ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯುವ ಎಡಗೈ ಬ್ಯಾಟರ್ ಆರ್. ಸ್ಮರಣ್ (104*ರನ್, 60 ಎಸೆತ, 11 ಬೌಂಡರಿ, 4 ಸಿಕ್ಸರ್) ಭರ್ಜರಿ ಶತಕದ ಬಲದಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹಾಲಿ ರನ್ನರ್ಅಪ್ ಮೈಸೂರು ವಾರಿಯರ್ಸ್ಗೆ 3 ವಿಕೆಟ್ಗಳಿಂದ ಆಘಾತಕಾರಿ ಸೋಲುಣಿಸಿದೆ. ದೇವದತ್ ಪಡಿಕ್ಕಲ್ ಬಳಗ ಟೂರ್ನಿಯ ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವಿನ ಸಂಭ್ರಮ ಕಂಡಿತು.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಮೈಸೂರು ತಂಡ ನಾಯಕ ಕರುಣ್ ನಾಯರ್ (66 ರನ್, 35 ಎಸೆತ, 8 ಬೌಂಡರಿ, 3 ಸಿಕ್ಸರ್) ಅರ್ಧಶತಕದಾಟದಿಂದ 8 ವಿಕೆಟ್ಗೆ 196 ರನ್ ಪೇರಿಸಿತು. ಪ್ರತಿಯಾಗಿ ಗುಲ್ಬರ್ಗಾ ತಂಡ ಮೊದಲ 7 ಎಸೆತಗಳಲ್ಲೇ ಇಬ್ಬರೂ ಆರಂಭಿಕರನ್ನು ಕಳೆದುಕೊಂಡರೂ, ಆರ್. ಸ್ಮರಣ್ ದಿಟ್ಟ ಹೋರಾಟದಿಂದ 7 ವಿಕೆಟ್ಗೆ 200 ರನ್ ಗಳಿಸಿ ಜಯಿಸಿತು. ಕೊನೇ ಎಸೆತದಲ್ಲಿ ಗೆಲುವಿಗೆ 1 ರನ್ ಬೇಕಿದ್ದಾಗ ಸ್ಮರಣ್ ಬೌಂಡರಿ ಬಾರಿಸಿ ಗೆಲ್ಲಿಸಿದರು. ಮನೋಜ್ ಭಾಂಡಗೆ ಎಸೆದ ಕೊನೇ ಓವರ್ನಲ್ಲಿ 10 ರನ್ ಬೇಕಿದ್ದಾಗ ಸ್ಮರಣ್ ಮೊದಲ 2 ಎಸೆತಗಳಲ್ಲಿ 3 ರನ್ ಗಳಿಸಿ ಶತಕ ಪೂರೈಸಿದರು. ನಂತರದ 2 ಎಸೆತಗಳಲ್ಲಿ ರಿತೇಶ್ ಭಟ್ಕಳ್ 6 ರನ್ ಗಳಿಸಿ, ಓವರ್ನ 5ನೇ ಎಸೆತದಲ್ಲಿ ರನೌಟಾದರು.
ಗಮನಸೆಳೆದ ಸಮಿತ್ ದ್ರಾವಿಡ್
ಟೀಮ್ ಇಂಡಿಯಾ ಮಾಜಿ ಕೋಚ್, ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ 24 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 33 ರನ್ ಸಿಡಿಸಿ ಗಮನಸೆಳೆದರು. ಮೈಸೂರು 18 ರನ್ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು ಆಘಾತ ಎದುರಿಸಿದಾಗ ಸಮಿತ್, ನಾಯಕ ಕರುಣ್ ನಾಯರ್ ಜತೆಗೂಡಿ 3ನೇ ವಿಕೆಟ್ಗೆ 83 ರನ್ ಜತೆಯಾಟವಾಡಿ ಚೇತರಿಕೆ ಒದಗಿಸಿದರು. 18 ವರ್ಷದ ಸಮಿತ್ ಟೂರ್ನಿಯ ಮೊದಲ 2 ಪಂದ್ಯಗಳಲ್ಲಿ ತಲಾ 7 ರನ್ ಗಳಿಸಿದ್ದರು.
ಮೈಸೂರು ವಾರಿಯರ್ಸ್: 8 ವಿಕೆಟ್ಗೆ 196 (ಕರುಣ್ 66, ಸಮಿತ್ 33, ಸುಮಿತ್ 19, ಭಾಂಡಗೆ 0, ಜೆ. ಸುಚಿತ್ 40, ಕೆ. ಗೌತಮ್ 10, ಮೋನಿಷ್ 25ಕ್ಕೆ 2, ಪೃಥ್ವಿರಾಜ್ 28ಕ್ಕೆ 2, ಯಶೋವರ್ಧನ್ 31ಕ್ಕೆ 2). ಗುಲ್ಬರ್ಗಾ ಮಿಸ್ಟಿಕ್ಸ್: 7 ವಿಕೆಟ್ಗೆ 200 (ಪಡಿಕ್ಕಲ್ 1, ಸ್ಮರಣ್ 104, ಪ್ರವಿಣ್ ದುಬೆ 37, ಭಾಂಡಗೆ 40ಕ್ಕೆ 2, ವಿದ್ಯಾಧರ್ 42ಕ್ಕೆ 2). ಪಂದ್ಯಶ್ರೇಷ್ಠ: ಸ್ಮರಣ್ ಆರ್.