ಬೆಂಗಳೂರು: ಅನೇಕ ಸವಾಲುಗಳನ್ನು ಎದುರಿಸಿ ಮುನ್ನಡೆಯುವುದರಲ್ಲೇ ಕ್ರೀಡಾಪಟುಗಳ ವೃತ್ತಿಜೀವನದ ಯಶಸ್ಸು ಅಡಗಿರುತ್ತದೆ. ಕ್ರೀಡಾಪಟುಗಳ ದಿನಚರಿ ಸಾಮಾನ್ಯ ಜನರಿಗಿಂತ ಭಿನ್ನವಾಗಿರುತ್ತದೆ. ಕ್ರೀಡಾಪಟುಗಳು ಸೋಲು ಬಂದಾಗ ಎದೆಗುಂದಬಾರದು, ಗೆಲುವು ಸಿಕ್ಕಾಗ ಮೈಮರೆಯಬಾರದು. ಇದನ್ನೆಲ್ಲ ಅರ್ಥಮಾಡಿಕೊಳ್ಳಲು ಅವರಿಗೆ ಸೂಕ್ತ ಜೀವನ ಸಂಗಾತಿ ಅಗತ್ಯ. ಈ ಜೀವನ ಸಂಗಾತಿಯೂ ಕ್ರೀಡಾಪಟುವೇ ಆಗಿದ್ದರೆ ಆಗ ಎಲ್ಲವೂ ಸುಲಭ ಎನಿಸಬಹುದು. ಕ್ರೀಡಾಜೀವನದ ಸವಾಲಿನ ಬಗ್ಗೆ ಇಬ್ಬರಿಗೂ ಪರಸ್ಪರ ತಿಳಿದಿರುವುದರಿಂದ ದಾಂಪತ್ಯ ಜೀವನವೂ ಸುಗಮವಾಗಿ ಸಾಗುತ್ತದೆ. ಭಾರತದಲ್ಲಿ ಇಂಥ ಹಲವು ಕ್ರೀಡಾ ದಂಪತಿಗಳಿದ್ದಾರೆ. ಈ ಪಟ್ಟಿಗೆ ಈಗ ಬಿಲ್ಗಾರರಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಹೊಸ ಸೇರ್ಪಡೆಯಾಗಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದ ದೀಪಿಕಾ ಮತ್ತು ಅತನು, ಪ್ರತಿಷ್ಠಿತ ಕ್ರೀಡಾಕೂಟದ ಮುಂದೂಡಿಕೆಯಿಂದಾಗಿ ಕರೊನಾ ಹಾವಳಿಯ ನಡುವೆಯೂ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದಿನ ವರ್ಷ ಟೋಕಿಯೊದಲ್ಲಿ ಇಬ್ಬರೂ ಸ್ಪರ್ಧೆಗಿಳಿದರೆ, ಒಂದೇ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಭಾರತದ 2ನೇ ದಂಪತಿ ಎನಿಸಲಿದ್ದಾರೆ. ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರ ತಂದೆ ವೇಸ್ ಪೇಸ್ ಮತ್ತು ತಾಯಿ ಜೆನ್ನಿಫರ್ ಈ ಸಾಧನೆ ಮಾಡಿದ ಮೊದಲ ದಂಪತಿಯಾಗಿದ್ದಾರೆ. ಅವರಿಬ್ಬರು 1972ರ ಮ್ಯೂನಿಚ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು. ಆಗ ವೇಸ್ ಪೇಸ್ ಭಾರತ ಹಾಕಿ ತಂಡದ ಆಟಗಾರರಾಗಿದ್ದರೆ, ಜೆನ್ನಿಫರ್ ಬಾಸ್ಕೆಟ್ಬಾಲ್ ತಂಡದ ಆಟಗಾರ್ತಿಯಾಗಿದ್ದರು.
ಭಾರತೀಯ ಕ್ರೀಡಾಲೋಕ ಕಂಡ ಇದುವರೆಗಿನ ಕೆಲ ಪ್ರಮುಖ ಕ್ರೀಡಾ ದಂಪತಿಗಳ ವಿವರ ಇಲ್ಲಿದೆ:
ದಿನೇಶ್ ಕಾರ್ತಿಕ್-ದೀಪಿಕಾ ಪಲ್ಲಿಕಲ್
ತಮಿಳುನಾಡಿನ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮತ್ತು ಕಾಮನ್ವೆಲ್ತ್ ಗೇಮ್ಸ್-ಏಷ್ಯನ್ ಗೇಮ್ಸ್ ಪದಕ ವಿಜೇತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ 2015ರಲ್ಲಿ ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಒಬ್ಬರೇ ಫಿಟ್ನೆಸ್ ಕೋಚ್ ಅವರಿಂದ ತರಬೇತಿ ಪಡೆಯುತ್ತಿದ್ದ ವೇಳೆ ಇಬ್ಬರ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು.
