ಕ್ರೀಡೆ

ಪ್ರೊ ಕಬಡ್ಡಿ ಲೀಗ್: ಆಶಿಶ್‌, ವಿಜಯ್‌ ಮಿಂಚು, ತೆಲುಗು ಟೈಟನ್ಸ್‌ಗೆ 9ನೇ ಗೆಲುವು

ನೋಯ್ಡಾ: ಪಂದ್ಯ ಉಭಯ ಅವಧಿಗಳಲ್ಲಿ ಅಧಿಕಾರಯುತ ಆಟ ಪ್ರದರ್ಶಿಸಿದ ತೆಲುಗು ಟೈಟನ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ 82ನೇ ಪಂದ್ಯದಲ್ಲಿಯು ಮುಂಬಾ ತಂಡದ ವಿರುದ್ಧ 6 ಅಂಕಗಳಿಂದ ಜಯಭೇರಿ ಬಾರಿಸಿತು. ಈ ಜಯದೊಂದಿಗೆ ಟೂರ್ನಿಯಲ್ಲಿ 9ನೇ ಗೆಲುವು ದಾಖಲಿಸಿದ ಟೈಟನ್ಸ್‌, ಒಟ್ಟಾರೆ 48 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು. ಮತ್ತೊಂದೆಡೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲವಿಫಲವಾದ ಮುಂಬಾ ತಂಡ ಐದನೇ ಸೋಲಿಗೆ ಒಳಗಾಯಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ತಂಡ 41-35 ಅಂಕಗಳಿಂದ ಮಾಜಿ ಚಾಂಪಿಯನ್ಸ್‌ ಮುಂಬಾಗೆ ಆಘಾತ ನೀಡಿತು. ತೆಲುಗು ಟೈಟನ್ಸ್‌ ತಂಡದ ಪರ ಆಶಿಶ್‌ ನರ್ವಾಲ್‌ ಮತ್ತು ವಿಜಯ್‌ ಮಲಿಕ್‌ ತಲಾ 10 ಅಂಕಗಳನ್ನು ಕಲೆಹಾಕಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಅತ್ತ ಯು ಮುಂಬಾ ತಂಡದ ಪರ ಮಂಜೀತ್‌ (7), ರೋಹಿತ್‌ ರಾಘವ್‌ (6 ಅಂಕ), ಅಜಿತ್‌ ಚೌಹಾಣ್‌ (6), ಆಮಿರ್‌ ಮೊಹಮ್ಮದ್‌ (3) ಮತ್ತು ಸೋಂಬಿರ್‌ (5) ಅಂಕ ಗಳಿಸಿ ಮಿಂಚಿದರು.

ಹಿನ್ನಡೆ ತಗ್ಗಿಸುವ ಇರಾದೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಮುಂಬಾ 24ನೇ ನಿಮಿಷದಲ್ಲೇ ಟೈಟನ್ಸ್‌ ತಂಡವನ್ನು ಮೊದಲ ಬಾರಿ ಅಂಗಣ ಕಾಲಿ ಮಾಡಿಸಿತು. ಈ ಮೂಲಕ ತಂಡದ ಹಿನ್ನಡೆಯನ್ನು 9 ಅಂಕಗಳಿಗೆ ತಗ್ಗಿಸಿದ ಮಾಜಿ ಚಾಂಪಿಯನ್ಸ್‌, ಟ್ಯಾಕಲ್‌ ಮತ್ತು ರೇಡಿಂಗ್‌ ಎರಡರಲ್ಲೂಮಿಂಚಿತು. ಇದರಿಂದಾಗಿ 29 ನಿಮಿಷದ ವೇಳೆಗೆ ತಂಡದ ಹಿನ್ನಡೆ 25-30ಕ್ಕೆ ತಗ್ಗಿತು. ಇದರ ನಡುವೆಯೂ ಹಿಂದಿನ ಸೋಲಿನಿಂದ ಹೊರಬರುವ ಹಾದಿಯಲ್ಲಿಟೈಟನ್ಸ್‌ ಆಟಗಾರರು ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿ, 30 ನಿಮಿಷ ಆಟ ಮುಕ್ತಾಯಕ್ಕೆ 5 ಅಂಕಗಳ ಮೇಲುಗೈ ಸಾಧಿಸಿದರು.

ಎರಡು ಬಾರಿಯ ಆಲೌಟ್‌ ಜತೆಗೆ ರೇಡಿಂಗ್‌ ವಿಭಾಗದಲ್ಲಿಅಬ್ಬರಿಸಿದ ತೆಲುಗು ಟೈಟನ್ಸ್‌ ತಂಡ ಪಂದ್ಯದ ಮೊದಲ ಅವಧಿಯ ಮುಕ್ತಾಯಕ್ಕೆ ಯು ಮುಂಬಾ ತಂಡದ ವಿರುದ್ಧ 25-13 ಅಂಕಗಳಿಂದ ಮೇಲುಗೈ ಸಾಧಿಸಿತು.

11 ಮತ್ತು 17ನೇ ನಿಮಿಷದಲ್ಲಿಮಾಜಿ ಚಾಂಪಿಯನ್‌ ಯು ಮುಂಬಾ ತಂಡವನ್ನು ಕಟ್ಟಿಹಾಕಿದ ಟೈಟನ್ಸ್‌ ತಂಡ ಅಧಿಕಾರಯುತ ಪ್ರದರ್ಶನ ನೀಡಿತು. ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಅವರ ಅನುಪಸ್ಥಿಯಲ್ಲಿ ಕಣಕ್ಕಿಳಿದ ಟೈಟನ್ಸ್‌ ತಂಡ ಪಂದ್ಯದ ಆರಂಭದಿಂದಲೂ ಮುಂಬಾ ತಂಡವನ್ನು ಕಾಡಿತು. ರೇಡಿಂಗ್‌ನಲ್ಲಿಸೂಧಿರ್ತಿದಾಯಕ ಪ್ರದರ್ಶನ ನೀಡಿದ ನಾಯಕ ವಿಜಯ್‌ ಮಲಿಕ್‌ ಮತ್ತು ಆಶಿಶ್‌ ನರ್ವಾಲ್‌ ತಂಡಕ್ಕೆ ಮುನ್ನಡೆ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅತ್ತ ರೋಹಿತ್‌ ರಾಘವ್‌ ಹೊರತುಪಡಿಸಿದರೆ ಉಳಿದವರು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ 20 ನಿಮಿಷಗಳ ಆಟದ ವಿರಾಮಕ್ಕೆ 12 ಅಂಕಗಳ ಭಾರಿ ಹಿನ್ನಡೆ ಕಾಣುವಂತಾಯಿತು. ಈ ನಡುವೆ ಪಂದ್ಯದ ಮೊದಲಾರ್ಧದಲ್ಲಿ9 ಅಂಕ ಗಳಿಸಿದ ವಿಜಯ್‌ ಮಲಿಕ್‌, ಟೂರ್ನಿಯಲ್ಲಿ100 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದರು.

ನವೆಂಬರ್‌ 29ರಂದು ತಮಿಳ್‌ ತಲೈವಾಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ಹಾಗೂ ಗುಜರಾತ್‌ ಜಯಂಟ್ಸ್‌ ಮತ್ತು ಪುಣೇರಿ ಪಲ್ಟನ್‌ ತಂಡಗಳು ಪೈಪೋಟಿ ನಡೆಸಲಿವೆ.