ಕ್ರೀಡೆ

ಪ್ರೇಮ ನಗರಿಯಲ್ಲಿ ಕ್ರೀಡಾ ಸಡಗರ

ಕ್ರೀಡಾತಾರೆಯರು, ಕ್ರೀಡಾಪ್ರೇಮಿಗಳ ಮಹಾಪರ್ವ ಒಲಿಂಪಿಕ್ಸ್ ಮತ್ತೆ ಬಂದಿದೆ. ಪದಕ ಬೇಟೆ, ದಾಖಲೆಗಳ ನಿರ್ವಣದ ಪೈಪೋಟಿಗೆ ಯುರೋಪ್ ಖಂಡದ ಪರಂಪರೆಗಳ ದೇಶ ಫ್ರಾನ್ಸ್​ನ ಪ್ರೇಮ ನಗರಿ ಪ್ಯಾರಿಸ್​ನಲ್ಲಿ ವೇದಿಕೆ ಸಿದ್ಧಗೊಂಡಿದೆ. ಇದೇ ಮೊದಲ ಬಾರಿಗೆ ವಿನೂತನವಾಗಿ ನೀರಿನ ಮೇಲೆ ಅಂದರೆ 777 ಕಿಲೋಮೀಟರ್ ಉದ್ದ ಮತ್ತು ಅಡ್ಡಲಾಗಿ 37 ಸೇತುವೆಗಳನ್ನು ಹೊಂದಿರುವ ಫ್ರಾನ್ಸ್​ನ ಮಹಾನದಿ ಸೀನ್ ಮೇಲೆ ಶುಕ್ರವಾರ ಅದ್ದೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶನಿವಾರದಿಂದ ಪದಕಗಳನ್ನು ಪಣಕ್ಕಿಡಲಾಗುತ್ತದೆ. ಭಾರತದ ಕ್ರೀಡಾಪಟುಗಳ ಪದಕ ನಿರೀಕ್ಷೆ ಮತ್ತು ಬಲಾಬಲಗಳ ಲೆಕ್ಕಾಚಾರಕ್ಕೆ ಮುನ್ನ ಪ್ಯಾರಿಸ್ ಒಲಿಂಪಿಕ್ಸ್ ವಿಶೇಷತೆ ಮತ್ತು ಅಂತಿಮ ಹಂತದ ಸಿದ್ಧತೆಯಲ್ಲಿರುವ ವಿಶ್ವದೆಲ್ಲೆಡೆಯ ಪ್ರಮುಖ ಕ್ರೀಡಾಪಟುಗಳ ಸಂಕ್ಷಿಪ್ತ ಮೆಲುಕು ಹಾಕೋಣ...

33ನೇ ಒಲಿಂಪಿಕ್ಸ್​ಗೆ ವೇದಿಕೆ ಸಜ್ಜು ನಾಳೆ ವರ್ಣರಂಜಿತ ಉದ್ಘಾಟನಾ ಸಮಾರಂಭ

ಕಲೆ, ವಾಸ್ತುಶಿಲ್ಪ, ತಾಂತ್ರಿಕ ಪ್ರಗತಿ, ಕೈಗಾರಿಕಾ ಕ್ರಾಂತಿ, ಫ್ಯಾಷನ್, ಪ್ರವಾಸಿ ತಾಣ ಮತ್ತು ಪ್ರೀತಿ-ಪ್ರಣಯಕ್ಕೆ ಹೆಸರಾದ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರ ಈಗ ಜಾಗತಿಕ ಕ್ರೀಡಾ ಹಬ್ಬಕ್ಕೆ ಸಜ್ಜಾಗಿದೆ. ಟೂರ್ ಡಿ ಫ್ರಾನ್ಸ್ (ಸೈಕ್ಲಿಂಗ್) ಮತ್ತು ಫ್ರೆಂಚ್ ಓಪನ್​ನಂಥ (ಟೆನಿಸ್) ಪ್ರತಿಷ್ಠಿತ ಕ್ರೀಡಾಕೂಟಗಳನ್ನು ಪ್ರತಿ ವರ್ಷ ಯಶಸ್ವಿಯಾಗಿ ಆಯೋಜಿಸುತ್ತ ಬಂದಿರುವ ಪ್ಯಾರಿಸ್ ನಗರ ಈಗ ಪ್ರತಿ 4 ವರ್ಷಕ್ಕೊಮ್ಮೆ (ಈ ಬಾರಿ 3 ವರ್ಷದಲ್ಲೇ ಬಂದಿದೆ) ಬರುವ ಕ್ರೀಡಾ ಜಾತ್ರೆಗೆ ವೇದಿಕೆಯಾಗುತ್ತಿದೆ. ಪ್ಯಾರಿಸ್​ಗೆ ಒಲಿಂಪಿಕ್ಸ್ ಆತಿಥ್ಯವೂ ಹೊಸದಲ್ಲ. 3ನೇ ಬಾರಿ ಮತ್ತು ಭರ್ತಿ 100 ವರ್ಷಗಳ ಬಳಿಕ ಒಲಿಂಪಿಕ್ಸ್ ವಹಿಸಿಕೊಳ್ಳುತ್ತಿರುವ ಹೆಗ್ಗಳಿಕೆ ಅದರದು. 21ನೇ ಶತಮಾನದಲ್ಲಿ ಮೊದಲ ಬಾರಿ ಒಲಿಂಪಿಕ್ಸ್ ಆಯೋಜಿಸುತ್ತಿರುವ ಪ್ಯಾರಿಸ್ ನಗರ, ಈಗಲೂ ಉಳಿಸಿಕೊಂಡು ಬಂದಿರುವ ತನ್ನ ಸಂಸ್ಕೃತಿ, ಬೆಳೆದುನಿಂತಿರುವ ಆಧುನಿಕ ತಂತ್ರಜ್ಞಾನ ಮತ್ತು ಸದಾ ಸ್ಪೂರ್ತಿಯ ಚಿಲುಮೆಯಾಗಿರುವ ತನ್ನ ಕ್ರೀಡಾ ಶಕ್ತಿಯನ್ನು ಜಗತ್ತಿನ ಎದುರು ತೆರೆದಿಡುವ ಉತ್ಸಾಹದಲ್ಲಿದೆ. ಮುಂದಿನ 17 ದಿನಗಳ ಕಾಲ ಪ್ಯಾರಿಸ್ ನಗರ ಮತ್ತು ಅದರ ಸುತ್ತಮುತ್ತಲಿನಲ್ಲಿ ಕ್ರೀಡಾ ವೈಭವ ತೆರೆದುಕೊಳ್ಳಲಿದೆ. 32 ಕ್ರೀಡೆಗಳ 329 ವಿಭಾಗಗಳಲ್ಲಿ ಸ್ವರ್ಣ ಪದಕಗಳಿಗೆ ಹೋರಾಟಗಳು ನಡೆಯಲಿವೆ. ಜಗತ್ತಿನ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ತಮ್ಮ ಕ್ರೀಡಾ ಕೌಶಲವನ್ನು ಪ್ರದರ್ಶಿಸಲಿದ್ದಾರೆ.

