ಲಂಡನ್: ಭಾರತ-ಇಂಗ್ಲೆಂಡ್ ನಡುವಿನ ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ನಡೆದ ಪಿಚ್ಗಳು ಬ್ಯಾಟಿಂಗ್ ಸ್ನೇಹಿಯಾಗಿದ್ದವು. ಈ ಪೈಕಿ ಮೊದಲ ಪಂದ್ಯವನ್ನು ಗೆದ್ದ ಇಂಗ್ಲೆಂಡ್, 2ನೇ ಪಂದ್ಯದಲ್ಲಿ ಭಾರತದ ರನ್ಪ್ರವಾಹಕ್ಕೆ ತತ್ತರಿಸಿತು. ಹೀಗಾಗಿ ಈಗ ಆತಿಥೇಯ ಇಂಗ್ಲೆಂಡ್ ತನ್ನ ಪಿಚ್ ಕಾರ್ಯತಂತ್ರವನ್ನೇ ಬದಲಾಯಿಸಲು ಮುಂದಾಗಿದ್ದು, ಗುರುವಾರದಿಂದ "ಕ್ರಿಕೆಟ್ ಕಾಶಿ' ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ 3ನೇ ಪಂದ್ಯಕ್ಕೆ ವೇಗ ಮತ್ತು ಬೌನ್ಸ್ನಿಂದ ಕೂಡಿದ ಸ್ಪೀಡ್ ಪಿಚ್ ಬೇಕೆಂದು ಕ್ಯುರೇಟರ್ಗೆ ಬೇಡಿಕೆ ಸಲ್ಲಿಸಿದೆ.
3ನೇ ಪಂದ್ಯದಲ್ಲಿ ಇಂಗ್ಲೆಂಡ್ ಪರ ವೇಗಿಗಳಾದ ಆರ್ಚರ್ ಮತ್ತು ಗಸ್ ಅಟ್ಕಿನ್ಸನ್ ಕೂಡ ಕಣಕ್ಕಿಳಿಯಲಿದ್ದು, ವೇಗಿಗಳಿಗೆ ಹೆಚ್ಚು ನೆರವಾಗಬಲ್ಲ ಸತ್ವಯುತ ಪಿಚ್ಗಾಗಿ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕ್ಕಲಂ ಒತ್ತಾಯಿಸಿದ್ದಾರೆ. ಎಜ್ಬಾಸ್ಟನ್ ಪಿಚ್ ಬಗ್ಗೆ ನಾಯಕ ಬೆನ್ ಸ್ಟೋಕ್ಸ್ ಬಳಿಕ ಮೆಕ್ಕಲಂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಜ್ಬಾಸ್ಟನ್ ಪಿಚ್ ಪ್ರವಾಸಿ ಭಾರತ ತಂಡಕ್ಕೆ ಹೆಚ್ಚು ಅನುಕೂಲಕರವಾಗಿತ್ತು. ಹೀಗಾಗಿ ಲಾರ್ಡ್ಸ್ನಲ್ಲಿ ತಮಗೆ ತವರಿನ ಲಾಭ ನೀಡಬಲ್ಲ ಪಿಚ್ ಸಿದ್ಧಪಡಿಸಲು ಸೂಚಿಸಲಾಗಿದೆ.
ಕಳೆದ ತಿಂಗಳು ಆಸ್ಟ್ರೆಲಿಯಾ- ಆಫ್ರಿಕಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 3ನೇ ಆವೃತ್ತಿಯ ಫೈನಲ್ ಲಾರ್ಡ್ಸ್ನಲ್ಲೇ ನಡೆದಿತ್ತು. ಆ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್, ಕಗಿಸೊ ರಬಾಡ 5 ವಿಕೆಟ್ ಗೊಂಚಲು ಪಡೆದು ಮಿಂಚಿದ್ದರು. ಭಾರತ ವಿರುದ್ಧದ ಪಂದ್ಯಕ್ಕೂ ಈಗ ಅದೇ ರೀತಿಯ ಪಿಚ್ ಬೇಕೆಂದು ಮೆಕ್ಕಲಂ, ಎಂಸಿಸಿ ಮುಖ್ಯ ಗ್ರೌಂಡ್ಸ್ಮನ್ ಕಾರ್ಲ್ ಮೆಕ್ಡೆರ್ಮೊಟ್ಗೆ ತಿಳಿಸಿದ್ದಾರೆ.
