ಪಿವಿ ಸಿಂಧು ಸಂಗ್ರಹ ಚಿತ್ರ
ಕ್ರೀಡೆ

ಇಂದಿನಿಂದ ಡೆನ್ಮಾರ್ಕ್​ ಓಪನ್​: ಪಿವಿ ಸಿಂಧು, ಲಕ್ಷ್ಯ ಸೇನ್​ ಮೇಲೆ ಭಾರತದ ನಿರೀಕ್ಷೆ

ಒಟ್ಟು 9.08 ಕೋಟಿ ರೂ. ಬಹುಮಾನ ಮೊತ್ತದ ಡೆನ್ಮಾರ್ಕ್​ ಓಪನ್​ ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿ ಮಂಗಳವಾರ ಶುರುವಾಗಲಿದೆ

ಒಡೆನ್ಸೆ: ಒಟ್ಟು 9.08 ಕೋಟಿ ರೂ. ಬಹುಮಾನ ಮೊತ್ತದ ಡೆನ್ಮಾರ್ಕ್​ ಓಪನ್​ ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿ ಮಂಗಳವಾರ ಶುರುವಾಗಲಿದ್ದು, ಭಾರತ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್​ ಮೇಲೆ ನಿರೀಕ್ಷೆ ಇಟ್ಟಿದೆ. ಆದರೆ ಇವರಿಬ್ಬರೂ ಮೊದಲ ಸುತ್ತಿನಿಂದಲೇ ಕಠಿಣ ಸವಾಲು ಎದುರಿಸಲಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್​ ಹಾಗೂ ಹಾಲಿ ವಿಶ್ವ ನಂ. 11 ಪಿವಿ ಸಿಂಧು ಮೊದಲ ಸುತ್ತಿನಲ್ಲಿ ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್​ ಆನ್​ ಸೆ-ಯಂಗ್​ ವಿರುದ್ಧ ಆಡುವ ಕಠಿಣ ಸವಾಲು ಹೊಂದಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ವಿಶ್ವ ನಂ. 10 ಲಕ್ಷ್ಯ ಸೇನ್​ ಮೊದಲ ಸುತ್ತಿನಲ್ಲೇ 3ನೇ ಶ್ರೇಯಾಂಕಿತ ಚೌ ಟಿಯೆನ್​ ಚೆನ್​ ವಿರುದ್ಧ ಆಡಲಿದ್ದಾರೆ.

ಕಳೆದ ಜುಲೈನಲ್ಲಿ ಜಪಾನ್​ ಓಪನ್​ ಗೆದ್ದು ಬೀಗಿದ್ದ 31 ವರ್ಷದ ಸಿಂಧು ಬಳಿಕ ಏಷ್ಯನ್​ ಗೇಮ್ಸ್​ ಮತ್ತು ಆರ್ಕ್​ಟಿಕ್​ ಓಪನ್​ನಲ್ಲಿ ಕ್ವಾರ್ಟರ್​ಫೈನಲ್​ನಲ್ಲೇ ಮುಗ್ಗರಿಸಿದ್ದರು. ದಕ್ಷಿಣ ಕೊರಿಯಾ ತಾರೆ ಆನ್​ ಸೆ-ಯಂಗ್​ ವಿರುದ್ಧದ ಕಳೆದ 10 ಮುಖಾಮುಖಿಯಲ್ಲೂ ಸೋತಿರುವ ಕೆಟ್ಟ ದಾಖಲೆಯನ್ನೂ ಸಿಂಧು ಹೊಂದಿದ್ದಾರೆ. ತನ್ವಿ ಶರ್ಮ, ಅಶ್ಮಿತಾ ಚಲಿಹಾ, ದೇವಿಕಾ ಸಿಹಾಗ್​ ಮತ್ತು ಉನ್ನತಿ ಹೂಡ ಸಿಂಗಲ್ಸ್​ ವಿಭಾಗದಲ್ಲಿ ಸ್ಪರ್ಧಿಸಲಿರುವ ಭಾರತದ ಯುವ ಆಟಗಾರ್ತಿಯರಾಗಿದ್ದಾರೆ.

25 ವರ್ಷದ ಲಕ್ಷ್ಯ ಸೇನ್​ ಏಷ್ಯಾಡ್​ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಬಳಿಕ ಮೊದಲ ಟೂರ್ನಿ ಆಡಲಿದ್ದು, ತೈವಾನ್​ನ ಚೆನ್​ ವಿರುದ್ಧ ಗೆಲ್ಲಬೇಕಾದರೆ ಶ್ರೇಷ್ಠ ಆಟವನ್ನೇ ಪ್ರದರ್ಶಿಸಬೇಕಾಗಿದೆ.

ಕನ್ನಡಿಗ ಆಯುಷ್​ ಶೆಟ್ಟಿ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಅಲ್ವಿ ರ್ಹಾನ್​ ವಿರುದ್ಧ ಆಡಲಿದ್ದಾರೆ. ವಿಶ್ವ ಚಾಂಪಿಯನ್​ಷಿಪ್​ನಲ್ಲಿ ರ್ಹಾನ್​ ವಿರುದ್ಧ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಆಯುಷ್​ಗೆ ಇದೆ. 2017ರ ಆವೃತ್ತಿಯ ಚಾಂಪಿಯನ್​ ಕಿಡಂಬಿ ಶ್ರೀಕಾಂತ್​ ಮೊದಲ ಸುತ್ತಿನಲ್ಲಿ ಫ್ರಾನ್ಸ್​ನ ಅನೌಡ್​ ಮೆರ್ಕ್ಲೆ ವಿರುದ್ಧ ಸೆಣಸಲಿದ್ದಾರೆ.

ಪುರುಷರ ಡಬಲ್ಸ್​ನಲ್ಲಿ ಮಾಜಿ ವಿಶ್ವ ನಂ. 1 ಸಾತ್ವಿಕ್​ ಸಾಯಿರಾಜ್​-ಚಿರಾಗ್​ ಶೆಟ್ಟಿ ಜೋಡಿ ಕಣಕ್ಕಿಳಿಯಲಿದ್ದು, ಏಷ್ಯಾಡ್​ನಲ್ಲಿ ಮೊದಲ ಸುತ್ತಿನಲ್ಲೇ ಕಂಡ ಆಘಾತದಿಂದ ಪುಟಿದೆದ್ದು ಬರುವ ಹಂಬಲದಲ್ಲಿದೆ. ಮಹಿಳಾ ಡಬಲ್ಸ್​ ವಿಭಾಗದಲ್ಲಿ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್​ ಜೋಡಿ ಭಾರತದ ಸವಾಲು ಮುನ್ನಡೆಸಲಿದೆ.