ಮೆಲ್ಬೋರ್ನ್: ವಿಶ್ವ ನಂ. 1 ಇಟಲಿಯ ಜನ್ನಿಕ್ ಸಿನ್ನರ್ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೆಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 23 ವರ್ಷದ ಸಿನ್ನರ್ ಮೆಲ್ಬೋರ್ನ್ನಲ್ಲಿ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವೃತ್ತೀಜಿವನದ 3ನೇ ಗ್ರಾಂಡ್ ಸ್ಲಾಂ ಒಲಿಸಿಕೊಂಡಿದ್ದಾರೆ.
ರಾಡ್ ಲೆವರ್ ಅರೇನಾದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಸಿನ್ನರ್ 6-3, 7-6 (7-4), 6-3 ನೇರಸೆಟ್ಗಳಿಂದ 2ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಎದುರು ಗೆಲುವು ಸಾಧಿಸಿದರು. ಇದರೊಂದಿಗೆ ಸಿನ್ನರ್ ಸತತ 2ನೇ ಗ್ರಾಂಡ್ ಸ್ಲಾಂ ಗೆದ್ದಂತಾಗಿದೆ. ಅವರು ಕಳೆದ ವರ್ಷಾಂತ್ಯದಲ್ಲಿ ಯುಎಸ್ ಓಪನ್ ಕೂಡ ಗೆದ್ದಿದ್ದರು. ಸಿನ್ನರ್ ಈಗ ಹಾರ್ಡ್ಕೋರ್ಟ್ ಗ್ರಾಂಡ್ ಸ್ಲಾಂನಲ್ಲಿ ಸತತ 21 ಪಂದ್ಯ ಗೆದ್ದಂತಾಗಿದೆ. ಕಳೆದ 5 ಗ್ರಾಂಡ್ ಸ್ಲಾಂಗಳಲ್ಲಿ ಸಿನ್ನರ್ 3ರಲ್ಲಿ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ.
ವಿಶ್ವದ ಅಗ್ರ ಇಬ್ಬರು ಶ್ರೇಯಾಂಕಿತ ಆಟಗಾರರ ನಡುವಿನ ಕಾದಾಟವನ್ನು ಸಿನ್ನರ್ ಎರಡು ಗಂಟೆ 42 ನಿಮಿಷಗಳಲ್ಲಿ ಏಕಪಯವಾಗಿ ಒಲಿಸಿಕೊಂಡರು. 2ನೇ ಸೆಟ್ನಲ್ಲಿ ಟೈಬ್ರೇಕರ್ವರೆಗಿನ ಹೋರಾಟವನ್ನು ಬಿಟ್ಟರೆ ಸಿನ್ನರ್ಗೆ 27 ವರ್ಷದ ಜ್ವೆರೇವ್ರಿಂದ ಹೆಚ್ಚಿನ ಸವಾಲು ಎದುರಾಗಲಿಲ್ಲ. ಸಿನ್ನರ್ ಒಂದೂ ಬ್ರೇಕ್ ಪಾಯಿಂಟ್ ಬಿಟ್ಟುಕೊಡದೆ ಕಳೆದ ವರ್ಷ ಗೆದ್ದಿದ್ದ ಪ್ರಶಸ್ತಿ ಉಳಿಸಿಕೊಂಡರು.
ಜ್ವೆರೇವ್ 3ನೇ ಬಾರಿ ಫೈನಲ್ನಲ್ಲಿ ಎಡವಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿಯಿಂದ ವಂಚಿತರಾದರು. ಈ ಮುನ್ನ 2020ರ ಯುಎಸ್ ಓಪನ್ ಮತ್ತು 2024ರ ಫ್ರೆಂಚ್ ಓಪನ್ ಫೈನಲ್ನಲ್ಲೂ ಎಡವಿದ್ದರು. ಜ್ವೆರೇವ್ ಗೆದ್ದಿದ್ದರೆ, ಗ್ರಾಂಡ್ ಸ್ಲಾಂ ಗೆದ್ದ 5ನೇ ಜರ್ಮನಿ ಆಟಗಾರ ಎನಿಸುತ್ತಿದ್ದರು. ಸೋಲಿನ ನಂತರ ಜ್ವೆರೇವ್ ಕಣ್ಣೀರಿಟ್ಟಾಗ ಸಿನ್ನರ್ ಬಳಿಗೆ ತೆರಳಿ ಸಮಾಧಾನ ಮಾಡಿದರು.
6.3 ಅಡಿ ಎತ್ತರದ ಸಿನ್ನರ್ ಕಳೆದ 32 ವರ್ಷಗಳಲ್ಲಿ ಮೆಲ್ಬೊರ್ನ್ ಪಾರ್ಕ್ನಲ್ಲಿ ಸತತ 2 ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯರೆನಿಸಿದರು. 1992-93ರಲ್ಲಿ ಕೊನೆಯದಾಗಿ ಜಿಮ್ ಕೋರಿಯರ್ ಈ ಸಾಧನೆ ಮಾಡಿದ್ದರು. ಕಳೆದ ವರ್ಷ ಜೂನ್ನಿಂದ ವಿಶ್ವ ನಂ. 1 ಪಟ್ಟದಲ್ಲಿರುವ ಸಿನ್ನರ್, ಇದೀಗ ಅದನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.