ಒಲಿಂಪಿಕ್ಸ್ ಎಂದರೆ ಬರೀ ಕ್ರೀಡಾಕೂಟವೂ ಅಲ್ಲ. ಅದು ಇಡೀ ಜಗತ್ತನ್ನೇ ಒಗ್ಗೂಡಿಸುವ ಮಹಾ ವೇದಿಕೆ. ಆತಿಥೇಯ ದೇಶದ ಸಂಸ್ಕೃತಿ, ಸಂಪ್ರದಾಯ, ಶ್ರೀಮಂತಿಕೆ ಅನಾವರಣದ ಜತೆಯಲ್ಲೇ ಜಗತ್ತಿನ ಎಲ್ಲೆಡೆಯ ಜನರೆಲ್ಲ ಸೌಹಾರ್ದತೆಯಿಂದ ಒಂದೆಡೆ ಸೇರಿ ಪರಸ್ಪರರ ಸಂಸ್ಕೃತಿ, ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ಒಲಿಂಪಿಕ್ಸ್ ಉತ್ತಮ ಅವಕಾಶವೆನಿಸಿದೆ.

ಐಫೆಲ್ ಟವರ್ ಪ್ರಮುಖ ಭಾಗ: ಪ್ಯಾರಿಸ್​ನ ಪ್ರಸಿದ್ಧ ಪ್ರವಾಸಿ ತಾಣ ಐಫೆಲ್ ಟವರ್. ಫ್ರೆಂಚ್ ಕ್ರಾಂತಿಯ 100ನೇ ವರ್ಷಾಚರಣೆಯ ಅಂಗವಾಗಿ 1889ರಲ್ಲಿ ‘ವರ್ಲ್ಡ್್ಸ ಫೇರ್’ ಉತ್ಸವದ ವೇಳೆ 18,038 ಕಬ್ಬಿಣದ ಭಾಗಗಳಿಂದ 330 ಮೀಟರ್ (1,083 ಅಡಿ) ಎತ್ತರದ ಐಫೆಲ್ ಟವರ್ ನಿರ್ವಿುಸಲಾಗಿತ್ತು. ಇಂಜಿನಿಯರ್ ಗುಸ್ಟವ್ ಐಫೆಲ್ 20 ವರ್ಷಗಳ ಬಾಳ್ವಿಕೆಗಾಗಿ ಈ ಟವರ್ ನಿರ್ವಿುಸಿದ್ದರು. ಆದರೆ ಕಾಲಕಾಲಕ್ಕೆ ಇದರ ನವೀಕರಣ ಕೆಲಸಗಳನ್ನು ಮಾಡುತ್ತ ಬಂದಿರುವ ಕಾರಣ ಇದೀಗ ಐಫೆಲ್ ಟವರ್ 135ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಟವರ್ ಈಗಾಗಲೆ 2 ಪ್ಯಾರಿಸ್ ಒಲಿಂಪಿಕ್ಸ್ ಗಳನ್ನೂ (1900, 1924) ನೋಡಿತ್ತು. ಈ ಬಾರಿ ಐಫೆಲ್ ಟವರ್ ಒಲಿಂಪಿಕ್ಸ್​ನ ಪ್ರಮುಖ ಭಾಗವೂ ಆಗಿರಲಿದೆ. ಈ ಟವರ್ ಕೆಳಗಿನ ತಾತ್ಕಾಲಿಕ ಹೊರಾಂಗಣ ಅರೆನಾದಲ್ಲೇ ಬೀಚ್ ವಾಲಿಬಾಲ್ ಸ್ಪರ್ಧೆ ನಡೆಯಲಿವೆ. ಕ್ರೀಡಾಕೂಟದಲ್ಲಿ ನೀಡಲಾಗುವ ಪದಕಗಳಲ್ಲೂ ನೆನಪಿನ ಕಾಣಿಕೆಯಾಗಿ ಈ ಟವರ್​ನ ಕಬ್ಬಿಣದ ತುಂಡು ಇರಲಿದೆ.

