ಕ್ರೀಡೆ

ಕ್ರೀಡೆ-2024: ವಿಜಯ ಗರ್ವ, ವಿದಾಯ ಪರ್ವ

ಬೆಂಗಳೂರು: ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯವಾದ ವರ್ಷವಿದು. ಭಾರತ ಕ್ರೀಡಾಶಕ್ತಿಯಾಗಿ ಬೆಳೆಯುವ ನಿಟ್ಟಿನಲ್ಲಿ ಹೊಸ ಶಕ್ತಿ ತುಂಬಿತು. 2036ರ ಒಲಿಂಪಿಕ್ಸ್​ ಆತಿಥ್ಯದ ನಿಟ್ಟಿನಲ್ಲಿ ಭಾರತ ಮೊದಲ ಹೆಜ್ಜೆಯನ್ನೂ ಇಟ್ಟಿದೆ. ಕ್ರಿಕೆಟ್​ನಲ್ಲಿ ಭಾರತದ ಟಿ20 ವಿಶ್ವಕಪ್​ ಗೆಲುವು ಮೇರು ಸಾಧನೆ ಎನಿಸಿದರೆ, ಚೆಸ್​ನಲ್ಲಿ ಭಾರತ ಒಲಿಂಪಿಯಾಡ್​, ವಿಶ್ವ ಚಾಂಪಿಯನ್​ ಪಟ್ಟ ಗೆದ್ದು ಇತಿಹಾಸ ನಿರ್ಮಿಸಿತು. ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಸರ್ವಾಧಿಕ ಪದಕ ಗೆಲುವಿನ ಸಾಧನೆ ತೋರಿದರೆ, ಒಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ಗೆಲುವೊಂದೇ ಭಾರತಕ್ಕೆ ಕೊರತೆಯಾಗಿ ಕಾಡಿತು. ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಸತತ 2ನೇ ಒಲಿಂಪಿಕ್ಸ್​ ಪದಕ ಒಲಿಯಿತು. ಹಲವು ಹೊಸ ಕ್ರೀಡಾತಾರೆಯರ ಉದಯದ ನಡುವೆ ಹಿರಿಯ-ಅನುಭವಿ ಕ್ರೀಡಾಪಟುಗಳ ವಿದಾಯಕ್ಕೂ ಸಾಯಾಯಿತು.

ಆಂಗ್ಲರಿಗೆ ತಿರುಗೇಟು, ಕಿವೀಸ್​ಗೆ ಶರಣು!

ವರ್ಷಾರಂಭದಲ್ಲಿ ದಣ ಆಫ್ರಿಕಾದಲ್ಲಿ ಕೇಪ್​ಟೌನ್​ ಗೆದ್ದು ಶುಭಾರಂಭ ಕಂಡ ಭಾರತ 2 ಪಂದ್ಯಗಳ ಸರಣಿಯಲ್ಲಿ 1&1 ಸಮಬಲ ಸಾಧಿಸಿತು. ಬೆನ್ನಲ್ಲೇ ತವರಿನಲ್ಲಿ ಇಂಗ್ಲೆಂಡ್​ ತಂಡದ ಬಾಜ್​ಬಾಲ್​ ಆಕ್ರಮಣದ ಎದುರು ಮೊದಲ ಟೆಸ್ಟ್​ ಸೋತ ಭಾರತ ನಂತರ ಸತತ 4 ಟೆಸ್ಟ್​ ಗೆಲ್ಲುವ ಮೂಲಕ ತಿರುಗೇಟು ನೀಡಿ 4-1ರಿಂದ ಸರಣಿ ವಶಪಡಿಸಿಕೊಂಡಿತು. ವರ್ಷದ ಕೊನೆಯಲ್ಲಿ ಬಾಂಗ್ಲಾ ಎದುರು ತವರಿನಲ್ಲಿ 2-0 ಸರಣಿ ಗೆದ್ದ ಭಾರತ, ಪ್ರವಾಸಿ ನ್ಯೂಜಿಲೆಂಡ್​ ತಂಡದ ಎದುರು ತನ್ನ ಸ್ಪಿನ್​ ಖೆಡ್ಡಾಗೆ ತಾನೇ ಬಿದ್ದು 0-3ರಿಂದ ವೈಟ್​ವಾಷ್​ ಮುಖಭಂಗ ಎದುರಿಸಿತು. ಇದರಿಂದ ತವರಿನಲ್ಲಿ ಸತತ 18 ಟೆಸ್ಟ್​ ಸರಣಿ ಗೆಲುವಿನ ಓಟವೂ ಕೊನೆಗೊಂಡಿತು. ವರ್ಷಾಂತ್ಯದಲ್ಲಿ ಆಸೀಸ್​ ನೆಲದ ಬಾರ್ಡರ್​-ಗಾವಸ್ಕರ್​ ಟ್ರೋಫಿ ಸರಣಿಯಲ್ಲಿ ಜಿದ್ದಾಜಿದ್ದಿನ ನಿರ್ವಹಣೆ ತೋರಿದರೂ 1-2 ಹಿನ್ನಡೆ ಅನುಭವಿಸಿದ್ದು, ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪ್ರವೇಶವೂ ಅನಿಶ್ಚಿತವೆನಿಸಿದೆ.

