ಹೈದರಾಬಾದ್: ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಮೊದಲೆರಡು ಟೆಸ್ಟ್‌ಗಳಲ್ಲಿ 11 ವಿಕೆಟ್ ಕಬಳಿಸಿ ಮಿಂಚಿರುವ ವೇಗಿ ಮೊಹಮದ್ ಸಿರಾಜ್ ಈಗ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಅಮೋಘ ನಿರ್ವಹಣೆಗೆ ಮನಸೋತಿರುವ ಹೈದರಾಬಾದ್‌ನ ಅವರ ಮನೆಯ ನೆರೆಹೊರೆಯವರು ಬೃಹತ್ ಕಟೌಟ್ ನಿರ್ಮಿಸಿದ್ದಾರೆ.
ಸಿರಾಜ್ ವಿಕೆಟ್ ಕಬಳಿಸಿದಾಗ ತುಟಿ ಮೇಲೆ ಬೆರಳಿಟ್ಟು ಸಂಭ್ರಮಿಸುವ ರೀತಿಯ ಕಟೌಟ್ ಇದಾಗಿದ್ದು, ನೀಲಿ ಬಣ್ಣದ ಜೆರ್ಸಿಯನ್ನು ಹೊಂದಿದೆ. ಈ ರೀತಿಯ ಸಂಭ್ರಮಾಚರಣೆಯ ಹಿಂದಿನ ಕಾರಣವನ್ನೂ ಇತ್ತೀಚೆಗೆ ವಿವರಿಸಿದ್ದ 27 ವರ್ಷದ ಸಿರಾಜ್, ‘ನನ್ನನ್ನು ಟೀಕಿಸುವವರಿಗೆ ಈ ಮೂಲಕ ಉತ್ತರ ನೀಡುತ್ತಿದ್ದೇನೆ. ನನ್ನ ಚೆಂಡಷ್ಟೇ ಮಾತನಾಡುತ್ತದೆ ಎಂಬುದು ಅದರ ಸಂದೇಶ’ ಎಂದು ಹೇಳಿದ್ದರು.
ಕಳೆದ ವರ್ಷಾಂತ್ಯದಲ್ಲಿ ತಂದೆಯ ಸಾವಿನ ನಡುವೆಯೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮುಂದುವರಿದಿದ್ದ ಸಿರಾಜ್, ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಇದುವರೆಗೆ ಆಡಿರುವ 7 ಟೆಸ್ಟ್‌ಗಳಲ್ಲಿ ಒಟ್ಟು 27 ವಿಕೆಟ್ ಕಬಳಿಸಿದ್ದಾರೆ.