ಕ್ರೀಡೆ

ಕೆ.ಎಲ್​. ರಾಹುಲ್​ಗೆ ಕೈಕೊಟ್ಟು​ ರಿಷಭ್​ ಪಂತ್​ಗೆ ಗಾಳ ಹಾಕಿದ ಬೆನ್ನಲ್ಲೇ​ RCB ಬಳಿ ಕ್ಷಮೆಕೋರಿದ ಎಲ್​ಎಸ್​ಜಿ! IPL 2025

IPL 2025 : ಐಪಿಎಲ್​ ಇತಿಹಾಸದಲ್ಲೇ ರಿಷಭ್​ ಪಂತ್​ ಹೊಸ ದಾಖಲೆ ಬರೆದಿದ್ದಾರೆ. ನಿನ್ನೆ (ನ.24) ನಡೆದ ಮೊದಲ ದಿನದ ಮೆಗಾ ಹರಾಜಿನಲ್ಲಿ ಪಂತ್​ ಅವರು ಅತ್ಯಂತ ದುಬಾರಿ ಆಟಗಾರನೆಂಬ ಹೆಗ್ಗಳಿಕೆ ಗಳಿಸಿದ್ದಾರೆ. ಪಂತ್​ಗಾಗಿ ಮೂರು ಫ್ರಾಂಚೈಸಿಗಳು ಬಿಡ್ ಮಾಡಿದವು. ಡೆಲ್ಲಿ ಕಾಪಿಟಲ್ಸ್​ ಆರ್​ಟಿಎಂ ಕಾರ್ಡ್ ಬಳಸಲು ಸಹ ನಿರ್ಧರಿಸಿತು. ಆದರೆ, ಲಖನೌ ಸೂಪರ್​ ಜೈಂಟ್ಸ್ ( ಎಲ್​ಎಸ್​ಜಿ )​ ಫ್ರಾಂಚೈಸಿ, ಬೆಲೆಯನ್ನು 27 ಕೋಟಿ ರೂ.ಗೆ ಹೆಚ್ಚಿಸಿತು. ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನನ್ನಾಗಿ ಮಾಡಿದೆ. ಇದರ ನಡುವೆ ಆರ್​ಸಿಬಿ ತಂಡವನ್ನು ಎಲ್​ಎಸ್​ಜಿ ಟ್ರೋಲ್​ ಮಾಡಿದೆ.

11.25 ಕೋಟಿ ರೂ.ವರೆಗೂ ಆರ್​ಸಿಬಿ ಮತ್ತು ಎಲ್​ಎಸ್​ಜಿ ನಡುವೆ ಬಿಡ್ಡಿಂಗ್​ ನಡೆಯಿತು. ಆದರೆ, ಆರ್​ಸಿಬಿ ಬಿಡ್ಡಿಂಗ್​ ಮುಂದುವರಿಸಲಿಲ್ಲ. ಅಂತಿಮವಾಗಿ ಪಂತ್​, ಎಲ್​ಎಸ್​ಜಿ ಪಾಲಾದರು. ಬಿಡ್ಡಿಂಗ್​ ನಡುವೆಯೇ ಆರ್​ಸಿಬಿ, ತನ್ನ ಎಕ್ಸ್​ ಖಾತೆಯಲ್ಲಿ ಸ್ಪೈಡರ್​ಮ್ಯಾನ್​ ಜಿಐಎಫ್​ ಬಳಸಿ, ಬಹುಶಃ ಚಿನ್ನಸ್ವಾಮಿ​ಯ ಕಡೆಗೆ? ಎಂದು ಅಡಿಬರಹ ನೀಡಿತ್ತು. ಪರೋಕ್ಷವಾಗಿ ಪಂತ್​ ಉಲ್ಲೇಖಿಸಿ ಆರ್​ಸಿಬಿ ಈ ಪೋಸ್ಟ್ ಮಾಡಿತು. ಆದರೆ, ಬಿಡ್ಡಿಂಗ್​ನಲ್ಲಿ ಪಂತ್​ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಂಡ ಎಲ್​ಎಸ್​ಜಿ, ಆರ್​ಸಿಬಿ ಟ್ವೀಟ್​ಗೆ ರೀಟ್ವೀಟ್​ ಮಾಡಿ ಕ್ಷಮಿಸಿ, ಮಕ್ಕಳೆ ( Sorry Kid ) ಎಂದು ಪೋಸ್ಟ್​ ಮಾಡುವ ಮೂಲಕ ಕಾಲೆಳೆದಿದೆ. ಈ ಪೋಸ್ಟ್​ಗೆ ಎಲ್​ಎಸ್​ಜಿ ಮಾರ್ವೆಲ್ ಫ್ರ್ಯಾಂಚೈಸಿಯ ಡಾಕ್ಟರ್ ಸ್ಟ್ರೇಂಜ್ ಜಿಐಎಫ್​ ಬಳಸಿತು. ನೀವದನ್ನು ಈ ಕೆಳಗೆ ನೋಡಬಹುದು.

ರಾಹುಲ್​ರನ್ನು ಖರೀದಿಸದ ಆರ್​ಸಿಬಿ

ರಾಹುಲ್​​ ಅವರು ಲಖನೌ ಸೂಪರ್​ಜೈಂಟ್ಸ್​ ತಂಡವನ್ನು ತೊರೆಯುತ್ತಾರೆ ಎಂಬುದು ಗೊತ್ತಾದ ಕೂಡಲೇ ಆರ್​ಸಿಬಿಗೆ ಬರುತ್ತಾರೆ ಎಂಬ ಚರ್ಚೆ ಶುರುವಾಯಿತು. ಕನ್ನಡಿಗನಾದ್ದರಿಂದ ರಾಹುಲ್,​ ಆರ್​ಸಿಬಿಗೆ ಬಂದರೆ ಚೆನ್ನಾಗಿರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹರಾಜಿನಲ್ಲಿ ಆರ್​ಸಿಬಿ ಮ್ಯಾನೇಜ್​ಮೆಂಟ್​ ರಾಹುಲ್​ರನ್ನು ಕೈಬಿಟ್ಟಿದೆ. ಆರಂಭದಲ್ಲಿ ಬಿಡ್​ ಮಾಡಿದರೂ ಕೂಡ ಅತಿ ಹೆಚ್ಚು ಹಣವನ್ನು ವ್ಯಯಿಸಲು ಇಷ್ಟಪಡದ ಆರ್​ಸಿಬಿ ಕೊನೆಯಲ್ಲಿ ಬಿಡ್​ನಿಂದ ಹಿಂದೆ ಸರಿಯಿತು. ಅಂತಿಮವಾಗಿ ರಾಹುಲ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪಾಲಾದರು. ಇದರಿಂದ ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಇಂಥಾ ಕಳಪೆ ಫ್ರಾಂಚೈಸಿಯನ್ನು ನಾವೆಂದೂ ನೋಡೇ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಾಬಿನ್​ ಉತ್ತಪ್ಪ ಆಕ್ರೋಶ

