ಕ್ರೀಡೆ

ವಾಸಿಮ್ ಅಕ್ರಂ, ಶೇನ್​ ವಾರ್ನ್​ ಅಲ್ಲ! ಈತನೇ ಸೌರವ್​ ಗಂಗೂಲಿಗೆ ಭಯ ಹುಟ್ಟಿಸಿದ ಡೇಂಜರೆಸ್​ ಬೌಲರ್​ | Sourav Ganguly

Sourav Ganguly: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ತಮ್ಮದೇ ವಿಶೇಷ ಅಧ್ಯಾಯ ಬರೆದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ, ಭಾರತ ತಂಡಕ್ಕೆ ನೀಡಿದ ಕೊಡುಗೆ ಅಪಾರ. ಅಂದು ನಾಯಕನಾಗಿ ತಂಡದ ದಿಕ್ಕನ್ನು ಬದಲಾಯಿಸಿದ ಕೀರ್ತಿ ಗಂಗೂಲಿ ಅವರಿಗೆ ಸಲ್ಲುತ್ತದೆ. ಸಚಿನ್ ತೆಂಡೂಲ್ಕರ್​, ರಾಹುಲ್ ದ್ರಾವಿಡ್​, ವಿವಿಎಸ್​ ಲಕ್ಷ್ಮಣ್​ ಕಾಲದಲ್ಲಿ ಸ್ಟಾರ್​ ಆಟಗಾರನಾಗಿ ಹೊರಹೊಮ್ಮಿದ ಗಂಗೂಲಿ ಅಂದು ಈತನ ಬೌಲಿಂಗ್​ಗೆ ಬೆದರಿದ್ದರಂತೆ.

1992ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದಾದಾ, 1996ರಲ್ಲಿ ಟೆಸ್ಟ್‌ಗೆ ಎಂಟ್ರಿಕೊಟ್ಟರು. ವಿದೇಶಿ ನೆಲದಲ್ಲಿ ತಂಡದ ನಾಯಕನಾಗಿ ಹಾಗೂ ಬ್ಯಾಟರ್​ ಆಗಿ ಅಬ್ಬರಿಸಿರುವ ಗಂಗೂಲಿ, ಅಂದು ತಾವು ಎದುರಿಸಿದ ಪ್ರತಿಯೊಬ್ಬ ಬೌಲರ್‌ ವಿರುದ್ಧವು ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ, ತಮ್ಮನ್ನು ಮೈದಾನದಲ್ಲಿ ಕಾಡಿದ ಓರ್ವ ಬೌಲರ್​ ಕುರಿತು ಗಂಗೂಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಪಾಕ್​ ವೇಗಿ ವಾಸಿಮ್ ಅಕ್ರಂ ಮತ್ತು ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ ಅವರ ಹೆಸರನ್ನು ಪರಿಗಣಿಸದ ಗಂಗೂಲಿ, ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್‌ಗ್ರಾತ್ ಬೌಲಿಂಗ್​ಗೆ​ ಭಯಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಎದುರಿಸಿದ ಅತ್ಯುತ್ತಮ ಬೌಲರ್‌ಗಳ ಪಟ್ಟಿಯಲ್ಲಿ ಗ್ಲೆನ್​ ಕೂಡ ಒಬ್ಬರು. ಅಂದು ಅವರ ಬೌಲಿಂಗ್​ಗೆ ನನ್ನಲ್ಲಿ ಭಯ ಹುಟ್ಟಿಸಿತ್ತು ಎಂದು ದಾದಾ ಹೇಳಿದ್ದಾರೆ.

16 ವರ್ಷಗಳ ಸುದೀರ್ಘ ಕ್ರಿಕೆಟ್​ ವೃತ್ತಿಜೀವನದಲ್ಲಿ ಟೀಮ್ ಇಂಡಿಯಾ ಪರ 113 ಟೆಸ್ಟ್ ಪಂದ್ಯಗಳನ್ನು ಆಡಿರುವ ಸೌರವ್ ಗಂಗೂಲಿ, ಹದಿನಾರು ಶತಕಗಳನ್ನು ಸಿಡಿಸುವ ಮೂಲಕ 7,212 ರನ್ ಗಳಿಸಿದ್ದಾರೆ. ಅದೇ ರೀತಿ, 311 ಏಕದಿನ ಪಂದ್ಯಗಳಲ್ಲಿ ಒಟ್ಟು 11,363 ರನ್ ಬಾರಿಸಿದ್ದಾರೆ. ಇದರಲ್ಲಿ 22 ಶತಕಗಳು ಮತ್ತು 72 ಅರ್ಧಶತಕಗಳು ಸೇರಿವೆ,(ಏಜೆನ್ಸೀಸ್).