತುಗೊಳಿಸಲಾಗಿದೆ. 2 ವರ್ಷಗಳ ಹಿಂದೆ ಫಿನ್​ಲ್ಯಾಂಡ್​ನಲ್ಲಿ ನಡೆದ ವಿಶ್ವ ಜೂನಿಯರ್​ ಚಾಂಪಿಯನ್​ಷಿಪ್​ನ 400 ಮೀಟರ್​ ಓಟದಲ್ಲಿ ಸ್ವರ್ಣ ಗೆದ್ದಿದ್ದರು. ಬಳಿಕ ಗಾಯದ ಸಮಸ್ಯೆ ಎದುರಿಸಿದ ಹಿಮಾ ದಾಸ್​ 400 ಮೀಟರ್​ ಬದಲಿಗೆ 200 ಮೀಟರ್​ ಆಯ್ದುಕೊಂಡಿದ್ದಾರೆ. 2018ರ ಏಷ್ಯಾಡ್​ ಗೇಮ್ಸ್​ನಲ್ಲಿ 400 ಮೀಟರ್​ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರೆ, ಮಹಿಳೆಯರ 4/400 ಮೀಟರ್​ ರಿಲೇ ಹಾಗೂ 4/400 ಮಿಶ್ರ ರಿಲೇ ಓಟದಲ್ಲಿ ಸ್ವರ್ಣ ಗೆದ್ದ ತಂಡದ ಭಾಗವಾಗಿದ್ದರು.