ಕ್ರೀಡೆ

ಕ್ರೀಡಾಸ್ಪೂರ್ತಿ ದೇಶಪ್ರೀತಿಯ ಆತ್ಮಸಂಬಂಧ

ಕ್ರೀಡಾಸ್ಪೂರ್ತಿ, ದೇಶಪ್ರೀತಿ ಎರಡೂ ಬೇರೆಬೇರೆಯಂತೆ. ಆಟವನ್ನು ಆಟದಂತೆಯೇ ಆಡಬೇಕಂತೆ, ಕ್ರೀಡಾಂಗಣದೊಳಗೆ ದೇಶಭಕ್ತಿ ಪ್ರದರ್ಶನ ಸರಿಯಲ್ಲವಂತೆ... ನಮ್ಮದೇಶದಲ್ಲಿ ಕೆಲವರ ಮೈಯಲ್ಲೀಗ ಕ್ರೀಡಾಸ್ಪೂರ್ತಿ ಉಕ್ಕಿ ಹರಿಯುತ್ತಿದೆ! ಏಷ್ಯಾ ಕಪ್​ನಲ್ಲಿ ಭಾರತ ಪಾಲ್ಗೊಂಡಿದ್ದು ಸರಿಯಲ್ಲ, ನಾಯಕ ಸೂರ್ಯಕುಮಾರ್ ಯಾದವ್ ಆಪರೇಷನ್ ಸಿಂಧೂರ ಪರವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಕೆಲವರು ಕೊಂಕು ಮಾಡುತ್ತಿದ್ದಾರೆ.

ಏಷ್ಯಾ ಕಪ್​ನಲ್ಲಿ ಭಾರತ ಅಜೇಯವಾಗಿ ಚಾಂಪಿಯನ್ ಪಟ್ಟಕ್ಕೇರಿದೆ. ಪಾಕಿಸ್ತಾನವನ್ನು ಒಂದಲ್ಲ, ಎರಡಲ್ಲ, ಮೂರು ಬಾರಿ ಬಡಿದಟ್ಟಿ ದೇಶವಾಸಿಗಳ ಆತ್ಮಾಭಿಮಾನವನ್ನು ಹೆಚ್ಚಿಸಿದೆ. ಆದರೂ, ಪಾಕಿಸ್ತಾನದ ವಿರುದ್ಧ ಭಾರತ ಆಡಲೇಬಾರದಿತ್ತು ಎಂದು ಈಗಲೂ ಕೆಲವರು ವಾದಿಸುತ್ತಿದ್ದಾರೆ. ಆಡಿದ ಮೇಲೆ ಪಾಕಿಸ್ತಾನಿಗಳ ಕೈಕುಲುಕಲು ನಿರಾಕರಿಸಿದ್ದು ತಪು್ಪ, ಪಾಕಿಸ್ತಾನದ ವ್ಯಕ್ತಿಗಳಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದು ತಪು್ಪ... ಇತ್ಯಾದಿ ಆಕ್ಷೇಪಗಳು ಪುಂಖಾನುಪುಂಖವಾಗಿ ಸೋಷಿಯಲ್ ಮೀಡಿಯಾದಲ್ಲಿ ತುಂಬಿಕೊಂಡಿವೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ ಉಗ್ರರು ನಡೆಸಿದ ನರಮೇಧದ ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ಜತೆ ಎಲ್ಲ ರಾಜತಾಂತ್ರಿಕ, ವ್ಯಾವಹಾರಿಕ, ದ್ವಿಪಕ್ಷೀಯ ಸಂಬಂಧಗಳನ್ನು ಕಡಿದುಕೊಂಡಿದೆ. ಅದು ಸಹಜವೇ. ಶತ್ರುಗಳ ಜತೆ ಯಾರೂ ಕೊಡುವ-ತರುವ ಸಂಬಂಧ ಇರಿಸಿಕೊಳ್ಳುವುದಿಲ್ಲ. ಆದರೆ, ಏಷ್ಯಾ ಕಪ್​ನಲ್ಲೋ, ಡೇವಿಸ್ ಕಪ್​ನಲ್ಲೋ, ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್, ವಿಶ್ವ ಅಥ್ಲೆಟಿಕ್ಸ್ ಕೂಟಗಳಲ್ಲಿ ಭಾರತ- ಪಾಕ್ ಮುಖಾಮುಖಿ ಆಗುವ ಸಂದರ್ಭ ಬಂದರೆ ಹಿಂದೆ ಸರಿಯುವುದು ಪಲಾಯನ ಎನಿಸಿಕೊಳ್ಳುತ್ತದೆ!

