ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ 19 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಿ.ವೈ.ರಾಘವೇಂದ್ರ ಇದ್ದರು. 
ಕ್ರೀಡೆ

ಸರ್ವಾಂಗೀಣ ವಿಕಾಸಕ್ಕೆ ಕ್ರೀಡೆ ಸಹಕಾರಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಯಾವುದೇ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ವಿಕಾಸಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ ಆಗುತ್ತವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಹಾಗೂ ಶಿವಮೊಗ್ಗದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ನಾಲ್ಕು ದಿನಗಳ ಸ್ಕೂಲ್ ಗೇಮ್ಸ್ ಆಫ್ ಇಂಡಿಯಾದ 67ನೇ ರಾಷ್ಟ್ರಮಟ್ಟದ 19 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಪಠ್ಯ ಚಟುವಟಿಕೆಗಳಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಈ ಕ್ರೀಡಾಕೂಟದಲ್ಲಿ 28 ರಾಜ್ಯಗಳ ಕ್ರೀಡಾಳುಗಳು ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಕ್ರೀಡಾಕೂಟ ಯಶಸ್ವಿಯಾಗಿ ನಡೆಯುವಲ್ಲಿ ಅಗತ್ಯವಿರುವ ಎಲ್ಲ ಸಹಕಾರವನ್ನು ಸರ್ಕಾರದಿಂದ ನೀಡಲಾಗುವುದು ಎಂದರು.
ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳಿಸಲು ವೇದಿಕೆಗಳನ್ನು ಒದಗಿಸುವುದು ಇಂದಿನ ತುರ್ತು ಅಗತ್ಯ. ಸರ್ಕಾರಗಳು ಮಾಡುವ ಮಕ್ಕಳ ಮನೋವಿಕಾಸ ಕಾರ್ಯವನ್ನು ಹಲವು ದಶಕಗಳಿಂದ ನಿರ್ವಹಿಸುತ್ತಿರುವ, ಕ್ರೀಡಾಕೂಟದ ಆತಿಥ್ಯ ವಹಿಸಿರುವ ಹಾಗೂ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸದ್ವಿಚಾರ ಬೆಳೆಸುತ್ತಿರುವ ಆದಿಚುಂಚನಗಿರಿ ಟ್ರಸ್ಟ್‌ನ ಕಾರ್ಯ ಅಭಿನಂದನಾರ್ಹ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ಬಿ.ರೂಪೇಶ್ ಮಾತನಾಡಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ಮಾಡಿದ ಹನಿ ಅವರನ್ನು ಗೌರವಿಸಲಾಯಿತು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ, ಡಿಡಿಪಿಯು ಬಿ.ಕೃಷ್ಣಪ್ಪ, ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ, ಗುಬ್ಬಿಗೂಡು ರಮೇಶ್, ಸಂಜಯ್ ಉಪಸ್ಥಿತರಿದ್ದರು.

ಆತಿಥೇಯ ಕರ್ನಾಟಕಕ್ಕೆ ಗೆಲುವು
ಮೊದಲ ದಿನವೇ ಆತಿಥೇಯ ಕರ್ನಾಟಕ ತಂಡವು 3-0 ಸೆಟ್‌ಗಳ ಅಂತರಗಳಿಂದ ಒಡಿಶಾ ವಿರುದ್ಧ ಗೆಲುವು ಸಾಧಿಸಿತು. ಉಳಿದಂತೆ ಐಪಿಎಸ್‌ಸಿ ವಿರುದ್ಧ ಉತ್ತರ ಪ್ರದೇಶ 3-0, ತೆಲಂಗಾಣ ವಿರುದ್ಧ ಗುಜರಾತ್ 3-0, ಬಿಹಾರ ವಿರುದ್ಧ ಉತ್ತರಾಖಂಡ 3-1 ಸೆಟ್‌ಗಳ ಅಂತರದಿಂದ ಶುಭಾರಂಭ ಮಾಡಿದವು.