ರಜತಮಣಿಯರು: ದೀಪಾ ಮಲಿಕ್​ರೊಂದಿಗೆ ಭವೀನಾ ಬೇನ್​ ಪಟೇಲ್ 
ಕ್ರೀಡೆ

ಬೆಳ್ಳಿ ಗೆದ್ದ ಭವೀನಾ ಪಟೇಲ್​​ಗೆ ತೆಂಡೂಲ್ಕರನ್ನು ಭೇಟಿಯಾಗುವಾಸೆ!

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಟೇಬಲ್​ ಟೆನ್ನಿಸ್​ ಆಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿರುವ ಭವೀನಾ ಬೇನ್ ಪಟೇಲ್​ ಅವರು ಗೆಲುವಿನ ಸಂತಸದಲ್ಲಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. 2016 ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಶಾಟ್​ಪುಟ್​ನಲ್ಲಿ ಭಾರತಕ್ಕೆ ರಜತ ಪದಕ ಗೆದ್ದಿದ್ದ ದೀಪಾ ಮಲಿಕ್​ ಅವರು, ಮತ್ತೊಬ್ಬ ಆಟಗಾರ್ತಿ ವೀಲ್​ ಚೇರ್​ ಮೇಲೆ ಆಡಿ ಪದಕ ಗಳಿಸಿರುವುದು ಶ್ಲಾಘನೀಯ ಎಂದಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಭವೀನಾ, ಅತ್ಯಂತ ಕಡಿಮೆ ಸಮಯದಲ್ಲಿ ನಡೆಯುವಂತಹ ಟೇಬಲ್​ ಟೆನ್ನಿಸ್​ ಆಟದಲ್ಲಿ ಪೂರ್ಣ ತಲ್ಲೀನತೆಯಿಂದ ಭಾಗವಹಿಸಬೇಕು. ಇದಕ್ಕೆ ಧ್ಯಾನ ಮಾಡುವ ಅಭ್ಯಾಸವನ್ನು ತಾವು ರೂಢಿಸಿಕೊಂಡಿರುವುದಾಗಿ ಹೇಳಿದ್ದಾರೆ. ತಮ್ಮ ಕೋಚ್​​ ನಿಕುಲ್​ ಪಟೇಲ್ ಅವರು ಟೋಕಿಯೋಗೆ ಬಾರದಿದ್ದರೂ, ವಿಡಿಯೋ ಕಾಲ್​ನ ಮೂಲಕ ತಮಗೆ ಪಂದ್ಯಾವಳಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರೆಂದು ಸ್ಮರಿಸಿದ್ದಾರೆ.

ನಿಮ್ಮ ಪದಕವನ್ನು ಯಾರಿಗೆ ತೋರಿಸಿ ಸೆಲೆಬ್ರೇಟ್​​ ಮಾಡಲಿಚ್ಛಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭವೀನಾ, "ನನಗೆ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್​ ಅವರು ಪ್ರೇರಣಾದಾಯಕವಾಗಿದ್ದು, ಅವರನ್ನು ಒಮ್ಮೆ ಖುದ್ದು ಮಾತನಾಡಿಸಲಿಚ್ಛಿಸುತ್ತೇನೆ. ಅವರಿಂದ ಇನ್ನಷ್ಟು ಪ್ರೋತ್ಸಾಹದಾಯಕ ಮಾತುಗಳನ್ನು ಕೇಳಲಿಚ್ಛಿಸುತ್ತೇನೆ" ಎಂದಿದ್ದಾರೆ. (ಏಜೆನ್ಸೀಸ್)