ದ್ರಾವಿಡ್​ ನಿರ್ಗಮನ, ಗಂಭೀರ್​ ಆಗಮನ

ಟಿ20 ವಿಶ್ವಕಪ್​ ಗೆಲುವಿನೊಂದಿಗೆ ಕನ್ನಡಿಗ ರಾಹುಲ್​ ದ್ರಾವಿಡ್​ ಭಾರತ ತಂಡದ ಮುಖ್ಯ ಕೋಚ್​ ಹುದ್ದೆಯಿಂದ ಸಂಭ್ರಮದ ವಿದಾಯ ಪಡೆದರೆ, ಮೆಂಟರ್​ ಆಗಿ ಕೆಕೆಆರ್​ಗೆ ಐಪಿಎಲ್​ ಪ್ರಶಸ್ತಿ ಗೆದ್ದುಕೊಟ್ಟ ಜೋಶ್​ನಲ್ಲಿ ಕೋಚ್​ ಹುದ್ದೆಗೇರಿದ ಗೌತಮ್​ ಗಂಭೀರ್​ಗೆ ಕಠಿಣ ಸವಾಲು ಎದುರಾಗಿದೆ.

17 ವರ್ಷಗಳ ನಂತರ ಒಲಿದ ಟಿ20 ವಿಶ್ವಕಪ್​

ಅಮೆರಿಕ&ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಜೂನ್​ನಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ 17 ವರ್ಷಗಳ ಬಳಿಕ ಚಾಂಪಿಯನ್​ ಪಟ್ಟವೇರಿ ಹೊಸ ಇತಿಹಾಸ ಬರೆಯಿತು. ಈ ಮೂಲಕ 11 ವರ್ಷಗಳ ಭಾರತ ಐಸಿಸಿ ಟ್ರೋಫಿ ಬರವನ್ನೂ ನೀಗಿಸಿಕೊಂಡಿತು. ಸತತ 8 ಜಯದೊಂದಿಗೆ ಭಾರತ ಅಜೇಯವಾಗಿ ಟಿ20 ವಿಶ್ವಕಪ್​ ಗೆದ್ದ ಮೊದಲ ತಂಡವೆನಿಸಿತು. ಫೈನಲ್​ನಲ್ಲಿ ದ. ಆಫ್ರಿಕಾ ವಿರುದ್ಧ ಕೇವಲ 7 ರನ್​ಗಳಿಂದ ರೋಚಕ ಗೆಲುವು ದಾಖಲಿಸಿತು. ಇದೇ ಸಂಭ್ರಮದ ನಡುವೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದರು. ತವರಿಗೆ ಮರಳಿದ ಭಾರತ ತಂಡಕ್ಕೆ ಮುಂಬೈನಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಅಭೂತಪೂರ್ವ ಸ್ವಾಗತ ನೀಡಿದರು. ಹಾಲಿ ವರ್ಷ ಆಡಿದ 26 ಟಿ20 ಪಂದ್ಯಗಳಲ್ಲಿ ಭಾರತ 24ರಲ್ಲಿ ಗೆದ್ದು (ಕೇವಲ 2 ಸೋಲು) ಪ್ರಾಬಲ್ಯ ಸಾಧಿಸಿತು.