ಪುರುಷ-ಮಹಿಳಾ ಸಮಾನತೆ: ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು 50:50 ಅನುಪಾತದಲ್ಲಿ ಸಂಪೂರ್ಣ ಸಮಾನವಾಗಿ ಸ್ಪರ್ಧಿಸಲಿದ್ದಾರೆ. 1900ರ 2ನೇ ಆವೃತ್ತಿಯ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಮಹಿಳೆಯರು (22) ಭಾಗವಹಿಸಿದ್ದರು. ಆಗ ಮಹಿಳೆಯರ ಸ್ಪರ್ಧೆ ಕೇವಲ ಶೇ. 2.2 ಆಗಿತ್ತು. 1984ರ ವೇಳೆಯೂ ಮಹಿಳೆಯರ ಸಂಖ್ಯೆ ಶೇ. 23 ಮಾತ್ರ ಇತ್ತು. 2012ರಲ್ಲಿ ಮಹಿಳಾ ಸ್ಪರ್ಧಿಗಳ ಪ್ರಮಾಣ ಶೇ. 44ಕ್ಕೆ ಏರಿಕೆಯಾಗಿದ್ದರೆ, 2021ರ ಟೋಕಿಯೊ ಗೇಮ್ಸ್​ನಲ್ಲಿ ಇದು ಶೇ. 48ಕ್ಕೆ ಏರಿತ್ತು ಮತ್ತು ಕ್ರೀಡಾಪಟುಗಳ ಪಥಸಂಚಲನದಲ್ಲಿ ಪುರುಷರ ಜತೆ ಮಹಿಳಾ ಧ್ವಜಧಾರಿಯ ನೇಮಕ ಕಡ್ಡಾಯಗೊಳಿಸಲಾಗಿತ್ತು. ಈ ಬಾರಿ ಪುರುಷ-ಮಹಿಳಾ ಕ್ರೀಡಾಪಟುಗಳ ಸಂಖ್ಯೆ ಶೇ. 50 ಸಮಾನವಾಗಿದೆ. ಅಂದರೆ 10,500 ಕ್ರೀಡಾಪಟುಗಳಲ್ಲಿ 5,250 ಪುರುಷರಾಗಿದ್ದರೆ, ಮಹಿಳೆಯರೂ ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಕೂಟದ 329 ಸ್ವರ್ಣ ಪದಕ ಸ್ಪರ್ಧೆಗಳಲ್ಲಿ 152 ಮಹಿಳೆಯರಿಗೆ ಮತ್ತು 157 ಪುರುಷರಿಗೆ ಮೀಸಲಾಗಿದ್ದರೆ, 20 ಮಿಶ್ರ ಸ್ಪರ್ಧೆಗಳಾಗಿವೆ. ಲಿಂಗ ಸಮಾನತೆಯಿಂದ ಪುರುಷರಿಗೂ ಲಾಭವಾಗಿದ್ದು, ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಪುರುಷರ ಆರ್ಟಿಸ್ಟಿಕ್ ಈಜು ಸ್ಪರ್ಧೆಯೂ ನಡೆಯಲಿದೆ.

ಬ್ರೇಕ್ ಡ್ಯಾನ್ಸ್ ಸೇರ್ಪಡೆ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಈ ಬಾರಿ ನೃತ್ಯವೂ ಒಂದು ಪದಕ ಸ್ಪರ್ಧೆಯಾಗಿದೆ. ಅಂದರೆ ಆತಿಥೇಯ ಫ್ರಾನ್ಸ್ ದೇಶದ ಒಲವಿನ ಮೇರೆಗೆ ಬ್ರೇಕ್ ಡ್ಯಾನ್ಸ್ ಸ್ಪರ್ಧೆಯನ್ನು ಈ ಬಾರಿ ಒಲಿಂಪಿಕ್ಸ್​ಗೆ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಒಂದು ಸ್ವರ್ಣ ಪದಕಗಳಿಗಾಗಿ ಬ್ರೇಕ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ. ಡ್ಯಾನ್ಸರ್​ಗಳ ಕಾಲುಗಳ ಚಲನೆ, ಗಾಳಿಯಲ್ಲಿ ದೇಹದ ಚಲನೆ ಮತ್ತು ಸ್ತಬ್ಧತೆಯ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಟೋಕಿಯೊದಲ್ಲಿ ಪರಿಚಯಿಸಲಾಗಿದ್ದ ಸ್ಕೇಟ್​ಬೋರ್ಡಿಂಗ್, ಸ್ಪೋರ್ಟ್ಸ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಸ್ಪರ್ಧೆಗಳನ್ನು ಉಳಿಸಿಕೊಳ್ಳಲಾಗಿದೆ.