ಇಶಾಂತ್ ಶರ್ಮ-ಪ್ರತಿಮಾ ಸಿಂಗ್
ಭಾರತ ತಂಡದ ವೇಗಿ ಇಶಾಂತ್ ಶರ್ಮ ಅವರ ಪತ್ನಿ ಪ್ರತಿಮಾ ಸಿಂಗ್ ಭಾರತ ಬಾಸ್ಕೆಟ್ಬಾಲ್ ತಂಡದ ಮಾಜಿ ಆಟಗಾರ್ತಿ. 2016ರ ಡಿಸೆಂಬರ್ನಲ್ಲಿ ಇವರ ವಿವಾಹ ನಡೆದಿತ್ತು. ದೆಹಲಿಯಲ್ಲಿ ನಡೆದ ಬಾಸ್ಕೆಟ್ಬಾಲ್ ಲೀಗ್ ಒಂದರ ಉದ್ಘಾಟನಾ ಸಮಾರಂಭದ ವೇಳೆ ಇವರಿಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಪ್ರೀತಿಸಿ ಮದುವೆಯಾಗಿದ್ದರು.
ಹೀನಾ ಸಿಧು-ರೋನಕ್ ಪಂಡಿತ್
ಭಾರತದ ಸ್ಟಾರ್ ಶೂಟರ್ ಹೀನಾ ಸಿಧು ಅವರ ಪತಿ ರೋನಕ್ ಪಂಡಿತ್ ಕೂಡ ಮಾಜಿ ಶೂಟರ್. 2013ರಲ್ಲಿ ಇವರಿಬ್ಬರ ವಿವಾಹವಾಗಿತ್ತು. ಬಳಿಕ ಹೀನಾ ಸಿಧು ಅವರಿಗೆ ರೋನಕ್ ಪಂಡಿತ್ ಅವರೇ ಕೋಚ್ ಕೂಡ ಆಗಿದ್ದಾರೆ.
ಮಿಲ್ಖಾ ಸಿಂಗ್-ನಿರ್ಮಲಾ ಕೌರ್
ಹಾರುವ ಸಿಖ್ ಎಂದೇ ಖ್ಯಾತರಾದ ಅಥ್ಲೆಟಿಕ್ ದಿಗ್ಗಜ ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲಾ ಕೌರ್ ಕೂಡ ಮಾಜಿ ಕ್ರೀಡಾಪಟು. ನಿರ್ಮಲಾ ಭಾರತ ವಾಲಿಬಾಲ್ ತಂಡದ ನಾಯಕಿಯಾಗಿದ್ದರು. ಮಿಲ್ಖಾ ಸಿಂಗ್ 1960ರ ಒಲಿಂಪಿಕ್ಸ್ನ 400 ಮೀಟರ್ ಓಟದಲ್ಲಿ ಪದಕ ಜಯಿಸುವ ಸನಿಹ ಬಂದು 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಯೂ ಅವರದಾಗಿದೆ.
ಮಂಜೀತ್ ಕೌರ್-ಗುರ್ವಿಂದರ್ ಸಿಂಗ್ ಚಾಂಡಿ
ಭಾರತ ಹಾಕಿ ತಂಡದ ಫಾರ್ವಡ್ರ್ ಆಟಗಾರ ಗುರ್ವಿಂದರ್ ಸಿಂಗ್ ಅವರ ಪತ್ನಿ ಮಂಜೀತ್ ಕೌರ್ 2006 ಮತ್ತು 2010ರ ಏಷ್ಯನ್ ಗೇಮ್ಸ್ ರಿಲೇ ಸ್ಪರ್ಧೆಯ ಸ್ವರ್ಣ ಪದಕ ವಿಜೇತ ಅಥ್ಲೀಟ್ ಆಗಿದ್ದಾರೆ. 2015ರಲ್ಲಿ ಇವರ ವಿವಾಹ ನಡೆದಿತ್ತು.
ಸೈನಾ ನೆಹ್ವಾಲ್-ಪಿ. ಕಶ್ಯಪ್
ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿ. ಕಶ್ಯಪ್ ಪರಸ್ಪರ ಪ್ರೀತಿಸುತ್ತಲೇ ಕ್ರೀಡಾ ಜೀವನದಲ್ಲಿ ಯಶಸ್ಸು ಕಂಡವರು. 2018ರಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಪಿ. ಗೋಪಿಚಂದ್-ಪಿವಿವಿ ಲಕ್ಷ್ಮಿ
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಡ್ ಚಾಂಪಿಯನ್ಷಿಪ್ ವಿಜೇತ ಹಾಗೂ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಪಿ. ಗೋಪಿಚಂದ್ ಅವರ ಪತ್ನಿಯೂ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ. ಇಬ್ಬರೂ ರಾಷ್ಟ್ರೀಯ ಟೂರ್ನಿಗಳಲ್ಲಿ ಜತೆಯಾಗಿ ಆಡುತ್ತಿರುವಾಗ ಪ್ರೀತಿ ಅರಳಿತ್ತು. ಪಿವಿವಿ ಲಕ್ಷ್ಮಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದರು. ಇವರ ಪುತ್ರಿ ಗಾಯತ್ರಿ ಕೂಡ ಈಗ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ.