ಕ್ರೀಡೆ ಎಂದರೆ ಕೌಶಲ ಪ್ರದರ್ಶನ, ನಿರ್ದಿಷ್ಟ ಕ್ರೀಡೆಯಲ್ಲಿ ನಮ್ಮ ಕೌಶಲ, ಛಲ, ಮನೋಬಲ ಪ್ರದರ್ಶಿಸಿ ನಮ್ಮ ಮೇಲುಗೈ ಅನ್ನು, ಹಿರಿಮೆಯನ್ನು, ಪಾರಮ್ಯವನ್ನು ಸ್ಥಾಪಿಸುವುದಕ್ಕೆ, ನಿರೂಪಿಸುವುದಕ್ಕೆ ಇರುವ ಅವಕಾಶ. ಕ್ರಿಕೆಟ್ ಇರಲಿ, ಟೆನಿಸ್, ಅಥ್ಲೆಟಿಕ್ಸ್ ಇರಲಿ, ಪಾಕಿಸ್ತಾನಕ್ಕಿಂತ ನಾವು ಬಲಾಢ್ಯರು, ಗಟ್ಟಿಗರು ಎಂದು ನಿರೂಪಿಸುವ ಅವಕಾಶವನ್ನು ಬಿಟ್ಟುಕೊಡುವ ಅಗತ್ಯವೇನೂ ಇಲ್ಲ. ಆಪರೇಷನ್ ಸಿಂಧೂರ ಯುದ್ಧದಲ್ಲಿ ಭಾರತವೇ ಗೆದ್ದಿರುವುದು ಜಗತ್ತಿಗೇ ಸಾಕ್ಷ್ಯ ಸಮೇತ ತಿಳಿದಿದ್ದರೂ, ಪಾಕಿಗಳು ‘ನಾವೇ ಗೆದ್ದೆವು’ ಎಂದು ಟಾಂಟಾಂ ಹೊಡೆದುಕೊಳ್ಳುತ್ತಿದ್ದಾರೆ. ಲಂಡನ್​ನಲ್ಲಿ ಇತ್ತೀಚೆಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ ಎಂದು ಭಾರತದ ಆಟಗಾರರು ಹಿಂದೆ ಸರಿದಿದ್ದರು. ಲೀಗ್​ನಲ್ಲಿ ಹಾಗೂ ಸೆಮಿಫೈನಲ್​ನಲ್ಲಿ ಎರಡು ಪಂದ್ಯಗಳನ್ನು ಭಾರತ ಆಡಿರಲಿಲ್ಲ. ಆದರೆ, ಪಾಕ್ ತಂಡ ಮಾತ್ರ, ‘ಆಡಿದ್ದರೆ ನಾವೇ ಗೆಲ್ಲುತ್ತಿದ್ದೆವು, ಭಾರತೀಯರು ಹೆದರಿಕೊಂಡು ಆಡಲಿಲ್ಲ’ ಎಂದು ಕೊಚ್ಚಿಕೊಂಡರು. ಈ ರೀತಿ ಹಿಂದೆ ಸರಿದು, ಪಾಕಿಗಳ ಉತ್ತರನ ಪೌರುಷಕ್ಕೆ ಅವಕಾಶ ಮಾಡಿಕೊಡುವುದಕ್ಕಿಂತ ಏಷ್ಯಾಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಪಂದ್ಯ ಆಡಿ, ಅಷ್ಟೂ ಬಾರಿಯೂ ಹೀನಾಮಾನ ಮುಖಭಂಗ ಒಡ್ಡಿದ ಭಾರತೀಯ ಪಡೆಯ ನಡೆ ಶ್ಲಾಘನೀಯವೇ. ಅದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಫೈನಲ್​ನಲ್ಲಿ ಭಾರತದ ವಿಜಯ ಸಂಭ್ರಮವನ್ನು ‘ರಣಾಂಗಣದಲ್ಲೂ, ಕ್ರೀಡಾಂಗಣದಲ್ಲೂ ಫಲಿತಾಂಶ ಒಂದೇ.. ಭಾರತದ ಗೆಲುವು..’ ಎಂದು ಟ್ವೀಟಿಸಿ ಸಂಭ್ರಮಿಸಿದ್ದು.