ಪ್ಯಾರಿಸ್​ನಲ್ಲಿ ಪದಕ ಪರಾಕ್ರಮ

ವಿನೂತನ ಆರಂಭೋತ್ಸವ ಕಂಡ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತ 1 ಬೆಳ್ಳಿ, 5 ಕಂಚಿನ ಸಹಿತ 6 ಪದಕ ಗೆದ್ದುಕೊಂಡಿತು. ಇದು ಟೋಕಿಯೊಗಿಂತ 1 ಪದಕ ಕಡಿಮೆಯಾಗಿತ್ತು. ಪ್ರಮುಖವಾಗಿ ಚಿನ್ನ ತಪ್ಪಿದ ಬೇಸರ ಕಾಡಿತು. ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಟೋಕಿಯೊದಲ್ಲಿ ಗೆದ್ದ ಚಿನ್ನ ಉಳಿಸಿಕೊಳ್ಳಲು ವಿಲರಾಗಿ ರಜತಕ್ಕೆ ಸಮಾಧಾನ ಕಂಡರು. ಶೂಟರ್​ ಮನು ಭಾಕರ್​ ಅವಳಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರೆ, ಕುಸ್ತಿಯಲ್ಲಿ ಅಮನ್​ ಸೆಹ್ರಾವತ್​ ಭಾರತೀಯ ಪೈಲ್ವಾನರ ಒಲಿಂಪಿಕ್ಸ್​ ಪದಕ ಗೆಲುವಿನ ಓಟ ಕಾಯ್ದುಕೊಂಡರು. ಕೆಲ ಸ್ಪರ್ಧೆಗಳಲ್ಲಿ ಭಾರತೀಯರು 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಕಾರಣ ಮೊದಲ ಬಾರಿ ಎರಡಂಕಿ ಪದಕ ಗೆಲ್ಲುವ ಅವಕಾಶ ತಪ್ಪಿತು. ನಂತರ ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ, 13 ಕಂಚಿನ ಸಹಿತ ಒಟ್ಟು 29 ಪದಕದೊಂದಿಗೆ ತನ್ನ ಸರ್ವಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿತು. ಪ್ಯಾರಾ ಅಥ್ಲೆಟಿಕ್ಸ್​ನಲ್ಲಿ 4 ಚಿನ್ನದ ಸಹಿತ ಒಟ್ಟು 17 ಪದಕ ಗೆದ್ದು ಇತಿಹಾಸ ನಿರ್ಮಿಸಿತು.

ವಿನೇಶ್​ ಕೈತಪ್ಪಿದ ಪದಕ

ಪ್ಯಾರಿಸ್​ ಒಲಿಂಪಿಕ್ಸ್​ ಕುಸ್ತಿ ಸ್ಪರ್ಧೆಯಲ್ಲಿ ಅಮೋ ಗೆಲುವಿನೊಂದಿಗೆ ಓಫೈನಲ್​ಗೇರಿದ ವಿನೇಶ್​ ಪೋಗಟ್​ ಮರುದಿನ ಅಧಿಕ ದೇಹತೂಕದಿಂದಾಗಿ ಅನರ್ಹಗೊಂಡರು. ಇದರಿಂದಾಗಿ ಭಾರತಕ್ಕೆ ಪದಕ ಕೈತಪ್ಪಿತು ಮತ್ತು ಕ್ರೀಡಾಪ್ರೇಮಿಗಳ ಹೃದಯ ಭಗ್ನಗೊಂಡಿತು. ಪದಕಕ್ಕಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೊರೆ ಹೋದರೂ ವಿನೇಶ್​ಗೆ ಪದಕ ಒಲಿಯಲಿಲ್ಲ.

