ಕ್ರೀಡೆ

ಕ್ರೀಡಾತಾರೆಯರ ಈದ್ ಸಂಭ್ರಮ ಹೇಗಿದೆ ಗೊತ್ತಾ?

sspmiracle1982

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್, ಮಾಜಿ ಬ್ಯಾಟ್ಸ್‌ಮನ್ ಮೊಹಮದ್ ಕೈಫ್​, ಮಾಜಿ ವೇಗಿ ಜಹೀರ್ ಖಾನ್, ವೇಗಿ ಮೊಹಮದ್ ಶಮಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಹಿತ ಕ್ರೀಡಾತಾರೆಯರು ಸೋಮವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಅಜರುದ್ದೀನ್ ಪುತ್ರ ಅಸದುದ್ದೀನ್ ಮತ್ತು ಸೊಸೆ ಹಾಗೂ ಸಾನಿಯಾ ಮಿರ್ಜಾ ತಂಗಿ ಅನಾಮ್ ಮಿರ್ಜಾ ಜತೆಗೂಡಿ ಹೈದರಾಬಾದ್‌ನ ಮನೆಯಲ್ಲೇ ಸರಳವಾಗಿಯೇ ಈದ್ ಆಚರಿಸಿದ್ದು, ಟ್ವಿಟರ್‌ನಲ್ಲಿ ಕುಟುಂಬದ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಪತಿ ಹಾಗೂ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನದಲ್ಲಿ ಲಾಕ್‌ಡೌನ್ ಆಗಿರುವ ನಡುವೆ ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ಪುತ್ರ ಇಜಾನ್ ಜತೆಗೆ ಈದ್ ಸಂಭ್ರಮ ಆಚರಿಸಿದ್ದಾರೆ.

‘ಅಲ್ಲಾಹ್ ನಿಮ್ಮೆಲ್ಲ ಕನಸುಗಳನ್ನು ಈಡೇರಿಸಲಿ’ ಎಂದು ಮೊಹಮದ್ ಶಮಿ ಟ್ವಿಟರ್‌ನಲ್ಲಿ ಹಬ್ಬದ ಶುಭಾಶಯ ಸಾರಿದ್ದಾರೆ. ಕ್ರಿಕೆಟಿಗರಾದ ಇರ್ಫಾನ್​ ಮತ್ತು ಯೂಸುಫ್​ ಪಠಾಣ್ ಸಹೋದರರು ವಡೋದರದ ಮನೆಯಲ್ಲಿ ಈದ್ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಮೊಹಮದ್ ಕೈಫ್​ ಮತ್ತು ಜಹೀರ್ ಖಾನ್ ಟ್ವಿಟರ್‌ನಲ್ಲಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಕೂಡ ಢಾಕಾದಲ್ಲಿ ಕುಟುಂಬದೊಂದಿಗೆ ಸಂಭ್ರಮಿಸಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಿತ ಹಲವು ಕ್ರೀಡಾತಾರೆಯರು, ತಿಂಗಳ ಕಾಲ ಶ್ರದ್ಧಾ-ಭಕ್ತಿಯಿಂದ ಧಾರ್ಮಿಕ ಆಚರಣೆ ಕೈಗೊಂಡ ಎಲ್ಲರಿಗೂ ಶುಭಾಶಯಗಳು ಎಂದು ಟ್ವೀಟಿಸಿದ್ದಾರೆ.