ಪುಣೆ: ಆಸ್ಟ್ರೆಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ವೇಗದ ಬೌಲಿಂಗ್ ಸ್ನೇಹಿ ಪಿಚ್ಗಳಲ್ಲಿ ಆಡಲು ಬಯಸಿತ್ತು. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಯ ಬಳಿಕ ಬೆಂಗಳೂರಿನಲ್ಲೂ ವೇಗದ ಬೌಲರ್ಗಳಿಗೆ ಸಹಕರಿಸುವಂಥ ಪಿಚ್ ರೂಪಿಸಲಾಗಿತ್ತು. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 19 ವರ್ಷಗಳ ಬಳಿಕ ಸೋಲು ಅನುಭವಿಸಿದ ಬಳಿಕ ಭಾರತ ತಂಡ ತನ್ನ ಎಂದಿನ ತವರಿನ ಅಸ್ತ್ರವಾದ ಸ್ಪಿನ್ ಬೌಲಿಂಗ್ ಮೊರೆ ಹೋಗಲು ನಿರ್ಧರಿಸಿದೆ. ಸರಣಿ ಸಮಬಲ ಸಾಧಿಸಲು ಈಗ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯ ನಡೆಯಲಿರುವ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾದ ಪಿಚ್ ನಿರ್ಮಿಸುವ ನಿರೀಕ್ಷೆ ಇದೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸೇರ್ಪಡೆಯೂ ಇದರ ಸೂಚನೆಯೇ ಆಗಿದೆ ಎನ್ನಲಾಗಿದೆ.
ಗುರುವಾರದಿಂದ ನಡೆಯಲಿರುವ ಪುಣೆ ಟೆಸ್ಟ್ಗೆ ಕಪ್ಪು ಮಣ್ಣಿನ ಲೋ ಬೌನ್ಸ್ ಹೊಂದಿರುವ ಪಿಚ್ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿ ನಂತರ ಚೇತರಿಸಿಕೊಳ್ಳಲಾಗದೆ ಭಾರತ 8 ವಿಕೆಟ್ಗಳಿಂದ ಸೋಲು ಅನುಭವಿಸಿತು. ಇದರೊಂದಿಗೆ ಕಿವೀಸ್ ಎದುರು 36 ವರ್ಷಗಳ ಬಳಿಕ ತವರಿನಲ್ಲಿ ಸೋಲುಂಡಿತು. ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಸತತ 3ನೇ ಬಾರಿ ೈನಲ್ಗೇರುವ ಭಾರತದ ಆಸೆಗೂ ಹಿನ್ನಡೆ ತಂದಿದೆ. ಹೀಗಾಗಿ ಪುಣೆ ಮಾತ್ರವಲ್ಲದೆ ನವೆಂಬರ್ 1ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ನಲ್ಲೂ ಸಂಪೂರ್ಣ ಸ್ಪಿನ್ ಸ್ನೇಹಿಯಾದ ಪಿಚ್ನಲ್ಲಿ ಆಡಲು ಭಾರತ ಮುಂದಾಗಿದೆ. ಈ ಮೂಲಕ ಕಿವೀಸ್ಗೆ ತನ್ನ ಪ್ರಬಲ ಅಸ್ತ್ರವಾದ ಸ್ಪಿನ್ ಬೌಲಿಂಗ್ ಮೂಲಕವೇ ತಿರುಗೇಟು ನೀಡಲು ಭಾರತ ಬಯಸಿದೆ.
ಬೆಂಗಳೂರಿನಲ್ಲಿ ಮೂವರು ಸ್ಪಿನ್ನರ್ಗಳೊಂದಿಗೆ ಆಡಿದರೂ ಭಾರತಕ್ಕೆ ಹೆಚ್ಚಿನ ಲಾಭವಾಗಿರಲಿಲ್ಲ. ಆದರೆ ಪುಣೆಯ ಸ್ಪಿನ್ ಸ್ನೇಹಿ ಪಿಚ್ನಲ್ಲೂ ಭಾರತ ಇದೇ ತಂತ್ರ ಮುಂದುವರಿಸಿದರೆ ಹೆಚ್ಚಿನ ಯಶ ಕಾಣಬಹುದಾಗಿದೆ. ಆದರೆ ವಾಷಿಂಗ್ಟನ್ ಸುಂದರ್ ಸೇರ್ಪಡೆಯಿಂದಾಗಿ ಈಗ 3ನೇ ಸ್ಪಿನ್ನರ್ ಯಾರಾಗುವರು ಎಂಬ ಬಗ್ಗೆ ಸ್ವಲ್ಪ ಗೊಂದಲ ಮೂಡಿದೆ.
ಪುಣೆಯಲ್ಲಿ ಈ ಮುನ್ನ 2 ಟೆಸ್ಟ್ಗಳಷ್ಟೇ ನಡೆದಿದ್ದು, 2016-17ರಲ್ಲಿ ಆಸೀಸ್ ಇಲ್ಲಿ 333 ರನ್ಗಳಿಂದ ಭಾರತವನ್ನು ಮಣಿಸಿತ್ತು. ಆಗ ಆಸೀಸ್ ಎಡಗೈ ಸ್ಪಿನ್ನರ್ ಸ್ಟೀವ್ ಓಕೀಫ್ 12 ವಿಕೆಟ್ ಕಬಳಿಸಿದ್ದರು. ಆಗ 40 ವಿಕೆಟ್ಗಳಲ್ಲಿ 31 ವಿಕೆಟ್ ಸ್ಪಿನ್ನರ್ಗಳ ಪಾಲಾಗಿತ್ತು. 2019ರಲ್ಲಿ ದಣ ಆಫ್ರಿಕಾ ವಿರುದ್ಧ ಟೆಸ್ಟ್ ಆಡಿದಾಗ ಭಾರತ ಇನಿಂಗ್ಸ್ ಗೆಲುವು ಸಾಧಿಸಿತ್ತು. ವಿರಾಟ್ ಕೊಹ್ಲಿ ಅಜೇಯ 254 ರನ್ ಸಿಡಿಸಿದ್ದ ಆ ಪಂದ್ಯದಲ್ಲಿ ಭಾರತದ ಸ್ಪಿನ್ನರ್ಗಳು ಮತ್ತು ವೇಗಿಗಳು ತಲಾ 10 ವಿಕೆಟ್ ಹಂಚಿಕೊಂಡಿದ್ದರು.