ಕ್ರೀಡೆ

ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಇಂದು ಅಫ್ಘಾನಿಸ್ತಾನ ಸವಾಲು: ಉಪಾಂತ್ಯದ ಸವಾಲಿಗೂ ಮುನ್ನ ಗೆಲುವಿನ ಹಳಿ ಏರುವ ತವಕ

ಅಹಮದಾಬಾದ್: ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ 2ನೇ ತಂಡವಾಗಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ ದಕ್ಷಿಣ ಆಫ್ರಿಕಾ ಏಕದಿನ ವಿಶ್ವಕಪ್‌ನಲ್ಲಿ ತನ್ನ 9ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ದೈತ್ಯಸಂಹಾರಿ ಎನಿಸಿರುವ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಆತಿಥೇಯ ಭಾರತದ ಎದುರು ಮುಗ್ಗರಿಸಿರುವ ಹರಿಣಗಳ ತಂಡ ಉಪಾಂತ್ಯದ ಸವಾಲಿಗೂ ಮುನ್ನ ಗೆಲುವಿನ ಹಳಿ ಏರುವ ತವಕದಲ್ಲಿದೆ. ಇತ್ತ ಆ್ಘನ್‌ಗೆ ಇನ್ನೂ ಸೆಮೀಸ್‌ಗೇರುವ ಅವಕಾಶವಿದ್ದರೂ, ಅದು ಕಾಗದದ ಮೇಲೆ ಮಾತ್ರ. ಯಾಕೆಂದರೆ ಆಫ್ರಿಕಾ ವಿರುದ್ಧ ಗೆದ್ದರೂ, ಆಫ್ಘನ್  ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಕಿವೀಸ್ ತಂಡವನ್ನು ಹಿಂದಿಕ್ಕುವುದು ಬಹುತೇಕ ಅಸಾಧ್ಯವೆನಿಸಿದೆ. ಇದರ ಹೊರತಾಗಿಯೂ, ಮತ್ತೊಂದು ಅಚ್ಚರಿಯ ಲಿತಾಂಶದೊಂದಿಗೆ ಟೂರ್ನಿಯಿಂದ ನಿರ್ಗಮಿಸುವುದು ಆ್ಘನ್ ಹಂಬಲವಾಗಿದೆ.

ಹರಿಣಗಳ ಪಡೆ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಿ ಸೋತು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಇಷ್ಟೇ ಪಂದ್ಯಗಳನ್ನಾಡಿರುವ ಅ್ಘಾನಿಸ್ತಾನ ತಲಾ 4ರಲ್ಲಿ ಗೆಲುವು-ಸೋಲುಂಡು 6ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು 243 ರನ್‌ಗಳಿಂದ ಮುಗ್ಗರಿಸಿರುವ ಟೆಂಬಾ ಬವುಮಾ ಪಡೆ ಪುಟಿದೇಳುವ ವಿಶ್ವಾಸದಲ್ಲಿದೆ. ಕ್ವಿಂಟನ್ ಡಿಕಾಕ್, ರಸ್ಸೀ ವಾನ್ ಡೆರ್ ಡುಸೆನ್, ಏಡೆನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಮತ್ತೊಮ್ಮೆ ರನ್‌ಮಳೆ ಹರಿಸುವ ಉತ್ಸಾಹದಲ್ಲಿದ್ದಾರೆ. ಚೇಸಿಂಗ್‌ನಲ್ಲಿ 2 ಬಾರಿ ಸೋಲು ಕಂಡಿರುವ ದಕ್ಷಿಣ ಆಫ್ರಿಕಾ, ಆ್ಘನ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಕಳೆದ ಪಂದ್ಯದಲ್ಲಿ ಗೆಲುವು ಒಲಿಸಿಕೊಳ್ಳುವ ಸನಿಹದಲ್ಲಿ ಕ್ಯಾಚ್ ಕೈಬಿಟ್ಟು ಹೆಚ್ಚು-ಕಡಿಮೆ ಸೆಮಿೈನಲ್ ಅವಕಾಶವನ್ನು ಕಳೆದುಕೊಂಡಿರುವ ಆ್ಘನ್, ಹರಿಣಗಳ ಬ್ಯಾಟಿಂಗ್ ವಿಭಾಗಕ್ಕೂ ಸ್ಪಿನ್ ಸವಾಲೊಡ್ಡುವ ಯೋಜನೆಯಲ್ಲಿದೆ. ಪಾಕ್, ಲಂಕಾ, ಇಂಗ್ಲೆಂಡ್ ವಿರುದ್ಧದ ಯಶಸ್ಸು ಮುಂದುವರಿಸಲು ಇಬ್ರಾಹಿಂ ಜದ್ರಾನ್, ರಹಮತ್ ಷಾ, ಹಶ್ಮತ್‌ಉಲ್ಲಾ ಶಾಹಿದಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲೂ ನೆರವಾಗಬೇಕಿದೆ.

ವಿಶ್ವಕಪ್ ಮುಖಾಮುಖಿ- 1

ದ.ಆಫ್ರಿಕಾ-1

ಅ್ಘಾನಿಸ್ತಾನ-0

ಏಕದಿನ ಮುಖಾಮುಖಿ-1

ದ.ಆಫ್ರಿಕಾ-1

ಅ್ಘಾನಿಸ್ತಾನ-0

ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್