ಚೆಸ್​ನಲ್ಲಿ ವಿಶ್ವ ವಿಕ್ರಮ

ಚದುರಂಗದಲ್ಲಿ ಭಾರತಕ್ಕೆ ಇದು ಸ್ಮರಣೀಯ ವರ್ಷ. ಚೆಸ್​ ಒಲಿಂಪಿಯಾಡ್​ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ಯುವ-ಅನುಭವಿಗಳ ತಂಡಗಳು ಮೊಟ್ಟಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ಬರೆಯಿತು. ನಂತರ ಡಿ. ಗುಕೇಶ್​ ವಿಶ್ವ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಚೀನಾದ ಡಿಂಗ್​ ಲಿರೆನ್​ಗೆ ಸೋಲುಣಿಸಿ, ಈ ಸಾಧನೆ ಮಾಡಿದ ಅತಿಕಿರಿಯ ಮತ್ತು 2ನೇ ಭಾರತೀಯ ಎನಿಸಿದರು. ವರ್ಷಾಂತ್ಯಕ್ಕೆ ಮಹಿಳೆಯರ ವಿಶ್ವ ರಾಪಿಡ್​ ಚೆಸ್​ ಟೂರ್ನಿಯಲ್ಲಿ ಕೊನೆರು ಹಂಪಿ 2ನೇ ಬಾರಿ ಪ್ರಶಸ್ತಿ ಗೆದ್ದು ಬೀಗಿದರು.

ರಾಷ್ಟ್ರೀಯ ಕ್ರೀಡೆ ಹಾಕಿಗೆ ಮತ್ತೆ ಕಂಚಿನ ಕಿರೀಟ

ಟೋಕಿಯೊದಲ್ಲಿ 41 ವರ್ಷಗಳ ಪದಕ ಬರ ನೀಗಿಸಿದ್ದ ಭಾರತ ಹಾಕಿ ತಂಡ ಪ್ಯಾರಿಸ್​ನಲ್ಲಿ ಸತತ 2ನೇ ಒಲಿಂಪಿಕ್ಸ್​ ಕಂಚಿನ ಪದಕ ಗೆದ್ದು ಗತವೈಭವ ನೆನಪಿಸಿತು. ನಾಯಕ ಹರ್ಮಾನ್​ಪ್ರೀತ್​ ಸಿಂಗ್​ 10 ಗೋಲು ಬಾರಿಸಿ ಭಾರತದ ಗೆಲುವಿನ ರೂವಾರಿ ಎನಿಸಿದರೆ, ಗೋಲು ಕೀಪರ್​ ಪಿಆರ್​ ಶ್ರೀಜೇಶ್​ಗೆ ಗೆಲುವಿನ ವಿದಾಯ ದೊರೆಯಿತು.

ಸ್ಪೇನ್​ಗೆ ಯುರೋಕಪ್​

ಸ್ಪೇನ್​ನ ಯುವ ತಂಡ 12 ವರ್ಷಗಳ ಬಳಿಕ ಯುರೋಕಪ್​ ಫುಟ್​ಬಾಲ್​ ಪ್ರಶಸ್ತಿ ಗೆದ್ದು ಇತಿಹಾಸ ಬರೆಯಿತು. ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ಎದುರು 2-1 ಗೋಲುಗಳಿಂದ ಸ್ಪೇನ್​ ಗೆಲುವು ಸಾಧಿಸಿತು. ಆಂಗ್ಲರಿಗೆ 58 ವರ್ಷಗಳಿಂದ ಪ್ರತಿಷ್ಠಿತ ಫುಟ್​ಬಾಲ್​ ಪ್ರಶಸ್ತಿ ಗೆಲ್ಲದ ನೋವು ಮುಂದುವರಿಯಿತು. ಅತ್ತ ಲಿಯೋನೆಲ್​ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ 16ನೇ ಬಾರಿಗೆ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದು ಪ್ರಾಬಲ್ಯ ಕಾಯ್ದುಕೊಂಡಿತು.

