ಕ್ರೀಡೆ

182 ವರ್ಷ ಹಳೆಯ ರೇಸ್​ ಕೋರ್ಸ್​ ಮುಚ್ಚಿ ವಸತಿ ಸಮುಚ್ಚಯ ನಿರ್ಮಿಸಲು ಮುಂದಾದ ಸಿಂಗಾಪುರ!

ಸಿಂಗಾಪುರ: ಬ್ರಿಟಿಷ್​ ಕಾಲದಿಂದಲೂ ಕುದುರೆ ರೇಸ್​ ನಡೆಯುತ್ತಿದ್ದ 182 ವರ್ಷ ಹಳೆಯ ರೇಸ್​ಕೋರ್ಸ್​ಅನ್ನು ಮುಚ್ಚಿರುವ ಸಿಂಗಾಪುರ ಸರ್ಕಾರ, ಇದೀಗ ಅದೇ ಜಾಗದಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಮುಂದಾಗಿದೆ. ಜತೆಗೆ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಯೋಜನೆಯನ್ನು ರೂಪಿಸಿದೆ.

ಸಿಂಗಾಪುರ ಟರ್ಫ್​​ ಕ್ಲಬ್​ನಲ್ಲಿ (ಎಸ್​ಟಿಸಿ) ಅಕ್ಟೋಬರ್​ 5ರಂದು ಕೊನೆಯ ಕುದುರೆ ರೇಸ್​ ನಡೆಯಿತು ಮತ್ತು ಇದಕ್ಕೆ ಸಾವಿರಾರು ಮಂದಿ ಸಾಯಾದರು. ಇಲ್ಲಿ 1842ರಿಂದಲೂ ಕುದುರೆ ರೇಸ್​ ನಡೆಯುತಿತ್ತು.

ಈ ರೇಸ್​ ಕೋರ್ಸ್​ ಒಟ್ಟಾರೆ 124 ಹೆಕ್ಟೇರು ಜಾಗದಲ್ಲಿದ್ದು, 2027ರ ಮಾರ್ಚ್​ ವೇಳೆಗೆ ಈ ಜಾಗ ಸಂಪೂರ್ಣವಾಗಿ ಸಿಂಗಾಪುರ ಸರ್ಕಾರದ ಕೈಸೇರಲಿದೆ. ನಂತರದಲ್ಲಿ ವಸತಿ ಸಮುಚ್ಚಯ ಸಹಿತ ಇತರ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲಾಗುವುದು.