ಕುಮಾಮೊಟೊ: ಬಿಡಬ್ಲ್ಯುಎಫ್ ಟೂರ್ನಲ್ಲಿ ತನ್ನ ಭರ್ಜರಿ ನಿರ್ವಹಣೆ ಮುಂದುವರಿಸಿರುವ ಭಾರತದ ತಾರೆ ಲಕ್ಷ್ಯ ಸೇನ್, ತಾನಾಡಿದ ಸತತ 2ನೇ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಸಾಧನೆ ಮಾಡಿದ್ದಾರೆ. ಕುಮಾಮೊಟೊ ಮಾಸ್ಟರ್ಸ್ ಜಪಾನ್ ಸೂಪರ್-500 ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಸ್ಥಳಿಯ ತಾರೆ ಕೋಕಿ ವತನಾಬೆಗೆ ಸೋಲುಣಿಸುವ ಮೂಲಕ ಲಕ್ಷ್ಯ ಸೇನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅವರು ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯರೆಂಬ ಇತಿಹಾಸ ಬರೆದರು. 25 ವರ್ಷದ ಲಕ್ಷ್ಯ ಕಳೆದ ವಾರ ಹೈಲೋ ಓಪನ್ ಜಯಿಸಿದ್ದರು.
ವಿಶ್ವ ನಂ. 13 ಲಕ್ಷ್ಯ ಸೇನ್ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ವತನಾಬೆ ವಿರುದ್ಧ 13-21, 21-18, 21-14 ಗೇಮ್ಗಳಿಂದ 64 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಲಕ್ಷ್ಯ ಸೇನ್ ವರ್ಷಾಂತ್ಯದಲ್ಲಿ ಹಾಂಗ್ರೆೌನಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್ ವರ್ಲ್ಟ್ ಟೂರ್ ಫೈನಲ್ಸ್ಗೆ ಅರ್ಹತೆ ಪಡೆಯುವ ಸನಿಹ ತಲುಪಿದ್ದಾರೆ.
"ಇಲ್ಲಿ ಪ್ರಶಸ್ತಿ ಜಯಿಸಿರುವುದು ಅತ್ಯಂತ ಸಂತಸ ನೀಡಿದೆ. ಕಳೆದ ವರ್ಷ ಸೆಮೀಸ್ನಲ್ಲೇ ಹೊರಬಿದ್ದಿದ್ದೆ. ಈ ವರ್ಷ ಫಲಿತಾಂಶ ಸುಧಾರಿಸಿರುವ ಖುಷಿ ಇದೆ. ಸತತ 2ನೇ ಪ್ರಶಸ್ತಿ ಜಯಿಸಿರುವೆ. ಇದೇ ಫಾರ್ಮ್ ಮುಂದುವರಿಸಲು ಬಯಸುವೆ' ಎಂದು ಉತ್ತರಾಖಂಡದ ಲಕ್ಷ್ಯ ಸೇನ್ ತಿಳಿಸಿದ್ದಾರೆ.
ವರ್ಲ್ಡ್ ಟೂರ್ ಫೈನಲ್ಸ್ ಅರ್ಹತೆ ಸನಿಹ
ಈ ಟೂರ್ನಿಗೆ ಮುನ್ನ ಬಿಡಬ್ಲ್ಯುಎಫ್ ವರ್ಲ್ಟ್ ಟೂರ್ ಫೈನಲ್ಸ್ನ ಅಂಕಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದ ಲಕ್ಷ್ಯ ಸೇನ್. ಪ್ರಶಸ್ತಿ ಗೆಲುವಿನೊಂದಿಗೆ 9,200 ಅಂಕ ಕಲೆಹಾಕಿದ್ದಾರೆ. ಇದರೊಂದಿಗೆ ಅವರು ಒಟ್ಟಾರೆ 74,180 ಅಂಕಗಳೊಂದಿಗೆ 6ನೇ ಸ್ಥಾನಕ್ಕೇರಿದ್ದಾರೆ. ಅಂಕಪಟ್ಟಿಯ ಅಗ್ರ 8 ಆಟಗಾರರು ಫೈನಲ್ಸ್ ಟೂರ್ನಿಗೆ ಅರ್ಹತೆ ಗಳಿಸಲಿದ್ದಾರೆ. ವರ್ಷಾಂತ್ಯದ ಇನ್ನೆರಡು ಟೂರ್ನಿಗಳು ಬಾಕಿ ಇದ್ದು, ಅಲ್ಲಿಯವರೆಗೆ ಅಗ್ರ 8ರಲ್ಲಿ ಉಳಿದುಕೊಂಡರೆ ಲಕ್ಷ್ಯಗೆ ಅರ್ಹತೆ ಒಲಿಯಲಿದೆ.