100 ವರ್ಷಗಳ ಬಳಿಕ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್ ಜಾತ್ರೆ: ಪ್ಯಾರಿಸ್​ನಲ್ಲಿ ಭರ್ತಿ 100 ವರ್ಷಗಳ ಬಳಿಕ ಒಲಿಂಪಿಕ್ಸ್ ಆಯೋಜನೆಗೊಂಡಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ ಪ್ಯಾರಿಸ್​ನಲ್ಲಿ ಇದು 3ನೇ ಒಲಿಂಪಿಕ್ಸ್ ಆಗಿದೆ. ಈ ಮುನ್ನ 1900 ಮತ್ತು 1924ರ ಒಲಿಂಪಿಕ್ಸ್​ಗೆ ಪ್ಯಾರಿಸ್ ಆತಿಥ್ಯ ವಹಿಸಿತ್ತು. ಲಂಡನ್ (1908, 1948, 2012) ಬಳಿಕ 3 ಬಾರಿ ಒಲಿಂಪಿಕ್ಸ್ ಆತಿಥ್ಯ ವಹಿಸಿದ 2ನೇ ನಗರ ಎಂಬ ಹೆಗ್ಗಳಿಕೆ ಪ್ಯಾರಿಸ್​ನದ್ದಾಗಿದೆ.

ಸರ್ಫಿಂಗ್ ಸ್ಪರ್ಧೆ ಮಾತ್ರ ದೂರ: ಪ್ಯಾರಿಸ್ ನಗರದ ಜತೆಗೆ ಅಕ್ಕಪಕ್ಕದ ಕೆಲ ನಗರಗಳಲ್ಲಿ ಕ್ರೀಡಾಕೂಟದ ಬಹುತೇಕ ಎಲ್ಲ ಸ್ಪರ್ಧೆಗಳು ನಡೆಯಲಿವೆ. ಒಟ್ಟು 35 ಕ್ರೀಡಾತಾಣಗಳ ಪೈಕಿ 25 ಪ್ಯಾರಿಸ್ ನಗರದಲ್ಲೇ ಇವೆ. ಆದರೆ ಒಂದು ಸ್ಪರ್ಧೆ ಅಂದರೆ ಸರ್ಫಿಂಗ್ ಮಾತ್ರ ಪ್ಯಾರಿಸ್ ನಗರದಿಂದ ಬರೋಬ್ಬರಿ 15,800 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಪೆಸಿಫಿಕ್ ಮಹಾಸಾಗರದ ಫ್ರೆಂಚ್ ಪಾಲಿನೇಷ್ಯಾದ ತಹಿಟಿ ದ್ವೀಪದ ಟೀಹುಪೂಓ ಕಡಲ ಕಿನಾರೆಯಲ್ಲಿ ನಡೆಯಲಿದೆ. ಇದು ಒಲಿಂಪಿಕ್ಸ್​ನಲ್ಲಿ ಆತಿಥೇಯ ನಗರ ಮತ್ತು ಕ್ರೀಡಾಸ್ಪರ್ಧೆಯ ನಡುವಿನ ಅತ್ಯಂತ ಅಂತರವಾಗಿದೆ. 1956ರ ಮೆಲ್ಬೊರ್ನ್ ಒಲಿಂಪಿಕ್ಸ್​ನಲ್ಲಿ ಕ್ವಾರಂಟೈನ್ ನಿರ್ಬಂಧಗಳಿಂದಾಗಿ ಈಕ್ವೆಸ್ಟ್ರಿಯನ್ ಸ್ಪರ್ಧೆಗಳು 15,600 ಕಿಲೋಮೀಟರ್ ದೂರದ ಸ್ಟಾಕ್​ಹೋಲ್ಮ್​ನಲ್ಲಿ ನಡೆದಿತ್ತು.

ಪದಕಗಳ ಮಧ್ಯದಲ್ಲಿದೆ ಕಬ್ಬಿಣದ ತುಂಡು!