ಲಾರ್ಡ್ಸ್ನಲ್ಲಿ 3 ಜಯ ಭಾರತ ತಂಡ ಲಾರ್ಡ್ಸ್ನಲ್ಲಿ ಇದುವರೆಗೆ 19 ಟೆಸ್ಟ್ ಆಡಿದ್ದು, ಈ ಪೈಕಿ 12ರಲ್ಲಿ ಸೋತಿದ್ದರೆ, 3ರಲ್ಲಿ ಗೆಲುವು ದಾಖಲಿಸಿದೆ. ಉಳಿದ 4 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಭಾರತ ತಂಡ 2021ರಲ್ಲಿ ಲಾರ್ಡ್ಸ್ನಲ್ಲಿ ಕೊನೆಯದಾಗಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಆಡಿದ್ದ ಟೆಸ್ಟ್ನಲ್ಲಿ ಗೆಲುವು ದಾಖಲಿಸಿತ್ತು ಎಂಬುದು ಸ್ಫೂರ್ತಿಯ ಅಂಶವಾಗಿದೆ. ಆ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೆಎಲ್ ರಾಹುಲ್ ಮತ್ತು ಬೌಲಿಂಗ್ನಲ್ಲಿ ಮಿಂಚಿದ್ದ ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಈಗಿನ ತಂಡದಲ್ಲೂ ಇದ್ದಾರೆ.
> ಸಿತಾಂಶು ಕೋಟಕ್, ಭಾರತ ತಂಡದ ಬ್ಯಾಟಿಂಗ್ ಕೋಚ್ಲಾರ್ಡ್ಸ್ ಪಿಚ್ ಅತ್ಯಂತ ಹಸಿರಾಗಿದೆ. ಇದು ಬೌಲರ್ಗಳಿಗೆ ನೆರವಾಗುವ ನಿರೀೆ ಇದೆ. ಬ್ಯಾಟರ್ಗಳು ಯಾವ ಮನೋಭಾವದೊಂದಿಗೆ ಆಡುವರು ಎಂಬುದು ನಿರ್ಣಾಯಕವೆನಿಸಲಿದೆ. ಈ ಪಿಚ್ ಬ್ಯಾಟರ್ಗಳಿಗೆ ಸವಾಲಿನದ್ದಾಗಿರಲಿದೆ.
ಸಿರಾಜ್ಗೆ ರೆಸ್ಟ್, ಅರ್ಷದೀಪ್ ಇನ್? ಎಜ್ಬಾಸ್ಟನ್ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಲಾರ್ಡ್ಸ್ನಲ್ಲಿ ಕಣಕ್ಕಿಳಿಯುವುದು ಈಗಾಗಲೆ ಖಚಿತಗೊಂಡಿದೆ. ಇದರೊಂದಿಗೆ 2ನೇ ಟೆಸ್ಟ್ ಗೆಲುವಿನಲ್ಲಿ ಮಿಂಚಿದ ಮತ್ತೋರ್ವ ಪ್ರಮುಖ ವೇಗಿ ಮೊಹಮದ್ ಸಿರಾಜ್ಗೆ ಲಾರ್ಡ್ಸ್ ಟೆಸ್ಟ್ನಿಂದ ವಿಶ್ರಾಂತಿ ನೀಡುವ ಸಾಧ್ಯತೆ ಕಾಣಿಸಿದೆ. 5 ಪಂದ್ಯಗಳ ಸರಣಿಯಲ್ಲಿ ಕಾರ್ಯದೊತ್ತಡ ತಗ್ಗಿಸಲು ಸಿರಾಜ್ಗೆ ರೆಸ್ಟ್ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದೇ ವೇಳೆ, ಕಳೆದ 2 ಟೆಸ್ಟ್ಗಳಲ್ಲಿ ದುಬಾರಿಯಾಗಿರುವ ಕನ್ನಡಿಗ ಪ್ರಸಿದ್ಧ ಕೃಷ್ಣರನ್ನು ಕೈಬಿಟ್ಟು ಎಡಗೈ ವೇಗಿ ಅರ್ಷದೀಪ್ ಸಿಂಗ್ಗೆ ಟೆಸ್ಟ್ ಪದಾರ್ಪಣೆಯ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಇಲ್ಲ. ಇದರಿಂದ ಕನ್ನಡಿಗ ಕರುಣ್ ನಾಯರ್ ಮತ್ತೊಂದು ಅವಕಾಶ ಪಡೆಯಬಹುದು. ಜತೆಗೆ ಎಜ್ಬಾಸ್ಟನ್ ಟೆಸ್ಟ್ನ ಎರಡೂ ಇನಿಂಗ್ಸ್ಗಳಲ್ಲಿ ತಲಾ 1 ರನ್ ಗಳಿಸಿ ನಿರಾಸೆ ಮೂಡಿಸಿದ್ದ ನಡುವೆಯೂ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಉಳಿಸಿಕೊಳ್ಳಬಹುದು. ಬ್ಯಾಟಿಂಗ್ನಲ್ಲೂ ಮಿಂಚಿರುವ ಇಬ್ಬರು ಸ್ಪಿನ್ನರ್ಗಳೊಂದಿಗೆ (ಜಡೇಜಾ, ವಾಷಿಂಗ್ಟನ್) ಭಾರತ ಮತ್ತೊಮ್ಮೆ ಕಣಕ್ಕಿಳಿಯಲಿದೆ ಎನ್ನಲಾಗಿದೆ.