ಕ್ರೀಡೆಯಲ್ಲಿ ದೇಶಪ್ರೀತಿ ಇರಬೇಕು, ಇರಲೇಬೇಕು. ಆದರೆ, ರಾಜಕೀಯ ಇರಬಾರದು. ಏಷ್ಯಾ ಕಪ್ ಇರಲಿ, ವಿಶ್ವಕಪ್ ಇರಲಿ, ಎಲ್ಲ ತಂಡಗಳು ತಮ್ಮ ದೇಶವನ್ನು ಪ್ರತಿನಿಧಿಸಿ ಆಡುತ್ತವೆ. ಅಲ್ಲಿ ಯಾವುದೋ ಕ್ಲಬ್ ತಂಡವೋ, ಫ್ರಾಂಚೈಸಿ ತಂಡವೋ ಆಡುವುದಿಲ್ಲ. ಏಷ್ಯಾ ಕಪ್ ಪ್ರಶಸ್ತಿಯನ್ನು ಭಾರತ ಗೆದ್ದಿತು ಎಂದು ಎಲ್ಲರೂ ಖುಷಿಪಡುವರೇ ವಿನಾ, ಬಿಸಿಸಿಐ ತಂಡ ಗೆದ್ದಿದೆ ಎಂದು ಯಾರೂ ಹೇಳುವುದಿಲ್ಲ. ಆಟಗಾರರು ಪಂದ್ಯ ಗೆದ್ದಾಗ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುವುದು, ಪ್ರತೀ ಪಂದ್ಯಕ್ಕೆ ಮುನ್ನ ರಾಷ್ಟ್ರಗೀತೆ ಮೊಳಗುವುದು... ಇವೆಲ್ಲವೂ ದೇಶಪ್ರೀತಿಯ ಸಂಕೇತಗಳು. ಹಾಗಾಗಿ ಪಾಕಿಸ್ತಾನದ ವಿರುದ್ಧದ ಗೆಲುವನ್ನು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೈನಿಕರಿಗೆ, ಪಹಲ್ಗಾಮ್ ಹುತಾತ್ಮರಿಗೆ ಅರ್ಪಿಸಿದರೆ, ದೇಶದ ಪರವಾಗಿ ಭಾವನೆ ವ್ಯಕ್ತಪಡಿಸಿದರೆ ತಪ್ಪೇನೂ ಇಲ್ಲ. ಬದಲಿಗೆ, ಅದರ ವಿರುದ್ಧ ಪಾಕಿಸ್ತಾನದವರು ದೂರು ನೀಡುವುದು, ಐಸಿಸಿಯವರು ಸೂರ್ಯಕುಮಾರ್​ಗೆ ಪಂದ್ಯ ಸಂಭಾವನೆಯ ಶೇಕಡ 30 ದಂಡ ವಿಧಿಸುವುದು ರಾಜಕೀಯವೆನಿಸಿಬಿಡುತ್ತದೆ. ದೇಶವನ್ನು ಪ್ರತಿನಿಧಿಸುವ ಆಟಗಾರನೊಬ್ಬ ದೇಶದ ಪರವಾಗಿ ಭಾವನೆ ವ್ಯಕ್ತಪಡಿಸಿದರೆ ಅದು ಕ್ರೀಡಾ ಸಂಹಿತೆ ಪ್ರಕಾರ ಅಪರಾಧ ಎನಿಸಿಬಿಡುವುದು ಹೇಗೆ? ಸೂರ್ಯಕುಮಾರ್ ತಮ್ಮ ಭಾವನೆ ವ್ಯಕ್ತಪಡಿಸುವ ಸಂದರ್ಭದಲ್ಲಿ ಪಾಕಿಸ್ತಾನವನ್ನು ನಿಂದಿಸಿದ್ದರೆ, ಉಗ್ರಕೃತ್ಯದಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದರೆ ಅದು ರಾಜಕೀಯ ಅಭಿಪ್ರಾಯ ಎನಿಸಿಕೊಳ್ಳುತ್ತಿತ್ತು. ಆದರೆ, ಸೂರ್ಯ ಹಾಗೇನೂ ಮಾಡಲಿಲ್ಲ. ‘ಗೆಲುವು ನಮ್ಮ ಯೋಧರಿಗೆ ಅರ್ಪಣೆ’ ಎಂದಷ್ಟೇ ಹೇಳಿದ್ದರು.