ಜಯ್​ ಷಾ ಐಸಿಸಿ ಬಾಸ್​

ಟೆಸ್ಟ್​, ದೇಶೀಯ ಕ್ರಿಕೆಟಿಗರ ವೇತನ ಏರಿಕೆಯಂಥ ಕ್ರಮಗಳೊಂದಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಯಶಸ್ವಿ ಆಡಳಿತ ನಡೆಸಿದ ಜಯ್​ ಷಾ ವರ್ಷಾಂತ್ಯದಲ್ಲಿ ಐಸಿಸಿ ಚೇರ್ಮನ್​ ಆಗಿ ಅಧಿಕಾರ ಸ್ವೀಕರಿಸಿದರು.

ಬ್ಯಾಡ್ಮಿಂಟನ್​ನಲ್ಲಿ ನಿರಾಸೆ

ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಇದು "ಗುಡ್​ ಇಯರ್​' ಆಗಲಿಲ್ಲ. ಪಿವಿ ಸಿಂಧು ವರ್ಷದುದ್ದಕ್ಕೂ ನಿರಾಸೆ ಕಂಡು ಕೊನೆಯಲ್ಲಿ 2 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡರು. ಒಲಿಂಪಿಕ್ಸ್​ ಪದಕದ ನಿರೀಕ್ಷೆ ಮೂಡಿಸಿದ್ದ ಸಾತ್ವಿಕ್​ ಸಾಯಿರಾಜ್​-ಚಿರಾಗ್​ ಶೆಟ್ಟಿ ಜೋಡಿ ಪ್ಯಾರಿಸ್​ನಲ್ಲಿ ನಿರಾಸೆ ಮೂಡಿಸಿದರೆ, ಲಕ್ಷ್ಯ ಸೇನ್​ ಒಲಿಂಪಿಕ್ಸ್​ ಕಂಚಿನ ಹೋರಾಟದಲ್ಲಿ ಸೋತರು.

*ಪ್ರಮುಖ ವಿದಾಯ

ಕ್ರಿಕೆಟ್​: ಆರ್​. ಅಶ್ವಿನ್​, ಶಿಖರ್​ ಧವನ್​, ದಿನೇಶ್​ ಕಾರ್ತಿಕ್​, ಕೇದಾರ್​ ಜಾಧವ್​, ಡೇವಿಡ್​ ವಾರ್ನರ್​, ವೃದ್ಧಿಮಾನ್​ ಸಾಹ, ಮ್ಯಾಥ್ಯೂ ವೇಡ್​, ಡೀನ್​ ಎಲ್ಗರ್​, ಕಾಲಿನ್​ ಮನ್ರೋ, ಟಿಮ್​ ಸೌಥಿ, ಜೇಮ್ಸ್​ ಆಂಡರ್​ಸನ್​, ಮೊಯಿನ್​ ಅಲಿ, ಡೇವಿಡ್​ ಮಲಾನ್​, ಮೊಹಮದ್​ ಆಮೀರ್​.

ಟಿ20: ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ರವೀಂದ್ರ ಜಡೇಜಾ, ಶಕೀಬ್​ ಅಲ್​ ಹಸನ್​, ಟ್ರೆಂಟ್​ ಬೌಲ್ಟ್​.

*ಟೆನಿಸ್​: ರಾಫೆಲ್​ ನಡಾಲ್​, ಆಂಡಿ ಮರ್ರೆ, ರೋಹನ್​ ಬೋಪಣ್ಣ (ಭಾರತೀಯ ಟೆನಿಸ್​).

