ಕ್ರೀಡೆ

IPL 2024: ಆರ್​ಸಿಬಿಗೆ ಹ್ಯಾಟ್ರಿಕ್​ ಜಯ; ಗುಜರಾತ್​ ವಿರುದ್ಧ ಭರ್ಜರಿ ಬೌಲಿಂಗ್​

ಬೆಂಗಳೂರು: ನಾಯಕ ಫಾಫ್​ ಡು ಪ್ಲೆಸಿಸ್​ (64 ರನ್​, 23 ಎಸೆತ, 10 ಬೌಂಡರಿ, 3 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ಹಾಗೂ ವೇಗದ ಬೌಲರ್​ಗಳ ಸಂಟಿತ ದಾಳಿಯ ನೆರವಿನಿಂದ ಆತಿಥೇಯ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​&17ರ ತನ್ನ 11ನೇ ಪಂದ್ಯದಲ್ಲಿ ಹಾಲಿ ರನ್ನರ್​ಅಪ್​ ಗುಜರಾತ್​ ಟೈಟಾನ್ಸ್​ ಎದುರು 4 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಹ್ಯಾಟ್ರಿಕ್​ ಜಯದೊಂದಿಗೆ ಫಾಫ್​ ಡು ಪ್ಲೆಸಿಸ್​ ಪಡೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿತು. ಶುಭಮಾನ್​ ಗಿಲ್​ ಬಳಗ 9ನೇ ಸ್ಥಾನಕ್ಕೆ ಕುಸಿದಿದ್ದು, ಪ್ಲೇಆಫ್​ ರೇಸ್​ನಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಇಳಿದ ಗುಜರಾತ್​ ಟೈಟಾನ್ಸ್​, ಆರ್​ಸಿಬಿ ವೇಗಿಗಳ ಬಿಗಿ ದಾಳಿಗೆ ನಿರಂತರ ವಿಕೆಟ್​ ಕಳೆದುಕೊಂಡು ಶಾರುಖ್​ ಖಾನ್​ (37 ರನ್​, 24 ಎಸೆತ, 5 ಬೌಂಡರಿ, 1 ಸಿಕ್ಸರ್​) ಹಾಗೂ ರಾಹುಲ್​ ತೆವಾಟಿಯಾ ಉಪಯುಕ್ತ ಬ್ಯಾಟಿಂಗ್​ ಬಲದಿಂದ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲೌಟ್​ ಆಯಿತು.

ಪ್ಲೆಸಿಸ್​-ವಿರಾಟ್​ ಕೊಹ್ಲಿ ಒದಗಿಸಿದ ಆರಂಭ ಬಲದಿಂದ 6 ಓವರ್​ಗಳಲ್ಲಿ 92 ರನ್​ಗಳಿಸಿದ ಆರ್​ಸಿಬಿ ನಂತರ ನಾಟಕೀಯ ಕುಸಿತ ಕಂಡು 117 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಯಾದ ಅನುಭವಿ ದಿನೇಶ್​ ಕಾರ್ತಿಕ್​ (21*) ಹಾಗೂ ಸ್ವಪ್ನಿಲ್​ ಸಿಂಗ್​ (15*) ನಡೆಸಿದ ದಿಟ್ಟ ಬ್ಯಾಟಿಂಗ್​ನಿಂದ ಅಂತಿಮವಾಗಿ 13.4 ಓವರ್​ಗಳಲ್ಲಿ 6 ವಿಕೆಟ್​ಗೆ 152 ರನ್​ಗಳಿಸಿ ತವರಿನಲ್ಲಿ 2ನೇ ಗೆಲುವು ದಾಖಲಿಸಿತು.

ಚೇಸಿಂಗ್​ಗೆ ಬಲ ತುಂಬಿದ ಪ್ಲೆಸಿಸ್​

ಡು ಪ್ಲೆಸಿಸ್​ ಹಾಗೂ ವಿರಾಟ್​ ಕೊಹ್ಲಿ (42) ಬಿರುಸಿನ ಬ್ಯಾಟಿಂಗ್​ ಮೂಲಕ ಆರ್​ಸಿಬಿ ಚೇಸಿಂಗ್​ ಸುಲಭಗೊಳಿಸಿದರು. ಇವರಿಬ್ಬರು ಮೊದಲ ವಿಕೆಟ್​ಗೆ 35 ಎಸೆತಗಳಲ್ಲಿ 92 ರನ್​ಗಳಿಸಿ ಭರ್ಜರಿ ಆರಂಭ ಒದಗಿಸಿದರು. ಗುಜರಾತ್​ ಬೌಲರ್​ಗಳನ್ನು ದಂಡಿಸಿದ ಪ್ಲೆಸಿಸ್​ ಸರಾಗವಾಗಿ ರನ್​ ದಾಖಲಿಸಿದರು. ಇವರಿಗೆ ಕೊಹ್ಲಿ ಸಮರ್ಥ ಬೆಂಬಲ ಒದಗಿಸಿದರು. 18 ಎಸೆತಗಳಲ್ಲಿ ಹಾಲಿ ಆವೃತ್ತಿಯಲ್ಲಿ 2ನೇ ಅರ್ಧಶತಕ ಸಿಡಿಸಿದ ಪ್ಲೆಸಿಸ್​ ವಿಕೆಟ್​ ಪಡೆದ ಜೋಶ್​ ಲಿಟಲ್​ (45ಕ್ಕೆ 4) ಆರ್​ಸಿಬಿಗೆ ಕಡಿವಾಣ ಹೇರಿದರು. ನಂತರ ವಿಲ್​ ಜಾಕ್ಸ್​ (1),ರಜತ್​ ಪಾಟೀದಾರ್​ (2), ಗ್ಲೆನ್​ ಮ್ಯಾಕ್ಸ್​ವೆಲ್​ (4) ಹಾಗೂ ಕ್ಯಾಮರಾನ್​ ಗ್ರೀನ್​ (1) 18 ರನ್​ ಅಂತರದಲ್ಲಿ ಔಟಾದರು. 7ನೇ ವಿಕೆಟ್​ಗೆ ಜತೆಯಾದ ಕಾರ್ತಿಕ್​ ಹಾಗೂ ಸ್ವಪ್ನಿಲ್​ 18 ಎಸೆತಗಳಲ್ಲಿ 35 ರನ್​ ಕಸಿದು ಇನ್ನೂ 38 ಎಸೆತ ಬಾಕಿಯಿರುವಂತೆಯೇ ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆರ್​ಸಿಬಿ ರನ್​ರೇಟ್​ ಸಹ ಸುಧಾರಣೆ ಕಂಡಿತು.