ಏಷ್ಯಾ ಕಪ್​ನಲ್ಲಿ ಭಾರತ-ಪಾಕಿಸ್ತಾನ ತಂಡಗಳ ವರ್ತನೆ ಕ್ರೀಡಾಸ್ಪೂರ್ತಿಗೆ ತಕ್ಕುದಾಗಿರಲಿಲ್ಲ ಎಂದು ಕರ್ನಾಟಕದ ನಿವೃತ್ತ ಕ್ರಿಕೆಟಿಗರೊಬ್ಬರು ಟೀಕಿಸಿದ್ದರು. ಆದರೆ, ಎದುರಾಳಿಗೆ ಹಸ್ತಲಾಘವ ನೀಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳುವುದು ಕ್ರೀಡಾಸ್ಪೂರ್ತಿಗೆ ವಿರುದ್ಧ ಎಂದು ಭಾವಿಸುವುದೇ ತಪು್ಪ. ಅದೊಂದು ಸೌಜನ್ಯವೇ ಹೊರತು ನಿಯಮವಲ್ಲ. ಅನೇಕ ಕ್ರೀಡೆಗಳಲ್ಲಿ ಪಂದ್ಯಕ್ಕೆ ಮುನ್ನ ಅಥವಾ ಕೊನೆಯಲ್ಲಿ ಹಸ್ತಲಾಘವದ ಪರಿಪಾಠವೇ ಇಲ್ಲ. ಅವರವರ ಆಟವನ್ನು ಅವರವರು ಆಡುತ್ತಾರಷ್ಟೇ. ಭಾರತ ಚಾಂಪಿಯನ್ ಪಟ್ಟಕ್ಕೇರಿದ ಮೇಲೂ ಟ್ರೋಫಿಯನ್ನೇ ಕೊಡದೆ, ಸ್ವಂತ ಆಸ್ತಿ ಎಂಬಂತೆ ಟ್ರೋಫಿ ಹೊತ್ತುಕೊಂಡು ಓಡಿಹೋಗುತ್ತಾರಲ್ಲ ಅದು ಕ್ರೀಡಾಸ್ಪೂರ್ತಿಗೆ ವಿರುದ್ಧ. ಫೈನಲ್ ಪಂದ್ಯಕ್ಕೆ ಮುನ್ನ ಟಾಸ್ ಸಂದರ್ಭದಲ್ಲೂ ಯಾವುದೇ ಇರಿಸುಮುರಿಸು ಎದುರಾಗದಂತೆ ಭಾರತದ ನಾಯಕನನ್ನು ಮಾತನಾಡಿಸಲು ರವಿಶಾಸ್ತ್ರಿ, ಪಾಕ್ ನಾಯಕನನ್ನು ಮಾತನಾಡಿಸಲು ವಕಾರ್ ಯೂನಿಸ್​ರನ್ನು ಸಂಘಟಕರು ಮೈದಾನಕ್ಕೆ ಕಳುಹಿಸಿದ್ದರು. ಹೀಗಿರುವಾಗ ಭಾರತೀಯರ ಭಾವನೆ ಗೌರವಿಸಿ ಟ್ರೋಫಿಯನ್ನು ಬೇರೆ ಅಧಿಕಾರಿಗಳಿಂದ ಕೊಡಿಸುವ ವ್ಯವಸ್ಥೆ ಮಾಡಬಹುದಿತ್ತು. ಅದನ್ನು ಬಿಟ್ಟು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ತಾನೇ ಟ್ರೋಫಿ ಕೊಡಬೇಕೆಂದು ಹಟ ಹಿಡಿದಿದ್ದು, ಬೇರೆ ಯಾರೂ ಕೊಡಕೂಡದೆಂದು ಟ್ರೋಫಿ ಸಹಿತ ಕ್ರೀಡಾಂಗಣದಿಂದ ಓಡಿಹೋಗಿದ್ದು ಘೋರ ತಪು್ಪ, ನಗೆಪಾಟಲಿನ ಸಂಗತಿ. ಯಾವುದೇ ಟ್ರೋಫಿ ಚಾಂಪಿಯನ್ನರ ಕೈಯಲ್ಲಿದ್ದಾಗ ಮಾತ್ರ ಅದಕ್ಕೆ ಬೆಲೆ. ಸಂಬಂಧವಿಲ್ಲದವರು ಇಟ್ಟುಕೊಂಡರೆ, ಅದೊಂದು ತಗಡಿನ ತುಂಡೇ ಹೊರತು ಬೇರೇನೂ ಬೆಲೆಯಿಲ್ಲ!

