ಕ್ರೀಡೆ

ಕೊಹ್ಲಿ ದಾಖಲೆ ಮುರಿದುಬಿಟ್ರಾ ಸ್ಮೃತಿ ಮಂಧಾನ? ವೈರಲ್​ ಪೋಸ್ಟ್ ಹಿಂದಿನ ಅಸಲಿ ಸತ್ಯವೇನು? Virat Kohli

ನವದೆಹಲಿ: ಭಾರತದ ಮಹಿಳಾ ತಂಡದ ಸ್ಟಾರ್​ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಅವರು ದಾಖಲೆಗಳ ಸರದಾರ, ರನ್ ಮೆಷಿನ್​ ಹಾಗೂ ಕ್ರಿಕೆಟ್​ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್​ ಕೊಹ್ಲಿ (Virat Kohli ) ಅವರ ದಾಖಲೆಯೆಯನ್ನು ಹಿಂದಿಕ್ಕಿದ್ದಾರೆ ಎಂಬ ಬರಹವುಳ್ಳ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ, ನಿಜಕ್ಕೂ ಸ್ಮೃತಿ, ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ರಾ? ಈ ಪೋಸ್ಟ್​ ಎಷ್ಟು ಸತ್ಯ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

‘iasworldofficial’ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಕ್ಟೋಬರ್ 13ರಂದು ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಭಾರತೀಯ ಮಹಿಳಾ ಕ್ರಿಕೆಟರ್​ ಸ್ಮೃತಿ ಅವರು ಮಹಿಳಾ ಏಕದಿನ ಪಂದ್ಯಗಳಲ್ಲಿ 5,000 ರನ್‌ಗಳನ್ನು ತಲುಪಿದ ಅತ್ಯಂತ ಕಿರಿಯ ಮತ್ತು ವೇಗದ ಆಟಗಾರ್ತಿಯಾಗಿದ್ದಾರೆ. ವೇಗವಾಗಿ 5000 ರನ್​ ಗಳಿಸಿದ ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನೂ ಸ್ಮೃತಿ ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಭಾರತದ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಪಂದ್ಯದ ನಂತರ ಈ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಅಲ್ಲದೆ, ಅನೇಕ ಇನ್​​ಸ್ಟಾಗ್ರಾಂ ಬಳಕೆದಾರರು ಸ್ಮೃತಿ ಅವರ ಸಾಧನೆಯನ್ನು ಎತ್ತಿ ತೋರಿಸುವ ಗ್ರಾಫಿಕ್ಸ್‌ನೊಂದಿಗೆ ಅಭಿನಂದನಾ ಪೋಸ್ಟ್‌ಗಳನ್ನು ಹಂಚಿಕೊಂಡರು. ಇದರ ನಡುವೆ ಕೆಲವರು ಸಂದೇಹವನ್ನು ಸಹ ವ್ಯಕ್ತಪಡಿಸಿದರು. ಏಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಕಲಿ ಸುದ್ದಿಗಳು ಹರಿದಾಡುವುದರಿಂದ ಸ್ಮೃತಿ ಕುರಿತಾದ ಪೋಸ್ಟ್​ ಕೂಡ ಅನೇಕರಲ್ಲಿ ಪ್ರಶ್ನೆ ಹುಟ್ಟುಹಾಕಿತು.

ಸ್ಮೃತಿ ಅವರು ಕೇವಲ 112 ಇನ್ನಿಂಗ್ಸ್‌ಗಳಲ್ಲಿ 5,000 ಏಕದಿನ ರನ್‌ಗಳನ್ನು ತಲುಪಿದರೆ, ಪುರುಷರ ಏಕದಿನ ಪಂದ್ಯಗಳಲ್ಲಿ 5,000 ರನ್‌ಗಳ ಗಡಿಯನ್ನು ದಾಟಲು ಕಿಂಗ್ ಕೊಹ್ಲಿ 114 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಪೋಸ್ಟ್‌ಗಳು ಹೇಳುತ್ತವೆ. ಹಾಗಾದರೆ, ಈ ಪೊಸ್ಟ್​ನಲ್ಲಿ ಹೇಳುತ್ತಿರುವುದು ಸತ್ಯವೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೌದು, ವೈರಲ್​ ಆಗುತ್ತಿರುವ ಪೋಸ್ಟ್​ನಲ್ಲಿ ಹೇಳಿರುವುದು ನೂರಕ್ಕೆ ನೂರು ಸತ್ಯ. ಈ ಕುರಿತು ಪ್ರೆಸ್​ ಟ್ರಸ್ಟ್ ಆಫ್ ಇಂಡಿಯಾ (PTI) ಫ್ಯಾಕ್ಟ್​ಚೆಕ್​ ಮಾಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ICC)ಯ ವೆಬ್​ಸೈಟ್​ನಲ್ಲಿ ದಾಖಲಾಗಿರುವ ದತ್ತಾಂಶ ಮತ್ತು ಬಿಸಿಸಿಐ ಪ್ರಕಟಿಸಿರುವ ಅಧಿಕೃತ ಪಂದ್ಯದ ಡೇಟಾವನ್ನು ಪರಿಶೀಲಿಸು ಮೂಲಕ ವೈರಲ್​ ಪೋಸ್ಟ್​ನ ನಿಜಾಂಶವನ್ನು ಪರಿಶೀಲಿಸಿದೆ. ಅದರ ಪ್ರಕಾರ ಸ್ಮೃತಿ ಅವರು 112 ಇನ್ನಿಂಗ್ಸ್‌ಗಳಲ್ಲಿ 5,000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಅಸ್ತಿತ್ವದಲ್ಲಿರುವ ದಾಖಲೆಗಳು ದೃಢಪಡಿಸುತ್ತವೆ. ಹೀಗಾಗಿ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ವೇಗದ 5000 ರನ್​ ಮಾಡಿದ ಸಾಧನೆ ಸ್ಮೃತಿ ಹೆಸರಿನಲ್ಲಿದೆ. (ಏಜೆನ್ಸೀಸ್​)