ಜಿಯೋಸಿನಿಮಾದೊಂದಿಗೆ ಮಾತನಾಡಿದ ಉತ್ತಪ್ಪ, ಆರ್​ಸಿನಿ ಅಭಿಮಾನಿಗಳು ತುಂಬಾ ಬೇಸರ ಅನುಭವಿಸುತ್ತಾರೆ. ಏಕೆಂದರೆ, ಆರ್​ಸಿಬಿ ತನ್ನ ಪರ್ಸ್​ನಲ್ಲಿ ಅತಿ ಹೆಚ್ಚು ಹಣ ಉಳಿಸಿಕೊಂಡಿರುವ ಎರಡನೇ ತಂಡವಾಗಿತ್ತು. ಭಾರಿ ಬೇಡಿಕೆ ಇರುವ ಆಟಗಾರರ ಹಿಂದೆ ಬೀಳದ ಆರ್​ಸಿಬಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಸ್ಥಳೀಯ ಹುಡುಗ. ಆರ್​ಸಿಬಿ ಬಿಡ್ಡಿಂಗ್​ ನೋಡಿ ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಮೊದಲ ಎರಡು ಮಾರ್ಕ್ಯೂ ಸೆಟ್‌ಗಳಲ್ಲಿ ನೀವು ಒಂದಕ್ಕಿಂತ ಹೆಚ್ಚು ಆಯ್ಕೆಯನ್ನೇ ಮಾಡಲಿಲ್ಲ. ಒಂದು ಕಡೆ ನೀವು ತಂಡವನ್ನು ಮರು ನಿರ್ಮಾಣ ಮಾಡಲು ಪ್ರಯತ್ನಿಸಿರುವಾಗ ಮತ್ತು ನಿಮ್ಮದೇಯಾದ ಲೆಕ್ಕಾಚಾರ ಮಾಡುವಾಗ ಇಷ್ಟು ವರ್ಷಗಳಿಂದ ನಿಮ್ಮನ್ನು ಬೆಂಬಲಿಸಿಕೊಂಡು ಬರುತ್ತಿರುವ ಅಭಿಮಾನಿಗಳ ಭಾವನೆಗಳಿಗೂ ನೀವು ಬೆಲೆ ಕೊಡಬೇಕಿತ್ತು. ಈ ರೀತಿ ಮಾಡಬಾರದಿತ್ತು. ಅಭಿಮಾನಿಗಳ ಟ್ವೀಟ್​ಗಳನ್ನು ನೋಡಿದಾಗ ನನಗೆ ನಿಜಕ್ಕೂ ಬೇಸರವಾಯಿತು. ನಾನು ಒಬ್ಬ ಆರ್​ಸಿಬಿಯ ಅಭಿಮಾನಿಯಾಗಿ ಮತ್ತು ಮಾಜಿ ಆಟಗಾರನಾಗಿ ಹೇಳುವುದಾದರೆ ಆರ್​ಸಿಬಿ ತಂತ್ರವನ್ನು ಕಳೆದುಕೊಂಡಿದೆ ಅನಿಸುತ್ತಿದೆ ಎಂದು ಉತ್ತಪ್ಪ ಬೇಸರ ಹೊರಹಾಕಿದರು.

ನಿನ್ನೆ ಹರಾಜಿನಲ್ಲಿ ಆರ್​ಸಿಬಿ ತಂಡ ಜೋಶ್​ ಹ್ಯಾಸಲ್​ವುಡ್​ (12.50 ಕೋಟಿ ರೂ.), ಫಿಲ್ ಸಾಲ್ಟ್​ (11.50 ಕೋಟಿ ರೂ.), ಜಿತೇಶ್​ ಶರ್ಮ (11 ಕೋಟಿ ರೂ.), ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ ರೂ.) ರಸಿಕ್​ ಸಲಾಂ (6 ಕೋಟಿ ರೂ.) ಹಾಗೂ ಸುಯಾಶ್​ ಶರ್ಮ (2.60 ಕೋಟಿ ರೂ.) ಅವರನ್ನು ಖರೀದಿ ಮಾಡಿದ್ದು, ತನ್ನ ಪರ್ಸ್​ನಲ್ಲಿ 30.65 ಕೋಟಿ ರೂ. ಉಳಿಸಿಕೊಂಡಿದೆ. ಇಂದು ಎರಡನೇ ದಿನ ಅಥವಾ ಕೊನೆಯ ದಿನದ ಹರಾಜು ನಡೆಯಲಿದೆ. (ಏಜೆನ್ಸೀಸ್)