ಅಷ್ಟಕ್ಕೂ ಕ್ರೀಡೆ ಎನ್ನುವುದು ದೇಶದ ಭಾವನೆಗಳೊಂದಿಗೆ ಬೆಸೆದುಕೊಳ್ಳುತ್ತಿರುವುದು ಏಷ್ಯಾ ಕಪ್​ನಿಂದೇನೂ ಶುರುವಾಗಿಲ್ಲ. ಆಧುನಿಕ ಒಲಿಂಪಿಕ್ಸ್ ಕ್ರೀಡೆಗಳು ಪ್ರಾರಂಭಗೊಂಡ ದಿನದಿಂದಲೇ ಕ್ರೀಡೆ ಮತ್ತು ದೇಶಪ್ರೀತಿ ಒಂದನ್ನೊಂದು ಬೇರ್ಪಡಿಸಲಾಗದ ಆತ್ಮಸಂಬಂಧವನ್ನು ಬೆಳೆಸಿಕೊಂಡಿವೆ.

1948ರಲ್ಲಿ ಭಾರತ ಒಲಿಂಪಿಕ್ಸ್​ನಲ್ಲಿ ಸತತ ನಾಲ್ಕನೇ ಬಾರಿ ಹಾಕಿ ಚಿನ್ನಕ್ಕೆ ಕೊರಳೊಡ್ಡಿತ್ತು. 1928ರಲ್ಲಿ ಆಮ್್ಟರ್ಡಮ್ 1932ರಲ್ಲಿ ಲಾಸ್ ಏಂಜಲೀಸ್, 1936ರಲ್ಲಿ ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಸ್ವರ್ಣ ವಿಜೇತರೆನಿಸಿದ್ದ ಭಾರತೀಯರು 1948ರಲ್ಲಿ ಮತ್ತೆ ಚಿನ್ನ ಗೆದ್ದಾಗ ಇಡೀ ದೇಶ ಸಂತೋಷದಿಂದ ಕುಣಿದಾಡಿತ್ತು. ಆ ಸಂದರ್ಭದಲ್ಲಿ ಅದು ಕೇವಲ ಒಲಿಂಪಿಕ್ಸ್ ಅಥವಾ ಹಾಕಿ ಅಥವಾ ಚಿನ್ನದ ಪದಕ ಎಂಬ ಕ್ರೀಡಾ ದೃಷ್ಟಿಕೋನಕ್ಕೆ ಸೀಮಿತವಾಗದೆ, ಇಡೀ ದೇಶ ಪ್ರತಿಯೊಬ್ಬರ ದಿಗ್ವಿಜಯ ಎಂದು ಭಾವಿಸಿತ್ತು. ಕಾರಣ, ಭಾರತ 1947ರಲ್ಲಿ ಆಂಗ್ಲರ ದಾಸ್ಯದಿಂದ ಮುಕ್ತಗೊಂಡ ಬಳಿಕ ಸ್ವತಂತ್ರ ಭಾರತ ಗೆದ್ದ ಚೊಚ್ಚಲ ಒಲಿಂಪಿಕ್ಸ್ ಚಿನ್ನ ಇದಾಗಿತ್ತು. ಅದರಲ್ಲೂ ಭಾರತ ಲಂಡನ್​ನಲ್ಲಿ ನಡೆದ ಒಲಿಂಪಿಕ್ಸ್ ಫೈನಲ್​ನಲ್ಲಿ ಬ್ರಿಟಿಷರನ್ನು 4-0 ಗೋಲುಗಳಿಂದ ಬಗ್ಗುಬಡಿದಿತ್ತು. ಇದು ಕೇವಲ ಒಂದು ಒಲಿಂಪಿಕ್ಸ್ ಚಿನ್ನವಷ್ಟೇ ಅಲ್ಲದೆ, ಬ್ರಿಟಿಷರ ವಿರುದ್ಧ ಭಾರತದ ಪ್ರಪ್ರಥಮ, ಮಹೋನ್ನತ ಗೆಲುವೆನಿಸಿಕೊಂಡಿತ್ತು. ಇದು ಕೇವಲ ಆಟ. ಯುದ್ಧವಲ್ಲ, ಆಟ ಬೇರೆ, ದೇಶ ಬೇರೆ ಎಂದು ಆಗ ಯಾರೊಬ್ಬರೂ ಕೊಂಕು ನುಡಿದಿರಲಿಲ್ಲ.