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ವಿವಿಧ ಕ್ರೀಡಾಸ್ಪರ್ಧೆ ಗಳಲ್ಲಿ ಮೊದಲ 3 ಸ್ಥಾನ ಪಡೆಯುವ ಕ್ರೀಡಾಪಟುಗಳಿಗೆ ನೀಡಲಾಗುವ ಪದಕಗಳಲ್ಲಿ ಬರೀ ಚಿನ್ನ, ಬೆಳ್ಳಿ ಮತ್ತು ಕಂಚು ಮಾತ್ರವಲ್ಲದೆ ಕಬ್ಬಿಣವೂ ಇರಲಿದೆ! ಆದರೆ ಇದು ಅಂತಿಂಥ ಕಬ್ಬಿಣವಲ್ಲ. ಪ್ಯಾರಿಸ್ ನಗರದ ಜಗದ್ವಿಖ್ಯಾತ ಐಫೆಲ್ ಟವರ್​ನ ಕಬ್ಬಿಣದ ತುಂಡುಗಳಾಗಿವೆ! ಪದಕಗಳನ್ನು ಈ ಬಾರಿ ಕ್ರಾಂತಿಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ. ಐಫೆಲ್ ಟವರ್ ನವೀಕರಣ ಕೆಲಸದ ವೇಳೆ ಕತ್ತರಿಸಲ್ಪಟ್ಟ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅವುಗಳನ್ನು ಈಗ ಒಲಿಂಪಿಕ್ಸ್ ಪದಕಗಳಲ್ಲಿ ಬಳಸಲಾಗುತ್ತಿದೆ. ಪ್ರತಿ ಪದಕವೂ 18 ಗ್ರಾಂ ಭಾರದ ಕಬ್ಬಿಣದ ತುಂಡನ್ನು ಒಳಗೊಂಡಿರಲಿದೆ. ಪದಕಗಳ ಹೊರಮುಖದಲ್ಲಿ ಜೋಡಿಸಲಾದ ಷಡ್ಭುಜಾಕೃತಿಯ ಈ ಕಬ್ಬಿಣದ ತುಂಡುಗಳಿಗೆ ಪಾಲಿಶ್ ಹಾಕಲಾಗಿದ್ದು, ‘ಪ್ಯಾರಿಸ್ 2024’ ಎಂದು ಅದರ ಮೇಲೆ ಬರೆಯಲಾಗಿದೆ. ಜತೆಗೆ ಪ್ಯಾರಿಸ್ ಒಲಿಂಪಿಕ್ಸ್ ಲಾಂಛನ ಮತ್ತು ಒಲಿಂಪಿಕ್ಸ್ ರಿಂಗ್​ಗಳೂ ಇದರ ಮೇಲೆ ಮುದ್ರಿಸಲ್ಪಟ್ಟಿವೆ. ಫ್ರಾನ್ಸ್ ದೇಶದ ನಕ್ಷೆ ಷಡ್ಭುಜಾಕೃತಿಯಲ್ಲಿದೆ. ಹೀಗಾಗಿ ಕಬ್ಬಿಣದ ತುಂಡನ್ನು ಅದೇ ರೀತಿ ವಿನ್ಯಾಸಗೊಳಿಸಲಾಗಿದೆ. ಪ್ಯಾರಿಸ್ ಜ್ಯುವೆಲ್ಲರಿ ಹೌಸ್ ‘ಚೌಮೆಟ್’ ಈ ಪದಕಗಳನ್ನು ವಿನ್ಯಾಸಗೊಳಿಸಿದೆ. ಒಲಿಂಪಿಕ್ಸ್ ಪದಕಗಳ ಬೆನ್ನಹಿಂದೆ, 1928ರಿಂದ ಇದುವರೆಗಿನ ಎಲ್ಲ ಒಲಿಂಪಿಕ್ಸ್ ಪದಕಗಳಲ್ಲಿರುವಂತೆ ಗ್ರೀಕ್ ಪ್ರಾಚೀನ ವಿಜಯ ದೇವತೆ ‘ನೈಕ್’ ಚಿತ್ರವಿರಲಿದೆ. ಜತೆಗೆ ಐಫೆಲ್ ಟವರ್ ಚಿತ್ರವನ್ನೂ ಸಣ್ಣದಾಗಿ ಮುದ್ರಿಸಲಾಗಿದೆ.

