ಕ್ರೀಡೆ

ಕರೊನಾ ನಿಲ್ಲದೆ ಕ್ರಿಕೆಟ್​ ಇಲ್ಲ; ಪ್ರೇಕ್ಷಕರಿಲ್ಲದ ಪಂದ್ಯ, ಒಪ್ಪದ ದಾದಾ

ನವದೆಹಲಿ: ಲಾಕ್​ಡೌನ್ ಮುಕ್ತಾಯಗೊಂಡ ಬೆನ್ನಲ್ಲೇ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಆರಂಭಿಸುವ ಬಗ್ಗೆ ಎಲ್ಲ ಕ್ರೀಡಾಪಟುಗಳು ನಿರೀಕ್ಷೆಯಲ್ಲಿದ್ದಾರೆ. ಆದರೆ ಭಾರತದಲ್ಲಿ ಈ ರೀತಿ ಕ್ರೀಡಾ ಚಟುವಟಿಕೆಗಳನ್ನು ಏಕಾಏಕಿ ಪುನರಾರಂಭ ಮಾಡುವುದು ಸರಿಯಲ್ಲ. ಖಾಲಿ ಕ್ರೀಡಾಂಗಣದಲ್ಲೂ ಪಂದ್ಯಗಳನ್ನು ನಡೆಸಲಾಗದು. ಸದ್ಯೋಭವಿಷ್ಯದಲ್ಲಿ ಭಾರತದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ನಿರೀಕ್ಷಿಸಬೇಡಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೇ ಹೇಳಿದ್ದಾರೆ. ಅಖಿಲ ಭಾರತ ಫುಟ್​ಬಾಲ್ ಫೆಡರೇಷನ್ (ಎಐಎಫ್​ಎಫ್) ಕೂಡ ಗಂಗೂಲಿ ಮಾತಿಗೆ ಧ್ವನಿಗೂಡಿಸಿದೆ.

ಜರ್ಮನಿಯಲ್ಲಿ ಒಂದೂವರೆ ಲಕ್ಷಕ್ಕೂ ಕರೊನಾ ಪ್ರಕರಣಗಳಿರುವ ನಡುವೆಯೂ, ಮೇನಿಂದ ಬುಂಡೆಸ್​ಲಿಗಾ ದೇಶೀಯ ಫುಟ್​ಬಾಲ್ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ಆದರೆ ಇದನ್ನೇ ಭಾರತಕ್ಕೆ ಅನ್ವಯಿಸುವುದು ಸಾಧ್ಯವಾಗದು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಟ್ಟಿಗೆ ಖಾಲಿ ಕ್ರೀಡಾಂಗಣದಲ್ಲೂ ಪಂದ್ಯ ಆಯೋಜಿಸುವುದು ಕಠಿಣ ಸವಾಲು ಎಂದವರು ಹೇಳಿದ್ದಾರೆ.