ಭಾರತೀಯರ ಸ್ವರ್ಣ ಸಾಧನೆಯನ್ನು ಇನ್ನೂ ಸ್ವಲ್ಪ ಮೆಲುಕು ಹಾಕುವುದಾದರೆ, ಹಿಂದಿನ ಮೂರು ಒಲಿಂಪಿಕ್ಸ್​ಗಳಲ್ಲಿ ಚಿನ್ನದ ಹ್ಯಾಟ್ರಿಕ್ ಸಾಧನೆ ಬೆನ್ನಿಗಿದ್ದರೂ, ಲಂಡನ್ ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಫೇವರಿಟ್ ಏನೂ ಆಗಿರಲಿಲ್ಲ. ಅದಕ್ಕೆ ಕಾರಣ ದೇಶ ವಿಭಜನೆ! ಹೌದು, ದೇಶ ವಿಭಜನೆಗೆ ಮುನ್ನ ಭಾರತದ ಹಾಕಿ ತಂಡದಲ್ಲಿ ಪಂಜಾಬ್ ಆಟಗಾರರ ಪ್ರಾಬಲ್ಯವಿತ್ತು. ಆದರೆ, 1936ರ ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಭಾರತ ತಂಡದಲ್ಲಿದ್ದ ಪಂಜಾಬ್​ನ ನಿಯಾಜ್ ಖಾನ್, ಶಾರುಖ್ ಮೊಹಮ್ಮದ್, ಅಜೀಜ್ ಮಲಿಕ್, ಅಲಿ ಷಾ ದಾರಾ ಸಹಿತ ಅನೇಕ ಶ್ರೇಷ್ಠ ಆಟಗಾರರು ಸ್ವಾತಂತ್ರಾ್ಯನಂತರ ಪಾಕಿಸ್ತಾನದ ಪರ ಆಡುವ ಒಲವು ತೋರಿದರು. ಹೀಗಾಗಿ ಭಾರತ ಹಾಕಿ ತಂಡದಲ್ಲಿ ಮೊದಲ ಬಾರಿ ದೇಶದ ಮೂಲೆಮೂಲೆಯ ಆಟಗಾರರು ಅವಕಾಶ ಪಡೆದಿದ್ದರು. ಇದು ಪೂರ್ಣ ಹೊಸ ತಂಡವಾಗಿತ್ತು. ಆಟಗಾರರಿಗೆ ಪರಸ್ಪರ ಪರಿಚಯ ಇರಲಿಲ್ಲ. ಭಾಷೆ, ಸಂವಹನದ ತೊಡಕೂ ಇತ್ತು. ಹೀಗಾಗಿ ಒಲಿಂಪಿಕ್ಸ್​ಗೆ ಮುನ್ನ ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ (ಆಗಿನ ಬಾಂಬೆ) ಕೆಲವು ಅಭ್ಯಾಸ ಪಂದ್ಯ ಏರ್ಪಡಿಸಲಾಗಿತ್ತು. ತಂಡದ ಸದಸ್ಯರು ಹಡಗಿನಲ್ಲಿ ಇಂಗ್ಲೆಂಡ್​ಗೆ ಹೋಗುವಷ್ಟು ಕಾಲಾವಕಾಶ ಇರಲಿಲ್ಲ. ಹಾಗಾಗಿ ಭಾರತ ಹಾಕಿ ಒಕ್ಕೂಟದ ಮುಖ್ಯಸ್ಥ ನವಲ್ ಟಾಟಾ ಹೆಚ್ಚುವರಿ ಹಣ ಖರ್ಚು ಮಾಡಿ ಆಟಗಾರರನ್ನು ವಿಮಾನದಲ್ಲಿ ಲಂಡನ್​ಗೆ ಕಳುಹಿಸಿದ್ದರು. ಕೂಟದಲ್ಲಿ ಅಜೇಯ ಸಾಧನೆ ಮಾಡಿದ್ದ ಭಾರತ ಲೀಗ್ ಹಂತದಲ್ಲಿ ಆಸ್ಟ್ರಿಯಾ ವಿರುದ್ಧ 8-0, ಅರ್ಜೆಂಟೀನಾ ವಿರುದ್ಧ 9-1, ಸ್ಪೇನ್ ವಿರುದ್ಧ 2-0, ಸೆಮಿಫೈನಲ್​ನಲ್ಲಿ ಹಾಲೆಂಡ್ ವಿರುದ್ಧ 2-1, ಫೈನಲ್​ನಲ್ಲಿ ಬ್ರಿಟನ್ ವಿರುದ್ಧ 4-0 ಅಂತರದಿಂದ ಗೆದ್ದು ಅಜೇಯವಾಗಿ ಸ್ವರ್ಣಕ್ಕೆ ಕೊರಳೊಡ್ಡಿತ್ತು. ಪಾಕ್ ಈ ಕೂಟದಲ್ಲಿ ಸೆಮಿಫೈನಲ್​ನಲ್ಲಿ ಬ್ರಿಟನ್ ವಿರುದ್ಧ ಸೋತಿತ್ತು.