ಪದಕ ವಿಜೇತರಿಗೆ ನಗದು: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಗ್ರ ಮೂವರು ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನಷ್ಟೇ ವಿತರಿಸಲಾಗುತ್ತದೆ. ಕೆಲವೊಮ್ಮೆ ಆತಿಥೇಯ ದೇಶಗಳು ಹೂಗುಚ್ಛಗಳನ್ನೂ ನೀಡಿ ಸತ್ಕರಿಸುತ್ತವೆ. ಇದರ ಹೊರತಾಗಿ ಸ್ಪರ್ಧಾ ವಿಜೇತರಿಗೆ ಯಾವುದೇ ನಗದುಬಹುಮಾನವನ್ನು ಸಂಘಟಕರು ನೀಡುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್​ನಲ್ಲಿ ಎಲ್ಲ 48 ಸ್ವರ್ಣ ವಿಜೇತರಿಗೆ ತಲಾ 42 ಲಕ್ಷ ರೂಪಾಯಿ (50 ಸಾವಿರ ಡಾಲರ್) ನಗದು ಬಹುಮಾನ ಸಿಗಲಿದೆ. ಒಲಿಂಪಿಕ್ಸ್​ನಿಂದ ಬರುವ ಆದಾಯದಲ್ಲಿ ತನಗೆ ಸಿಗುವ ಪಾಲಿನಲ್ಲಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಈ ಬಹುಮಾನವನ್ನು ವಿತರಿಸುತ್ತಿದೆ. 2028ರಿಂದ ಬೆಳ್ಳಿ, ಕಂಚು ವಿಜೇತರಿಗೂ ನಗದು ಬಹುಮಾನ ನೀಡುವುದಾಗಿ ತಿಳಿಸಿದೆ. ಇದರ ಹೊರತಾಗಿ ಕ್ರೀಡಾಪಟುಗಳಿಗೆ ಅವರ ತವರಿನ ದೇಶದ ಸರ್ಕಾರಗಳು ಬಹುಮಾನ ನೀಡುವುದು ಇದ್ದೇ ಇರುತ್ತದೆ. ಆತಿಥೇಯ ಫ್ರಾನ್ಸ್ ತನ್ನ ದೇಶದ ಸ್ವರ್ಣ ವಿಜೇತರಿಗೆ 71 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದೆ. ಅಮೆರಿಕ ಚಿನ್ನ, ಬೆಳ್ಳಿ, ಕಂಚು ವಿಜೇತರಿಗೆ ಕ್ರಮವಾಗಿ 32, 19, 13 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದೆ. ಇದಕ್ಕೆ ಹೋಲಿಸಿದರೆ ಭಾರತದ ಕ್ರೀಡಾಪಟುಗಳೇ ಭಾಗ್ಯವಂತರಾಗಿದ್ದು, ಪದಕ ಗೆದ್ದರೆ ಕೋಟಿ ಕೋಟಿ ಲೆಕ್ಕದಲ್ಲಿ ಬಹುಮಾನ ಗಳಿಸುವ ಅವಕಾಶ ಹೊಂದಿದ್ದಾರೆ.

ವೇಗದ ತಾರೆಯರಾಗುವರೇ ನೋವಾ ಲೈಲ್ಸ್, ಶಾ ಕಾರಿ?: ಒಲಿಂಪಿಕ್ಸ್​ನಲ್ಲಿ ಅತ್ಯಂತ ಕುತೂಹಲಕಾರಿ ಮತ್ತು ರೋಚಕ ಸ್ಪರ್ಧೆ 100 ಮೀಟರ್ ಓಟ. ಕೂಟದ ವೇಗದ ಓಟಗಾರರು ಯಾರಾಗುತ್ತಾರೆ ಎಂಬ ಕುತೂಹಲ ಯಾವಾಗಲೂ ಇರುತ್ತದೆ. ಜೆಸ್ಸಿ ಓವನ್ಸ್, ಕಾರ್ಲ್ ಲೂಯಿಸ್, ಉಸೇನ್ ಬೋಲ್ಟ್ ರೀತಿ ಪ್ರಾಬಲ್ಯ ಸಾಧಿಸಿದವರು ಈಗಿಲ್ಲ. ಟೋಕಿಯೊದಲ್ಲಿ ಇಟಲಿಯ ಮಾರ್ಸೆಲ್ ಜೇಕಬ್ಸ್ ಅಚ್ಚರಿಯ ರೀತಿಯಲ್ಲಿ ಗೆದ್ದಿದ್ದರೂ, ಪ್ಯಾರಿಸ್​ನಲ್ಲಿ ಅದನ್ನೇ ಪುನರಾವರ್ತಿಸುವ ನಿರೀಕ್ಷೆ ಇಲ್ಲ. ಹೀಗಾಗಿ ಈಗ ಒಲಿಂಪಿಕ್ಸ್​ನಲ್ಲಿ ಪುರುಷರ 100 ಮೀ. ಓಟದ ಸ್ಪರ್ಧೆ ಅತ್ಯಂತ ಮುಕ್ತವಾಗಿದೆ. ಅಮೆರಿಕದ ನೋವಾ ಲೈಲ್ಸ್ ಈ ಸಲ ಫೇವರಿಟ್ ಎನಿಸಿದ್ದಾರೆ. ಜಮೈಕಾದ ಯುವತಾರೆಯರಾದ ಕಿಶನೆ ಥಾಂಪ್ಸನ್ ಮತ್ತು ಒಬ್ಲಿಕ್ ಸೆವಿಲ್ಲೆ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ. ಮಹಿಳೆಯರ 100 ಮೀ. ಓಟದಲ್ಲಿ ಅಮೆರಿಕದ ಯುವ ತಾರೆ ಶಾಕಾರಿ ರಿಚರ್ಡ್​ಸನ್ ಫೇವರಿಟ್ ಎನಿಸಿದ್ದು, ಪದಾರ್ಪಣೆಯ ಒಲಿಂಪಿಕ್ಸ್​ನಲ್ಲಿ ಗಮನ ಸೆಳೆಯುವ ಹಂಬಲದಲ್ಲಿದ್ದಾರೆ. 5ನೇ ಹಾಗೂ ಕೊನೇ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುತ್ತಿರುವ ಜಮೈಕಾದ ಅನುಭವಿ ಓಟಗಾರ್ತಿ ಶೆಲ್ಲಿ ಆನ್ ಫ್ರೇಸರ್ ನಿಕಟ ಪೈಪೋಟಿ ನೀಡಬಹುದು.