ವಿನೇಶ್ ಪೋಗಟ್-ಸೋಮ್ವೀರ್ ರಾಥಿ
ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ವಿನೇಶ್ ಪೋಗಟ್ ಅವರ ಪತಿ ಸೋಮ್ವೀರ್ ರಾಥಿ ಕೂಡ ಪೈಲ್ವಾನ್ ಆಗಿದ್ದಾರೆ. 2018ರಲ್ಲಿ ಇವರ ವಿವಾಹ ನಡೆದಿತ್ತು.
ಗೀತಾ ಪೋಗಟ್-ಪವನ್ ಕುಮಾರ್
ಸಾಕ್ಷಿ ಮಲಿಕ್-ಸತ್ಯವ್ರತ ಕದಿಯಾನ್
ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಸಹ-ಪೈಲ್ವಾನ್ ಸತ್ಯವ್ರತ ಕದಿಯಾನ್ ಅವರನ್ನು ವರಿಸಿದ್ದಾರೆ. 2016ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ಸತ್ಯವ್ರತ 2014ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ರಜತ ಪದಕ ಜಯಿಸಿದ್ದರು.
ಸಾನಿಯಾ ಮಿರ್ಜಾ-ಶೋಯಿಬ್ ಮಲಿಕ್
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಪತಿ ಶೋಯಿಬ್ ಮಲಿಕ್ ಪಾಕಿಸ್ತಾನದ ಕ್ರಿಕೆಟಿಗ. ದೇಶದ ಗಡಿಯನ್ನು ಮೀರಿ ಪ್ರೀತಿಸಿದ್ದ ಇವರಿಬ್ಬರು 2010ರಲ್ಲಿ ಭಾರಿ ವಿವಾದದ ನಡುವೆ ವಿವಾಹವಾಗಿದ್ದರು. ಇಬ್ಬರಿಗೆ ಈಗ ಇಜಾನ್ ಎಂಬ ಪುತ್ರನೂ ಇದ್ದಾನೆ.
ಬಬಿತಾ ಪೋಗಟ್-ವಿವೇಕ್ ಸುಹಾಗ್
ಪೋಗಟ್ ಸಹೋದರಿಯರ ಪೈಕಿ ಹಿರಿಯ ಇಬ್ಬರಂತೆ ಬಬಿತಾ ಪೋಗಟ್ ಕೂಡ ಕುಸ್ತಿಪಟುವನ್ನೇ ವಿವಾಹವಾಗಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಬಬಿತಾ ಅವರ ಪತಿ ವಿವೇಕ್ ಸುಹಾಗ್ ಕೂಡ ಹಲವು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ್ದಾರೆ.
ಅಂಜು ಬಾಬಿ ಜಾರ್ಜ್-ರಾಬರ್ಟ್ ಬಾಬಿ ಜಾರ್ಜ್
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಪದಕ ವಿಜೇತೆ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಅವರ ಪತಿ ರಾಬರ್ಟ್ ಬಾಬಿ ಜಾರ್ಜ್ ಕೂಡ ಮಾಜಿ ರಾಷ್ಟ್ರೀಯ ಟ್ರಿಪಲ್ ಜಂಪ್ ಪಟು. ವಿವಾಹದ ನಂತರ ಅವರು ಅಂಜುಗೆ ಕೋಚ್ ಕೂಡ ಆಗಿದ್ದರು. ಇದಕ್ಕಾಗಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿಯೂ ಒಲಿದಿತ್ತು.
ಸಿಕ್ಕಿರೆಡ್ಡಿ-ಸುಮೀತ್ ರೆಡ್ಡಿ
ಬ್ಯಾಡ್ಮಿಂಟನ್ನಲ್ಲಿ ಹಲವಾರು ಆಟಗಾರರು ಪರಸ್ಪರ ಪ್ರೀತಿ ಮದುವೆಯಾಗಿದ್ದಾರೆ. ಭಾರತದ ಡಬಲ್ಸ್ ತಾರೆಯರಾದ ಸಿಕ್ಕಿ ರೆಡ್ಡಿ ಮತ್ತು ಸುಮೀತ್ ರೆಡ್ಡಿ ದಂಪತಿ ಕೂಡ ಈ ಪಟ್ಟಿಯಲ್ಲಿದ್ದಾರೆ. 2019ರಲ್ಲಿ ಹೈದರಾಬಾದ್ನಲ್ಲಿ ಸಿಕ್ಕಿ-ಸುಮೀತ್ ವಿವಾಹ ನಡೆದಿತ್ತು.