ಈ ಕೂಟದ ಸಂದರ್ಭದಲ್ಲೂ ಒಂದಷ್ಟು ರಾಜಕೀಯ ವಿಚಾರಗಳು ವಿವಾದಕ್ಕೆ ಕಾರಣವಾಗಿದ್ದವು. ಚೊಚ್ಚಲ ಒಲಿಂಪಿಕ್ಸ್​ನಲ್ಲಿ ಆಡುತ್ತಿದ್ದ ಪಂಜಾಬ್​ನ ಬಲ್​ಬೀರ್ ಸಿಂಗ್ ಸೀನಿಯರ್​ರನ್ನು ಪ್ರಾರಂಭದಲ್ಲಿ ಭಾರತ ತಂಡಕ್ಕೆ ಆಯ್ಕೆಯೇ ಮಾಡಿರಲಿಲ್ಲ. ಆದರೆ, ಹಿರಿಯ ಆಟಗಾರ ಡಿಕ್ಕಿ ಕಾರ್ ಹಟ ಹಿಡಿದಮೇಲೆ ಬಲ್​ಬೀರ್ ತಂಡಕ್ಕೆ ಸೇರ್ಪಡೆಯಾಗಿದ್ದರು. ತಂಡದಲ್ಲಿದ್ದರೂ ಟೂರ್ನಿಯಲ್ಲಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿರಲಿಲ್ಲ. ಆಡಿದ ಚೊಚ್ಚಲ ಪಂದ್ಯದಲ್ಲೇ 6 ಗೋಲು ಬಾರಿಸಿದ್ದರೂ, ಬಲ್​ಬೀರ್​ರನ್ನು ಸ್ಪೇನ್ ವಿರುದ್ಧ ಆಡಿಸಲೇ ಇಲ್ಲ. ಸೆಮಿಫೈನಲ್​ನಲ್ಲೂ ಡಚ್ಚರ ವಿರುದ್ಧ ಅವಕಾಶ ಸಿಗಲಿಲ್ಲ. ಈ ಸಂದರ್ಭದಲ್ಲಿ ಲಂಡನ್​ನಲ್ಲಿದ್ದ ಕೆಲವು ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ವಿ.ಕೆ. ಕೃಷ್ಣ ಮೆನನ್ ಅವರ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದರು. ಅದರ ಪರಿಣಾಮವಾಗಿ ಫೈನಲ್​ನಲ್ಲಿ ಅವಕಾಶ ಪಡೆದ ಬಲ್​ಬೀರ್ 2 ಗೋಲು ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ರೀತಿ ಬ್ರಿಟಿಷರನ್ನು ಬ್ರಿಟಿಷರ ನೆಲದಲ್ಲೇ ಮಣ್ಣುಮುಕ್ಕಿಸಿದ ಸ್ವತಂತ್ರ ಭಾರತದ ಹಾಕಿ ಸ್ವರ್ಣಗಾಥೆಯನ್ನು ಅಕ್ಷಯ್ ಕುಮಾರ್ ನಟನೆಯ ‘ಗೋಲ್ಡ್’ ಬಾಲಿವುಡ್ ಚಿತ್ರ ಸಾಕ್ಷಾತ್ಕರಿಸಿದೆ.

