ಕ್ರೀಡೆ

ಫೈನಲ್ ಗೋಲು ಅನ್ನು ಗೆಳಯನ ತಾಯಿಗೆ ಅರ್ಪಿಸಿದ ಸ್ಪೇನ್ ಆಟಗಾರ್ತಿ

ಸಿಡ್ನಿ: ನಾಯಕಿ ಓಲ್ಗಾ ಕಾರ್ಮೋನಾ (29ನೇ ನಿಮಿಷ) ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ಮಹಿಳೆಯರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಪಟ್ಟವೇರಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಅಂತರದಿಂದ ಯುರೋಪಿಯನ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿತು. ಪಂದ್ಯದ 29ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸ್ಪೇನ್‌ಗೆ ಮುನ್ನಡೆ ಒದಗಿಸಿದ ಓಲ್ಗಾ, ಗೋಲು ಸಿಡಿಸಿದ ಬಳಿಕ "MERCHI"ಎಂಬ ಬರಹವುಳ್ಳ ತನ್ನ ಒಳ ಟೀ ಶರ್ಟ್ ಅನ್ನು ತೋರಿಸುವ ಮೂಲಕ ವಿಶಿಷ್ಠವಾಗಿ ಆಚರಿಸಿದರು. ಸ್ಪೇನ್ ಭಾಷೆಯಲ್ಲಿ ಟೀ- ಶರ್ಟ್ ಮೇಲಿನ ಬರಹವಿದ್ದ ಕಾರಣ ಬಹುತೇಕ ಅಭಿಮಾನಗಳಿಗೆ ಅದರ ಅರ್ಥ ಹುಡುಕುವುದು ಕಷ್ಟವೆನಿಸಿತು.

ಪಂದ್ಯದ ಗೋಲು ಇತ್ತೀಚೆಗೆ ನಿಧನರಾದ ಸ್ನೇಹಿತನ ತಾಯಿಗೆ ಅರ್ಪಿಸಲಾಗಿದೆ. ಈ ವಿಜಯವು ಇತ್ತೀಚೆಗೆ ನಿಧನರಾದ ನನ್ನ ಅತ್ಯುತ್ತಮ ಸ್ನೇಹಿತನ ತಾಯಿಗೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಸ್ಪೇನ್ ಓಲ್ಗಾ ಕಾರ್ಮೋನಾ ಪಂದ್ಯದ ನಂತರ ಹೇಳಿದರು. ರೋಚಕ ಫೈನಲ್ ಪಂದ್ಯಕ್ಕೆ 75 ಸಾವಿರ ಪ್ರೇಕ್ಷಕರು ಸಾಕ್ಷಿಯಾದರು.

23 ವರ್ಷದ ಓಲ್ಗಾ ಫೈನಲ್ ಹಾಗೂ ಸೆಮಿ ಫೈನಲ್‌ನಲ್ಲಿ ಗೋಲು ಸಿಡಿಸಿದ ಎರಡನೇ ಆಟಗಾರ್ತಿ ಎನಿಸಿದರು. 2015ರಲ್ಲಿ ಅಮೆರಿಕದ ಕಾರ್ಲಿ ಲಾಯ್ಡ ಈ ಸಾಧನೆ ಮಾಡಿದ ಮೊದಲಿಗರೆನಿಸಿದ್ದರು.

ವೈಯಕ್ತಿಕ ಪ್ರಶಸ್ತಿ: ಗೋಲ್ಡನ್ ಬೂಟ್: ಹಿನಾಟಾ ಮಿಯಾಜಾವಾ (ಜಪಾನ್); ಗೋಲ್ಡನ್ ಗ್ಲೌವ್: ಮೇರಿ ಇಯರ್ಪ್ಸ್ (ಇಂಗ್ಲೆಂಡ್); ಗೋಲ್ಡನ್ ಬಾಲ್: ಐತಾನ ಬೊನ್ಮತಿ (ಸ್ಪೇನ್).