ಹಾಲಿ ಟೆನಿಸ್ ಆಟಗಾರರ ಪೈಕಿ ಸಿನ್ನರ್ 3ನೇ ಗರಿಷ್ಠ ಗ್ರಾಂಡ್ ಸ್ಲಾಂ ವಿಜೇತರಾಗಿದ್ದಾರೆ. ಜೋಕೊವಿಕ್ (24) ಮತ್ತು ಕಾಲೋರ್ಸ್ ಅಲ್ಕರಾಜ್ (4) ಮೊದಲ 2 ಸ್ಥಾನದಲ್ಲಿದ್ದಾರೆ.
*ಮುಂದಿನ ಗ್ರಾಂಡ್ ಸ್ಲಾಂ
ಫ್ರೆಂಚ್ ಓಪನ್, ಪ್ಯಾರಿಸ್
ಯಾವಾಗ: ಮೇ 25-ಜೂನ್ 8
*19: ಚಾಂಪಿಯನ್ ಜನ್ನಿಕ್ ಸಿನ್ನರ್ ಟ್ರೋಫಿಯೊಂದಿಗೆ 19.04 ಕೋಟಿ ರೂ. ನಗದು ಬಹುಮಾನ ಗೆದ್ದುಕೊಂಡರೆ, ರನ್ನರ್ಅಪ್ ಜ್ವೆರೇವ್ 10.34 ಕೋಟಿ ರೂ. ಗಳಿಸಿದರು.
*1: ಸಿನ್ನರ್ 3 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಮೊದಲ ಇಟಲಿ ಆಟಗಾರರಾಗಿದ್ದಾರೆ. ನಿಕೋಲ ಪೈಟ್ರಂಗೆಲಿ (1959, 1960ರ ಫ್ರೆಂಚ್ ಓಪನ್) 2 ಗ್ರಾಂಡ್ ಸ್ಲಾಂ ಗೆದ್ದಿದ್ದು ಹಿಂದಿನ ಗರಿಷ್ಠ.
ನಡಾಲ್ ಸಾಧನೆ ಸಮ
ಜನ್ನಿಕ್ ಸಿನ್ನರ್ ಕಳೆದ 20 ವರ್ಷಗಳಲ್ಲಿ ಮೊದಲ ಪ್ರಶಸ್ತಿ ಗೆದ್ದ ಗ್ರಾಂಡ್ ಸ್ಲಾಂನಲ್ಲೇ ಮರುವರ್ಷವೂ ಪ್ರಶಸ್ತಿ ಉಳಿಸಿಕೊಂಡ ಮೊದಲ ಸಾಧಕರಾಗಿದ್ದಾರೆ. ಈ ಮುನ್ನ ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ 2005 ಮತ್ತು 2006ರ ಫ್ರೆಂಚ್ ಓಪನ್ನಲ್ಲಿ ಈ ಸಾಧನೆ ಮಾಡಿದ್ದರು.
8: ಸಿನ್ನರ್ ವೃತ್ತೀಜಿವನದ ಮೊದಲ ಮೂರೂ ಗ್ರಾಂಡ್ ಸ್ಲಾಂ ಫೈನಲ್ಗಳನ್ನೂ ಗೆದ್ದ ವಿಶ್ವದ 8ನೇ ಆಟಗಾರರಾಗಿದ್ದಾರೆ. ಜಿಮ್ಮಿ ಕಾನರ್ಸ್, ಬೋರ್ನ್ ಬೋರ್ಗ್, ಸ್ಟೀನ್ ಎಡ್ರ್ಬಗ್, ಗುಸ್ಟಾವೊ ಕುರ್ಟನ್, ರೋಜರ್ ಫೆಡರರ್, ಸ್ಟಾನ್ ವಾವ್ರಿಂಕಾ ಮತ್ತು ಕಾಲೋರ್ಸ್ ಅಲ್ಕರಾಜ್ ಹಿಂದಿನ ಸಾಧಕರು.
*ಸಿನ್ನರ್ ಈಗ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ. ನಾನಿಂದು ಅವರಿಗೆ ಉತ್ತಮ ಸ್ಪರ್ಧೆಯನ್ನು ನೀಡಲಷ್ಟೇ ಪ್ರಯತ್ನಿಸಿದೆ. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ.
| ಅಲೆಕ್ಸಾಂಡರ್ ಜ್ವೆರೇವ್
*ನನ್ನ ಈ ಗೆಲುವಿನಲ್ಲಿ ಕೋಚ್ ಡರೇನ್ ಕಾಹಿಲ್ ಕೊಡುಗೆ ಮಹತ್ವದ್ದಾಗಿದೆ. ನಾನು ಗೆದ್ದ ಗ್ರಾಂಡ್ ಸ್ಲಾಂಗಳಲ್ಲಿ ಇದು ಅತ್ಯಂತ ವಿಶೇಷವಾದುದು.
| ಜನ್ನಿಕ್ ಸಿನ್ನರ್