ಕ್ರೀಡಾ ಮೈದಾನದಲ್ಲಿ ದೇಶಪ್ರೇಮ ಯಾವುದೋ ಒಂದು ದೇಶ, ಒಂದು ಆಟಕ್ಕೆ ಸೀಮಿತವೂ ಅಲ್ಲ. 1976ರಲ್ಲಿ ಅಮೆರಿಕದಲ್ಲಿ ಚಿಕಾಗೊ ಕಬ್ಸ್ ಮತ್ತು ಲಾಸ್ ಏಂಜಲೀಸ್ ಡಾಡ್ಜರ್ಸ್ ನಡುವಿನ ಎಂಎಲ್​ಬಿ ಬೇಸ್​ಬಾಲ್ ಪಂದ್ಯದ ನಡುವೆ ಇಬ್ಬರು ಪ್ರತಿಭಟನಾಕಾರರು ಅಮೆರಿಕದ ಧ್ವಜವನ್ನು ಸುಟ್ಟುಹಾಕಲು ಪ್ರಯತ್ನಿಸಿದ್ದರು. ಆಗ ರಿಕ್ ಮಂಡೆ ಎಂಬ ಆಟಗಾರ ಅಪ್ರತಿಮ ಧೈರ್ಯ ತೋರಿ, ಅವರಿಬ್ಬರಿಂದ ಧ್ವಜವನ್ನು ಕಿತ್ತುಕೊಂಡು ಧ್ವಜದ ಗೌರವ ಕಾಪಾಡಿದ್ದರು. ಇದು ಅಮೆರಿಕದ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಪ್ರಮುಖ ರಾಷ್ಟ್ರ ಗೌರವದ ಸನ್ನಿವೇಶವೆನಿಸಿದೆ. 1980ರ ಒಲಿಂಪಿಕ್ಸ್​ನಲ್ಲಿ ಅಮೆರಿಕದ ಪುರುಷರ ಹಾಕಿ ತಂಡ ಸೋವಿಯತ್ ಒಕ್ಕೂಟವನ್ನು ಸೋಲಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ಶೀತಲ ಸಮರದ ನಡುವೆ ಅಮೆರಿಕಕ್ಕೆ ನೈತಿಕ ಬಲ ಮತ್ತು ರಾಷ್ಟ್ರ ಗೌರವ ಹೆಚ್ಚಿಸಿದ ವಿಜಯವೆನಿಸಿತ್ತು. ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥವಾಗಿ ಭಾರತ ಕ್ರಿಕೆಟ್ ತಂಡದ ಸದಸ್ಯರು ಒಂದು ಪಂದ್ಯದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಮಿಲಿಟರಿ ಕ್ಯಾಪ್ ಧರಿಸಿ ಆಡಿದ್ದರು. 1936ರ ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಅಮೆರಿಕದ ಜೆಸ್ಸಿ ಓವೆನ್ಸ್ 4 ಬಂಗಾರದ ಪದಕ ಗೆದ್ದಿದ್ದು, ನಾಜಿಗಳ ವರ್ಣಭೇದ ನೀತಿ, ಜನಾಂಗೀಯ ದ್ವೇಷದ ವಿರುದ್ಧ ದಾಖಲಾದ ವಿಜಯ ಎಂದೇ ಜನಜನಿತವಾಗಿತ್ತು. ಹೀಗೆ ದೇಶಭಕ್ತಿ- ದೇಶಪ್ರೀತಿಯ ಭಾವನೆಗಳಿಗೆ ಕ್ರೀಡೆ ವೇದಿಕೆಯಾದ ಕ್ಷಣಗಳು ಇತಿಹಾಸದಲ್ಲಿ ಸಾವಿರ. ಒಂದನ್ನೊಂದು ಪ್ರತ್ಯೇಕಿಸಿ ನೋಡುವುದು ಕೂಡ ಅಸಾಧ್ಯ. ಹೀಗಾಗಿ ಏಷ್ಯಾ ಕಪ್​ನಲ್ಲಿ ಪಾಕ್ ತಂಡವನ್ನು ದಿಟ್ಟವಾಗಿ ಎದುರಿಸಿ, ಮೂರಕ್ಕೆ ಮೂರೂ ಬಾರಿ ಸೋಲಿಸಿದ ಭಾರತದ ಯುವಪಡೆಯನ್ನು ಮೆಚ್ಚಿಕೊಂಡು ಹುರಿದುಂಬಿಸುವ ಸಮಯ ಇದು. ಈ ವಿಚಾರದಲ್ಲಿ ರಾಜಕೀಯ ಬೇಡ. ಕ್ರೀಡಾಸ್ಪೂರ್ತಿ ಮತ್ತು ದೇಶಪ್ರೀತಿ ಒಂದೇ ದೋಣಿಯ ಪಯಣಿಗರು. ಅದರಲ್ಲಿ ತಪ್ಪು ಹುಡುಕುವ ಪ್ರಯತ್ನವೂ ಬೇಡ.

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)