ಐಚಿ-ನಗೋಯಾ: ಐದನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಸ್ಪರ್ಧೆಯ ಮೊದಲ ದಿನವೇ 4 ಚಿನ್ನದ ಪದಕಗಳನ್ನು ಜಯಿಸುವ ಮೂಲಕ ಭರ್ಜರಿ ಆರಂಭ ಒದಗಿಸಿದ್ದಾರೆ. ಜತೆಗೆ 5 ಬೆಳ್ಳಿ ಮತ್ತು 2 ಕಂಚಿನ ಸಹಿತ 11 ಪದಕಗಳನ್ನು ಬಾಚಿಕೊಂಡಿರುವ ಭಾರತ ತಂಡ ಪದಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಅಲಂಕರಿಸಿದೆ. ಕರ್ನಾಟಕದ ಪ್ಯಾರಾ ಅಥ್ಲೀಟ್ಗಳಾದ ಸೌಮ್ಯ ಚಿನ್ನ ಮತ್ತು ರಾಧಾ ವೆಂಕಟೇಶ್ ರಜತ ಪದಕವನ್ನು ಗೆದ್ದು ಬೀಗಿದರು. ಶೂಟರ್ ಮೋನಾ ಅಗರ್ವಾಲ್, ಪ್ಯಾರಾ ಅಥ್ಲೀಟ್ಗಳಾದ ನಿಶದ್ ಕುಮಾರ್ ಮತ್ತು ರಿಂಕು ಹೂಡಾ ಭಾರತಕ್ಕೆ ಇತರ ಸ್ವರ್ಣ ಪದಕಗಳನ್ನು ಗೆದ್ದುಕೊಟ್ಟರು. ಶೂಟರ್ ಅವನಿ ಲೇಖರ, ಜುಡೋಪಟು ಕೋಕಿಲಾ ಕೌಶಿಕ್ಲತೆ, ಈಜುಪಟು ರವಿ ಕಾರ್ತಿಕ್ ಬುಡಿಗಿನಾ ಮತ್ತು ಪ್ಯಾರಾಥ್ಲೀಟ್ ಅಜೀತ್ ಸಿಂಗ್ ಯಾದವ್ ರಜತ ಪದಕಕ್ಕೆ ಕೊರಳೊಡ್ಡಿದರೆ, ಜುಡೋಪಟು ಕಪಿಲ್ ಪಾರ್ಮರ್ ಮತ್ತು ಪ್ಯಾರಾಥ್ಲೀಟ್ ರವನ್ನಿ ವಲಸನೈನಿ ಕಂಚಿನ ಪದಕ ಒಲಿಸಿಕೊಂಡರು. ಅಥ್ಲೆಟಿಕ್ಸ್ನಲ್ಲೇ 3 ಚಿನ್ನ, 2 ಬೆಳ್ಳಿ, 1 ಕಂಚಿನ ಸಹಿತ 6 ಪದಕಗಳು ಒಲಿದವು. ಇದೇ ವೇಳೆ ಭಾರತಕ್ಕೆ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ 3 ಮತ್ತು ಬ್ಯಾಡ್ಮಿಂಟನ್ನಲ್ಲಿ ಒಂದು ಪದಕ ಖಚಿತಗೊಂಡಿದೆ.
ರಾಜ್ಯದ ಸೌಮ್ಯಗೆ ಚಿನ್ನ, ರಾಧಾಗೆ ಬೆಳ್ಳಿ
ಚಾಮರಾಜನಗರದ ಸೌಮ್ಯ ಮತ್ತು ಚಿತ್ರದುರ್ಗದ ರಾಧಾ ವೆಂಕಟೇಶ್ ಟಿ12-13 ವಿಭಾಗದ ಮಹಿಳೆಯರ 1,500 ಮೀ. ಓಟದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡರು. ಸೌಮ್ಯ 5 ನಿಮಿಷ, 12.39 ಸೆಕೆಂಡ್ಗಳಲ್ಲಿ ಮೊದಲಿಗರಾಗಿ ಸ್ಪರ್ಧೆ ಮುಗಿಸಿದರೆ, ರಾಧಾ 5 ನಿಮಿಷ, 30.90 ಸೆಕೆಂಡ್ಗಳಲ್ಲಿ ದ್ವೀತಿಯ ಸ್ಥಾನದಲ್ಲಿ ಓಟ ಮುಕ್ತಾಯಗೊಳಿಸಿದರು. ದೃಷ್ಟಿ ದೋಷ ಹೊಂದಿರುವ ಓಟಗಾರರ ಈ ವಿಭಾಗದಲ್ಲಿ 18 ವರ್ಷದ ಸೌಮ್ಯಗೆ ಕುಮಾರ್ ಭರತ್ ಮತ್ತು ರಾಧಾಗೆ ಗೋವಿಂದ್ ಸೋಲಂಕಿ ಗೈಡ್ ಆಗಿ ನೆರವಾದರು. ಈ ಸ್ಪರ್ಧೆಯಲ್ಲಿ ಜಪಾನ್ನ ಮನಾ ಸಸಕಿ 5 ನಿಮಿಷ, 12.15 ಸೆಕೆಂಡ್ಗಳಲ್ಲಿ ಮೊದಲಿಗರಾಗಿಯೇ ಸ್ಪರ್ಧೆ ಮುಗಿಸಿದ್ದರು. ಆದರೆ ಅಂತಿಮವಾಗಿ ಟಿ12-13 ಅಂಕ ಪದ್ಧತಿಯ ಅನ್ವಯ ವಿಜೇತರನ್ನು ನಿರ್ಧರಿಸಲಾಗುತ್ತದೆ. ಇದರನ್ವಯ 621 ಅಂಕ ಗಳಿಸಿದ ಸೌಮ್ಯ ಮೊದಲ ಸ್ಥಾನ ಗಳಿಸಿದರೆ, ರಾಧಾ 421 ಅಂಕದೊಂದಿಗೆ 2ನೇ ಸ್ಥಾನ ಪಡೆದರು. ಸಸಕಿ 336 ಅಂಕದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಟಿ12 ನ್ಯೂನತೆಯ ಓಟಗಾರರು ಹೆಚ್ಚಿನ ದೃಷ್ಟಿದೋಷ ಹೊಂದಿರುವುದರಿಂದ ಗೈಡ್ಗಳು ಅವರ ಜತೆಗೆ ಓಡಿ ದಾರಿ ತೋರಿಸುತ್ತಾರೆ. ಸಸಕಿ ಟಿ13 ನ್ಯೂನತೆಯಡಿ ಗೈಡ್ ನೆರವಿಲ್ಲದೆ ಓಡಿದರು. ಹೀಗಾಗಿ ಚೀನಾದ ಟಿ13 ಓಟಗಾರ್ತಿ ಲುವೊ ಝಿಹಾನ್ (5 ನಿಮಿಷ, 20.39) ರಾಧಾಗಿಂತ ಬೇಗನೆ ಸ್ಪರ್ಧೆ ಮುಗಿಸಿದರೂ, ಕಡಿಮೆ ಅಂಕದಿಂದಾಗಿ (254) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹೂವಿನ ವ್ಯಾಪಾರ ನಡೆಸುವ ರೈತನ ಪುತ್ರಿಯಾಗಿರುವ ರಾಧಾ, ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದರು. ಸೌಮ್ಯ ಈ ಮುನ್ನ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರಾ$ನ್ ಪ್ರಿಯಲ್ಲೂ ಚಿನ್ನದ ಪದಕ ಜಯಿಸಿದ್ದರು. ಸೌಮ್ಯ ಬೆಂಗಳೂರಿನ ಭಾರತೀಯ ಅಥ್ಲೆಟಿಕ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ರಾಜ್ಯದ ರಕ್ಷಿತಾ ಕೈಜಾರಿದ ಕಂಚು
ಕರ್ನಾಟಕದ ಓಟಗಾರ್ತಿ ರಕ್ಷಿತಾ ರಾಜು ಟಿ11 ಮಹಿಳೆಯರ 1,500 ಮೀ. ಓಟದಲ್ಲಿ 5 ನಿಮಿಷ, 31.45 ಸೆಕೆಂಡ್ಗಳಲ್ಲಿ 3ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರೂ, ಕಂಚಿನ ಪದಕದಿಂದ ವಂಚಿತರಾದರು. ಅವರು ಶೂ, ಉಡುಪು ಮತ್ತು ಬಿಬ್ ನಿಯಮಾವಳಿ ಉಲ್ಲಂಘನೆಗಾಗಿ ಸ್ಪರ್ಧೆಯಿಂದ ಅನರ್ಹಗೊಂಡ ಕಾರಣ ಪದಕ ತಪ್ಪಿಸಿಕೊಂಡರು. ಆದರೆ ಈ ಕಂಚಿನ ಪದಕ ಭಾರತದ ಕೈತಪ್ಪಲಿಲ್ಲ. 5 ನಿಮಿಷ, 41.85 ಸೆಕೆಂಡ್ಗಳಲ್ಲಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದ ಭಾರತದ ರವನ್ನಿ ವಲಸನೈನಿ ಕಂಚು ವಿಜೇತರಾಗಿ ಬಡ್ತಿ ಪಡೆದರು. 2018 ಮತ್ತು 2023ರ ಆವೃತ್ತಿಯ ಚಿನ್ನದ ಪದಕ ವಿಜೇತೆಯಾಗಿರುವ ಚಿಕ್ಕಮಗಳೂರಿನ 25 ವರ್ಷದ ರಕ್ಷಿತಾಗೆ ತಬ್ರೆಸ್ ಖಾನ್ ಗೈಡ್ ಆಗಿದ್ದರು.