‘ಜರ್ಮನಿ ಮತ್ತು ಭಾರತದಲ್ಲಿನ ಸಾಮಾಜಿಕ ವಾಸ್ತವ ಭಿನ್ನವಾಗಿದೆ. ಸದ್ಯೋಭವಿಷ್ಯದಲ್ಲಿ ಭಾರತದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲಾಗದು. ಸಾಕಷ್ಟು ಆದರೆ-ಹೋದರೆ ವಿಷಯಗಳನ್ನು ರ್ಚಚಿಸಲಾಗುತ್ತಿದೆ. ಬಹಳ ಮುಖ್ಯವಾಗಿ, ಮಾನವನ ಜೀವವೇ ಅಪಾಯದಲ್ಲಿರುವಾಗ ಕ್ರೀಡೆಯ ಬಗ್ಗೆ ಚಿಂತಿಸುವುದು ಸರಿಯಲ್ಲ’ ಎಂದು ಗಂಗೂಲಿ ಹೇಳಿದ್ದಾರೆ. ಈ ಮೂಲಕ ಭಾರತ ಮಾತ್ರವಲ್ಲದೆ ವಿಶ್ವದ ಯಾವುದೇ ಮೂಲೆಯಲ್ಲಿ ಮುಂದಿನ ಕೆಲ ತಿಂಗಳ ಮಟ್ಟಿಗೆ ಐಪಿಎಲ್ ಟೂರ್ನಿ ಆಯೋಜಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರೇಕ್ಷಕರಿಲ್ಲದೆಯೂ ಪಂದ್ಯ ನಡೆದರೆ ಅದನ್ನು ನೇರಪ್ರಸಾರ ಮಾಡಲು ಪ್ರಸಾರ ಹಕ್ಕು ಹೊಂದಿರುವವರು ಹಿಂದೇಟು ಹಾಕದಿರಬಹುದು. ಆದರೆ ಇಂಥದ್ದನ್ನು ನಡೆಸಲು ಇದು ಸರಿಯಾದ ಸಮಯವಲ್ಲ ಎಂದು ಚೆನ್ನೈ ಸೂಪರ್ಕಿಂಗ್ಸ್ ಸಿಇಒ ಕೆಎಸ್ ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದೆಡೆ ಎಐಎಫ್​ಎಫ್ ಉಪಾಧ್ಯಕ್ಷ ಸುಬ್ರತಾ ದತ್ತ ಕೂಡ ಇಂಥದ್ದೇ ಅಭಿಪ್ರಾಯ ಪಟ್ಟಿದ್ದು, ಪ್ರೇಕ್ಷಕರಿಗೆ ಅವಕಾಶ ನೀಡದಿದ್ದರೂ, ಪಂದ್ಯ ನಡೆಯುವಾಗ ನೂರಾರು ಜನರು ಮೈದಾನ ದಲ್ಲಿರುವುದು ಅನಿವಾರ್ಯ. ಪತ್ರಕರ್ತರಿಗೂ ಅವಕಾಶ ನೀಡಬೇಕಾಗುತ್ತದೆ. ಯಾರಿಗಾದರೂ ಕರೊನಾ ಲಕ್ಷಣ ಕಾಣಿಸಿಕೊಂಡರೆ ಎಲ್ಲರೂ ದಿಗ್ಬಂಧನಕ್ಕೆ ಒಳಪಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಫುಟ್​ಬಾಲ್​ಗೆ ಟಿಕೆಟ್ ಹಣಕ್ಕಿಂತ ಅಭಿಮಾನಿಗಳೇ ದೊಡ್ಡ ಆಸ್ತಿ ಎಂದಿದ್ದಾರೆ. ಲಾಕ್​ಡೌನ್​ಗೆ ಮುನ್ನ ಐಎಸ್​ಎಲ್ ಫೈನಲ್ ಪ್ರೇಕ್ಷಕರಿಲ್ಲದೆ ನಡೆದಿರಬಹುದು. ಆದರೆ ಪ್ರತಿ ಬಾರಿ ಇಂಥ ಪ್ರಯೋಗ ಮಾಡಲಾಗದು ಎಂದಿದ್ದಾರೆ.

ಹರ್ಭಜನ್ ಸಹಮತ

ಗಂಗೂಲಿ ಅಭಿಪ್ರಾಯಕ್ಕೆ ಧ್ವನಿಗೂಡಿಸಿರುವ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತದಲ್ಲಿ ಐಪಿಎಲ್​ನಂಥ ಟೂರ್ನಿಯ ವೇಳೆ ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ತಂಡಗಳು ಹೋಗುವಾಗ ವಿಮಾನ ನಿಲ್ದಾಣ, ಹೋಟೆಲ್ ಮತ್ತು ಕ್ರೀಡಾಂಗಣದ ಹೊರಗೂ ಸಾಕಷ್ಟು ಜನರು ಜಮಾಯಿಸುತ್ತಾರೆ. ಅವರನ್ನು ತಡೆಯಲು ಹೇಗೆ ಸಾಧ್ಯ? ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವರೇ? ಕೋವಿಡ್-19ಕ್ಕೆ ಔಷಧಿ ಕಂಡು ಹಿಡಿಯುವವರೆಗೂ ಅಗ್ರಮಟ್ಟದ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಾಧ್ಯವಾಗದು ಎಂದಿದ್ದಾರೆ.