ಕ್ರೀಡೆ

ವಿಶ್ವಕಪ್​ನಲ್ಲಿ ಭಾರತ ಸೋಲಿಸಬೇಕೆಂದ್ರೆ… ಪಾಕ್​ ಮಾಜಿ ಕ್ರಿಕೆಟಿಗ ರಮೀಜ್​ ರಾಜಾ ಹೇಳಿಕೆ ವೈರಲ್​

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಶರ್ಮ ನೇತೃತ್ವದ ಆತಿಥೇಯ ಭಾರತವನ್ನು ಸೋಲಿಸುವುದು ಎದುರಾಳಿ ತಂಡಕ್ಕೆ ಸುಲಭದ ಮಾತೇ ಅಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ರಮೀಜ್​ ರಾಜಾ ನಂಬಿದ್ದಾರೆ. ಅಲ್ಲದೆ, ಯಾರಾದರೂ ಭಾರತವನ್ನು ಸೋಲಿಸುವುದಾದರೆ ಅವರು ತಮ್ಮ ಆಟದ ಮೂಲಕ ಜಾದೂ ಮಾಡಬೇಕಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ಪಂದ್ಯದಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದಲೇ ನಾಯಕ ರೋಹಿತ್​ ಶರ್ಮ ಉತ್ತಮ ಆರಂಭ ಒದಗಿಸುತ್ತಿದ್ದಾರೆ ಎಂದಿರುವ ರಮೀಜ್​ ರಾಜಾ, ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಭಾರತ ಸಾಕಷ್ಟು ಫೈರ್​ಪವರ್​ ಹೊಂದಿದೆ ಎಂದಿದ್ದಾರೆ.

ಈ ವಿಶ್ವಕಪ್​ನಲ್ಲಿ ರೋಹಿತ್​ ಶರ್ಮ, ಪವರ್​ಪ್ಲೇನಲ್ಲಿ 140 ಸ್ಟ್ರೈಕ್​ ರೇಟ್​ ಹೊಂದಿದ್ದಾರೆ. ಪವರ್​ಪ್ಲೇನಲ್ಲೇ ಈಗಾಗಲೇ 9 ಸಿಕ್ಸರ್​ ಚಚ್ಚಿದ್ದಾರೆ. ಅಲ್ಲದೆ, ಮಧ್ಯ ಕ್ರಮಾಂಕ ಬಲವಾಗಿರುವುದಲ್ಲದೆ, ಉದ್ದದ್ದ ಬ್ಯಾಟಿಂಗ್ ಲೈನಪ್​ ಸಹ ಹೊಂದಿದೆ. ಹೀಗಾಗಿ ಭಾರತವನ್ನು ಸೋಲಿಸುವುದು ತುಂಬಾ ಕಷ್ಟವಾಗಿದೆ. ಅವರನ್ನು ಸೋಲಿಸಲು ಯಾರಾದರೂ ತಮ್ಮ ಪವಾಡ ಪ್ರದರ್ಶನದೊಂದಿಗೆ ಜಾದೂ ಮಾಡಬೇಕಷ್ಟೇ ಎಂದು ಇತ್ತೀಚಿನ ಯೂಟ್ಯೂಬ್​ ಸಂದರ್ಶನದಲ್ಲಿ ರಮೀಜ್​ ರಾಜಾ ಹೇಳಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ಸಂಪೂರ್ಣ ಪ್ರದರ್ಶನ ನೀಡಿದ ಏಕೈಕ ತಂಡ ಯಾವುದಾದರೂ ಇದ್ದರೆ ಅದು ಭಾರತ ಎಂದು ರಮೀಜ್​ ರಾಜಾ ಕೊಂಡಾಡಿದರು. ಭಾರತ ಬಿಟ್ಟು ಬೇರೆ ಯಾವುದೇ ತಂಡವು ವಿಶ್ವಕಪ್​ನಲ್ಲಿ ಸಂಪೂರ್ಣ ಪ್ರದರ್ಶನವನ್ನು ನೀಡಿಲ್ಲ. ಭಾರತದ ಮೊದಲ ನಾಲ್ಕರಿಂದ ಐದು ಆಟಗಾರರು 50ರ ಸರಾಸರಿಯಲ್ಲಿದ್ದಾರೆ. ಸಿಕ್ಸರ್​ ಸಿಡಿಸುವ ಸಾಮರ್ಥ್ಯವಿದ್ದು, ಉತ್ತಮ ಸ್ಟ್ರೈಕ್​ರೇಟ್​ ಅನ್ನು ಹೊಂದಿದ್ದಾರೆ. ಬೌಲಿಂಗ್​ನಲ್ಲೂ ಅವರು ಉತ್ತಮ ಲಯದಲ್ಲಿದ್ದಾರೆ ಎಂದರು.

ರಮೀಜ್​ ರಾಜಾ ಹೇಳಿದಂತೆ ಭಾರತ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ಇದುವರೆಗೂ ಆಡಿರುವ 4 ಪಂದ್ಯಗಳಲ್ಲೂ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಶುಭಮನ್​ ಗಿಲ್​, ಕೆ.ಎಲ್​. ರಾಹುಲ್​ ಮತ್ತು ಶ್ರೇಯಸ್ ಅಯ್ಯರ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಅದೇ ರೀತಿ ಜಸ್ಪ್ರಿತ್​ ಬುಮ್ರಾ, ಸಿರಾಜ್​, ಕುಲದೀಪ್​ ಯಾದವ್​, ಶಾರ್ದೂಲ್​ ಠಾಕೂರ್​ ಕೂಡ ಉತ್ತಮ ಲಯದಲ್ಲಿದ್ದಾರೆ. (ಏಜೆನ್ಸೀಸ್​)