ಬ್ರಿಸ್ಬೇನ್: ಸಿಡ್ನಿಯಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ವೇಗಿ ಮೊಹಮದ್ ಸಿರಾಜ್‌ಗೆ ಬ್ರಿಸ್ಬೇನ್‌ನಲ್ಲೂ ಆತಿಥೇಯ ಪ್ರೇಕ್ಷಕರಿಂದ ನಿಂದನೆ ಎದುರಾಗಿದೆ. ಕೆಲ ಪ್ರೇಕ್ಷಕರು ಸಿರಾಜ್‌ರನ್ನು ‘ಗ್ರಬ್’ (ಕೀಟ) ಎಂದು ನಿಂದಿಸಿದ್ದಾರೆ ಎಂದು ಆಸೀಸ್ ಪತ್ರಿಕೆ ವರದಿ ಮಾಡಿದೆ.
ಸಿಡ್ನಿಯಲ್ಲಿ ಸಿರಾಜ್‌ಗೆ ಜನಾಂಗೀಯ ನಿಂದನೆ ಮಾಡಿದ್ದಕ್ಕೆ 6 ಪ್ರೇಕ್ಷಕರನ್ನು ಬಂಧಿಸಲಾಗಿತ್ತು. ಪ್ರಕರಣದ ಸಂಬಂಧ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಭಾರತ ತಂಡದ ಕ್ಷಮೆಯಾಚಿಸಿತ್ತು. ಇದರ ನಡುವೆಯೂ ಆತಿಥೇಯ ಪ್ರೇಕ್ಷಕರು ಪಾಠ ಕಲಿತಿಲ್ಲ.
ಗಾಬಾ ಮೈದಾನದಲ್ಲೂ ಕೆಲ ಪ್ರೇಕ್ಷಕರು ಸಿರಾಜ್‌ರನ್ನೇ ಗುರಿಯಾಗಿಸಿ ನಿಂದಿಸಿದರು. ವಾಷಿಂಗ್ಟನ್ ಸುಂದರ್ ಕೂಡ ನಿಂದನೆಗೆ ಗುರಿಯಾದರು ಎಂದು ಕೇಟ್ ಹೆಸರಿನ ಪ್ರೇಕ್ಷಕ ಪತ್ರಿಕೆಗೆ ತಿಳಿಸಿದ್ದಾರೆ. ಸಿಡ್ನಿಯಲ್ಲಿ ಪ್ರೇಕ್ಷಕರ ನಿಂದನೆಯಿಂದಾಗಿ 4ನೇ ದಿನದಾಟದಲ್ಲಿ 10 ನಿಮಿಷಗಳ ಆಟಕ್ಕೂ ಅಡಚಣೆ ಎದುರಾಗಿತ್ತು. ಈ ಸಂಬಂಧ ಬಿಸಿಸಿಐ, ಐಸಿಸಿ ಮ್ಯಾಚ್ ರೆಫ್ರಿಗೂ ದೂರು ಸಲ್ಲಿಸಿತ್ತು. ಐಸಿಸಿ ಕೂಡ ಘಟನೆಯನ್ನು ಖಂಡಿಸಿತ್ತು.