ಮುಂದಿನ ಬಾರಿ ಟಿ20 ಕ್ರಿಕೆಟ್ ಸ್ಪರ್ಧೆ: ಸಾಮಾನ್ಯವಾಗಿ 4 ವರ್ಷಕ್ಕೊಮ್ಮೆ ಒಲಿಂಪಿಕ್ಸ್ ಬಂದಾಗ ಭಾರತೀಯರು ತಮ್ಮ ನೆಚ್ಚಿನ ಕ್ರಿಕೆಟ್ ಆಟವನ್ನು ಸ್ವಲ್ಪ ಸಮಯ ಬದಿಗಿಟ್ಟು ಇತರ ಕ್ರೀಡೆಗಳತ್ತ ಗಮನಹರಿಸುತ್ತಾರೆ. ಆದರೆ ಮುಂದಿನ ಬಾರಿ ಹೀಗೆ ಆಗುವುದಿಲ್ಲ. ಯಾಕೆಂದರೆ ಕ್ರಿಕೆಟ್ ಕೂಡ ಒಲಿಂಪಿಕ್ಸ್​ನಭಾಗವಾಗಿರಲಿದೆ. ಹೌದು, ನಾಲ್ಕೂ ವರ್ಷಗಳ ಬಳಿಕ ಮುಂದಿನ ಒಲಿಂಪಿಕ್ಸ್ 2028ರಲ್ಲಿ ಅಮೆರಿಕದ ಲಾಸ್ ಏಂಜಲಿಸ್​ನಲ್ಲಿ ನಡೆದಾಗ ಟಿ20 ಕ್ರಿಕೆಟ್ ಕೂಡ ಸ್ವರ್ಣ ಪದಕದ ಸ್ಪರ್ಧೆಯಾಗಿರಲಿದೆ. ಅಂದ ಹಾಗೆ ಕ್ರಿಕೆಟ್ ಒಲಿಂಪಿಕ್ಸ್​ಗೆ ಹೊಸ ಸೇರ್ಪಡೆಯಲ್ಲ. 1900ರ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಮೊದಲ ಬಾರಿ ಮತ್ತು ಕೊನೇ ಬಾರಿ ಪದಕ ಸ್ಪರ್ಧೆಯಾಗಿತ್ತು.

40 ವರ್ಷಗಳ ಬಳಿಕ ಸ್ಪರ್ಧೆ!: ವೆನೆಜುವೆಲಾದ ಟ್ರಾ್ಯಪ್ ಶೂಟರ್ ಲಿಯೋನೆಲ್ ಮಾರ್ಟಿನೆಜ್ 40 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ. 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಲ್ಲಿ 20ನೇ ವಯಸ್ಸಿನಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದರು. ಇದೀಗ 60ನೇ ವಯಸ್ಸಿನಲ್ಲಿ ಮತ್ತೆ ಪ್ಯಾರಿಸ್​ನಲ್ಲಿ ಸ್ಪರ್ಧಿಸಲಿದ್ದಾರೆ. ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಎರಡು ಸ್ಪರ್ಧೆಗಳ ನಡುವಿನ 2ನೇ ಗರಿಷ್ಠ ಅಂತರವಾಗಿದೆ. ಜಪಾನ್​ನ ಈಕ್ವೆಸ್ಟ್ರಿಯನ್ ಸ್ಪರ್ಧಿ ಹಿರೋಶಿ ಹೊಕೆತ್ಸು 1964ರ ಟೋಕಿಯೊ ಮತ್ತು 2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದು ಗರಿಷ್ಠ ಅಂತರದ (44 ವರ್ಷ) ದಾಖಲೆಯಾಗಿದೆ.

68,477 ಕೋಟಿ ರೂ. ವೆಚ್ಚ: ಪ್ಯಾರಿಸ್ ಒಲಿಂಪಿಕ್ಸ್ ಆಯೋಜನೆಯ ಅಂದಾಜು ವೆಚ್ಚ 68,477 ಕೋಟಿ ರೂ. (8.2 ಶತಕೋಟಿ ಡಾಲರ್) ಆಗಿದೆ. ಒಟ್ಟಾರೆಯಾಗಿ ಇದು ಆರನೇ ದುಬಾರಿ ಒಲಿಂಪಿಕ್ಸ್ ಎನಿಸಿದೆ. ಈ ಪೈಕಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಗ್ರಾಮ ನಿರ್ವಣಕ್ಕೆ 13,362 ಕೋಟಿ ರೂ. ವ್ಯಯಿಸಲಾಗಿದೆ. 37,579 ಕೋಟಿ ರೂ.ಗಳನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಕ್ರೀಡಾಸ್ಪರ್ಧೆಗಳಿಗೆ ಶೇ. 95ರಷ್ಟು ಈಗಾಗಲೆ ಇದ್ದ ಕ್ರೀಡಾಂಗಣಗಳನ್ನೇ ಬಳಸಿಕೊಳ್ಳಲಾಗುತ್ತಿದೆ.