*ಫುಟ್​ಬಾಲ್​: ಸುನೀಲ್​ ಛೇಟ್ರಿ

*ಹಾಕಿ: ಪಿಆರ್​ ಶ್ರೀಜೇಶ್​, ರಾಣಿ ರಾಂಪಾಲ್​

*ಕುಸ್ತಿ: ವಿನೇಶ್​ ಪೋಗಟ್​

*ಜಿಮ್ನಾಸ್ಟಿಕ್ಸ್​: ದೀಪಾ ಕರ್ಮಾಕರ್​

ನಿಧನ

ಅಂಶುಮಾನ್​ ಗಾಯಕ್ವಾಡ್​

ಡೇವಿಡ್​ ಜಾನ್ಸನ್​

*ವರ್ಷದ ವಿವಾಹ

ಪಿವಿ ಸಿಂಧು

ಟೆನಿಸ್​ ಗ್ರಾಂಡ್​ ಸ್ಲಾಂ ವಿಜೇತರು

ಆಸ್ಟ್ರೆಲಿಯನ್​ ಓಪನ್​: ಜನ್ನಿಕ್​ ಸಿನ್ನರ್​, ಅರಿನಾ ಸಬಲೆಂಕಾ.

ಫ್ರೆಂಚ್​ ಓಪನ್​: ಕಾಲೋರ್ಸ್​ ಅಲ್ಕರಾಜ್​, ಇಗಾ ಸ್ವಿಯಾಟೆಕ್​.

ವಿಂಬಲ್ಡನ್​: ಕಾಲೋರ್ಸ್​ ಅಲ್ಕರಾಜ್​, ಬಾರ್ಬೊರ ಕ್ರೆಜ್ಸಿಕೋವಾ.

ಯುಎಸ್​ ಓಪನ್​: ಜನ್ನಿಕ್​ ಸಿನ್ನರ್​, ಅರಿನಾ ಸಬಲೆಂಕಾ.

ಕ್ರೀಡಾತಾರೆಯರ ಬಾಳಲ್ಲಿ​ ವಿಚ್ಛೇದನ

ಮಾಜಿ ಟೆನಿಸ್​ ತಾರೆ ಸಾನಿಯಾ ಮಿರ್ಜಾ ಪಾಕ್​ ಕ್ರಿಕೆಟಿಗ ಶೋಯಿಬ್​ ಮಲಿಕ್​ ಜತೆಗಿನ 14 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿದ್ದು ವರ್ಷಾರಂಭದಲ್ಲಿ ಖಚಿತಗೊಂಡಿತು. ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೋವಿಕ್​ ಜತೆಗಿನ 4 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಪಡೆದುಕೊಂಡಿರುವುದನ್ನು ಜುಲೈನಲ್ಲಿ ಘೋಷಿಸಿದರು. ಕರ್ನಾಟಕದ ಕ್ರಿಕೆಟಿಗ ಮನೀಷ್​ ಪಾಂಡೆ ಪತ್ನಿ ಆಶ್ರಿತಾ ಶೆಟ್ಟಿ ಅವರಿಂದ ದೂರವಾದರು.

ಕ್ರೀಡಾ ಲೀಗ್​ ವಿಜೇತರು

ಐಪಿಎಲ್​: ಕೋಲ್ಕತ ನೈಟ್​ರೈಡರ್ಸ್​

ಡಬ್ಲ್ಯುಪಿಎಲ್​: ಆರ್​ಸಿಬಿ

ಐಎಸ್​ಎಲ್​: ಮೋಹನ್​ ಬಗಾನ್​ ಎಸ್​ಜಿ

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್​

ಪ್ರೊ ಕಬಡ್ಡಿ ಲೀಗ್​: ಪುಣೇರಿ ಪಲ್ಟಾನ್​

ಪ್ರಮುಖ ವಿವಾದಗಳು

*ದೇಶೀಯ ಕ್ರಿಕೆಟ್​ನಲ್ಲಿ ಆಡದ ಶ್ರೇಯಸ್​ ಅಯ್ಯರ್​, ಇಶಾನ್​ ಕಿಶನ್​ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಔಟ್​.