ಹೆಚ್ಚಿನ ಮಿಶ್ರ ವಿಭಾಗಗಳು...: ಈ ಸಲ ಪುರುಷ-ಮಹಿಳೆಯರ ಪ್ರತ್ಯೇಕ ಸ್ಪರ್ಧೆಗಳ ನಡುವೆ ಮಿಶ್ರ ವಿಭಾಗದ ಸ್ಪರ್ಧೆಗಳನ್ನೂ ಹೆಚ್ಚಿಸಲಾಗಿದೆ. ಆರ್ಚರಿ, ಟೆನಿಸ್, ಟೇಬಲ್ ಟೆನಿಸ್, ಶೂಟಿಂಗ್ ಮಿಶ್ರ ವಿಭಾಗದ ಸ್ಪರ್ಧೆಗಳ ಜತೆಗೆ ಮ್ಯಾರಥಾನ್ ನಡಿಗೆ, ಸೈಲಿಂಗ್ ಸ್ಪರ್ಧೆಗಳಲ್ಲಿ ಮಿಶ್ರ ವಿಭಾಗವನ್ನು ಪರಿಚಯಿಸಲಾಗುತ್ತಿದೆ. ಶೂಟಿಂಗ್, ಈಜಿನಲ್ಲಿ ಮಿಶ್ರ ವಿಭಾಗದ ಸ್ಪರ್ಧೆಗಳನ್ನು ಹೆಚ್ಚಿಸಲಾಗಿದೆ. ಕುದುರೆ ಸವಾರಿ ಸ್ಪರ್ಧೆಯಲ್ಲಿ ಎಂದಿನಂತೆ ಪುರುಷ-ಮಹಿಳೆಯರ ಬೇಧವಿಲ್ಲದೆ ಜತೆಯಾಗಿ ಸ್ಪರ್ಧಿಸಲಿದ್ದಾರೆ.

ಮೂರೇ ವರ್ಷಗಳಲ್ಲಿ ಒಲಿಂಪಿಕ್ಸ್!: ಒಲಿಂಪಿಕ್ಸ್ ಯಾವಾಗಲೂ 4 ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ ಈ ಬಾರಿ ಮೂರೇ ವರ್ಷಗಳಲ್ಲಿ ಒಲಿಂಪಿಕ್ಸ್ ಆಯೋಜನೆಗೊಳ್ಳುತ್ತಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್ ಕರೊನಾ ಭೀತಿಯಿಂದಾಗಿ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟು 2020ರ ಬದಲಿಗೆ 2021ರಲ್ಲಿ ನಡೆದಿದ್ದು ಇದಕ್ಕೆ ಕಾರಣವಾಗಿದೆ. ಆದರೆ ಮುಂದಿನ ಬಾರಿ 4 ವರ್ಷಗಳ ಬಳಿಕವೇ (2028) ಒಲಿಂಪಿಕ್ಸ್ ನಡೆಯಲಿದೆ.

3 ಗಂಟೆ, 30 ನಿಮಿಷಗಳ ವ್ಯತ್ಯಾಸ: ಭಾರತ ಮತ್ತು ಪ್ಯಾರಿಸ್ ನಡುವೆ ಮೂರೂವರೆ ಗಂಟೆಗಳ ಸಮಯ ವ್ಯತ್ಯಾಸವಿದೆ. ಅಂದರೆ ಭಾರತದ ಸಮಯ, ಫ್ರಾನ್ಸ್​ಗಿಂತ 3 ಗಂಟೆ 30 ನಿಮಿಷಗಳಷ್ಟು ಮುಂದಿದೆ. ಹೀಗಾಗಿ ಆಗಸ್ಟ್ 8ರಂದು ಪ್ಯಾರಿಸ್​ನಲ್ಲಿ ರಾತ್ರಿ 8.25ಕ್ಕೆ ಶುರುವಾಗಲಿರುವ ನೀರಜ್ ಚೋಪ್ರಾ ಅವರ ಜಾವೆಲಿನ್ ಎಸೆತದ ಫೈನಲ್ ಸ್ಪರ್ಧೆ ಭಾರತದಲ್ಲಿ ರಾತ್ರಿ 11.55ರಿಂದ ನೇರಪ್ರಸಾರ ಕಾಣಲಿದೆ. ಪ್ಯಾರಿಸ್​ನಲ್ಲಿ ಭಾರತ ಹಾಕಿ ತಂಡ ಸಂಜೆ 5.30ಕ್ಕೆ ಪಂದ್ಯ ಆಡಲಾರಂಭಿಸಿದರೆ, ಭಾರತದಲ್ಲಿ ರಾತ್ರಿ 9ರಿಂದ ನೇರಪ್ರಸಾರ ಕಾಣಲಿದೆ. ಪ್ಯಾರಿಸ್​ನಲ್ಲಿ ರಾತ್ರಿ 7.30ಕ್ಕೆ ಶುರುವಾಗಲಿರುವ ಉದ್ಘಾಟನಾ ಸಮಾರಂಭ ಭಾರತದಲ್ಲಿ ರಾತ್ರಿ 11ರಿಂದ ನೇರಪ್ರಸಾರ ಕಾಣಲಿದೆ.