*ಐಪಿಎಲ್​ ಪಂದ್ಯದ ಬಳಿಕ ಮೈದಾನದಲ್ಲೇ ಕೆಎಲ್​ ರಾಹುಲ್​ಗೆ ಕ್ಲಾಸ್​ ತೆಗೆದುಕೊಂಡ ಲಖನೌ ಸೂಪರ್​ಜೈಂಟ್ಸ್​ ಮಾಲೀಕ ಸಂಜೀವ್​ ಗೋಯೆಂಕಾ; ಫ್ಯಾನ್ಸ್​ ಆಕ್ರೋಶ.

*ಪ್ಯಾರಿಸ್​ ಒಲಿಂಪಿಕ್ಸ್​ ವೇಳೆ ಅಲ್ಜೀರಿಯಾ ಬಾಕ್ಸರ್​ ಇಮಾನೆ ಖೆಲಿಫ್​ ಹೆಣ್ಣಲ್ಲ ಗಂಡು ಎಂಬ ಆರೋಪ; ಲಿಂಗತ್ವ ವಿವಾದದ ನಡುವೆಯೂ ಸ್ವರ್ಣ ಪದಕ ಗೆಲುವು.

*ಪ್ಯಾರಿಸ್​ ಒಲಿಂಪಿಕ್ಸ್​ ಕ್ರೀಡಾಗ್ರಾಮಕ್ಕೆ ತನ್ನ ಗುರುತಿನ ಕಾರ್ಡ್​ನಲ್ಲಿ ಸಹೋದರಿಯನ್ನು ಕಳುಹಿಸಿದ ಭಾರತದ ಕುಸ್ತಿಪಟು ಅಂತಿಮ್​ ಪಾಂಗಲ್​ ಗಡಿಪಾರು.

*ಪ್ಯಾರಿಸ್​ ಒಲಿಂಪಿಕ್ಸ್​ಗೆ ಮುನ್ನ ಆಯ್ಕೆ ಟ್ರಯಲ್ಸ್​ ಬಗ್ಗೆ ಲಿಖಿತ ಭರವಸೆಗಾಗಿ ಮ್ಯಾಟ್​ ಮೇಲೆ ಕುಳಿತು ಸ್ಪರ್ಧೆಗೆ ಅಡ್ಡಿಪಡಿಸಿದ ವಿನೇಶ್​ ಪೋಗಟ್​.

ಕಿರಿಯರ ಕ್ರಿಕೆಟ್​ನಲ್ಲಿ ಕರ್ನಾಟಕಕ್ಕೆ ಕಿರೀಟ

ಸೀನಿಯರ್​ ತಂಡ ದೇಶೀಯ ಕ್ರಿಕೆಟ್​ನಲ್ಲಿ ನೀರಸ ನಿರ್ವಹಣೆ ಮುಂದುವರಿಸಿದ ನಡುವೆ ಕರ್ನಾಟಕದ ಕಿರಿಯರು ಅವಳಿ ಪ್ರಶಸ್ತಿ ಗೆಲುವಿನೊಂದಿಗೆ ಭವಿಷ್ಯ ಸುರತವಾಗಿದೆ ಎಂಬ ಸಂದೇಶ ರವಾನಿಸಿದರು. 19 ವಯೋಮಿತಿ ಕೂಚ್​ ಬೆಹಾರ್​ ಟ್ರೋಫಿ ಮತ್ತು 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ ಕರ್ನಾಟಕ ಮೊದಲ ಬಾರಿ ಪ್ರಶಸ್ತಿ ಜಯಿಸಿತು. ಕೂಚ್​ ಬೆಹಾರ್​ ಟ್ರೋಫಿ ಫೈನಲ್​ನಲ್ಲಿ ರಾಜ್ಯದ ಯುವ ಬ್ಯಾಟರ್​ ಪ್ರಖರ್​ ಚತುರ್ವೇದಿ 400 ರನ್​ ಸಿಡಿಸಿ ಇತಿಹಾಸ ಬರೆದರು.