ದೋಹಾ: ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ರಜತ ಪದಕ ಗೆಲುವಿನೊಂದಿಗೆ ಮರಳಿ ಕಣಕ್ಕಿಳಿದಿದ್ದಾರೆ. ಡೈಮಂಡ್ ಲೀಗ್ನ ಮೊದಲ ಚರಣದಲ್ಲಿ ಗರಿಷ್ಠ 88.36 ಮೀಟರ್ ದೂರ ಎಸೆದ ನೀರಜ್, ಕೇವಲ 2 ಸೆಂಟಿಮೀಟರ್ನಿಂದ ಅಗ್ರಸ್ಥಾನದಿಂದ ವಂಚಿತರಾದರು. ಜೆಕ್ ಗಣರಾಜ್ಯದ ಜೇಕಬ್ ವಡ್ಲೆಜ್ (88.38 ಮೀ) ಸ್ವರ್ಣ ಪದಕ ಜಯಿಸಿದರು. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಪೂರ್ವಭಾವಿಯಾಗಿ 26 ವರ್ಷದ ನೀರಜ್ ಹಾಲಿ ವರ್ಷದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ.
ಶುಕ್ರವಾರ ರಾತ್ರಿ ದೋಹಾದಲ್ಲಿ ನಡೆದ ಸ್ಪರ್ಧೆಯಲ್ಲಿ ನೀರಜ್ ಮೊದಲ ಯತ್ನದಲ್ಲಿ ಫೌಲ್ ಮಾಡಿದರು. ನಂತರ 2ನೇ ಎಸೆತದಲ್ಲಿ 84.93 ಮೀ. ಎಸೆದರೆ, 3ನೇ ಯತ್ನದಲ್ಲಿ ಗರಿಷ್ಠ 86.24 ಮೀ. ಎಸೆದರು. ನಂತರದ 2 ಯತ್ನದಲ್ಲಿ ಇದನ್ನು ಮೀರಿಸಲು ಸಫಲರಾಗಲಿಲ್ಲ. 6ನೇ ಹಾಗೂ ಕೊನೇ ಯತ್ನದಲ್ಲಿ 88.36 ಮೀ. ದೂರ ಎಸೆಯುವ ಮೂಲಕ ಸ್ವರ್ಣ ತಪ್ಪಿದರೂ, 2ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲರಾದರು. ಗ್ರೆನೆಡದ ಆಂಡರ್ಸನ್ ಪೀಟರ್ಸ್ 86.62 ಮೀ. ಎಸೆದು 3ನೇ ಸ್ಥಾನ ಪಡೆದರು. ಕಳೆದ ವರ್ಷ ಅಕ್ಟೋಬರ್ನಲ್ಲಿ ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲಿ ನೀರಜ್ ಕೊನೆಯದಾಗಿ ಸ್ಪರ್ಧಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ಗೆ ಭರ್ಜರಿ ಸಿದ್ಧತೆ ನಡೆಸಿರುವ ನೀರಜ್ ಈ ಸಲವೂ 90 ಮೀ. ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. 89.94 ಮೀ. ಅವರ ಗರಿಷ್ಠ ದೂರದ ಎಸೆತವಾಗಿದೆ. ಇನ್ನು ಮೇ 14-15ರಂದು ಅವರು ಭುವನೇಶ್ವರದಲ್ಲಿ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಇದು ಕಳೆದ 3 ವರ್ಷಗಳಲ್ಲಿ ಭಾರತದಲ್ಲಿ ಅವರ ಮೊದಲ ಸ್ಪರ್ಧೆ ಆಗಿರಲಿದೆ.
ಕಿಶೋರ್ಗೆ ನಿರಾಸೆ: ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತೋರ್ವ ಭಾರತೀಯ ಕಿಶೋರ್ ಜೆನಾ ಗರಿಷ್ಠ 76.31 ಮೀ. ಎಸೆತದೊಂದಿಗೆ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದೇ ಮೊದಲ ಬಾರಿಗೆ ಡೈಮಂಡ್ ಲೀಗ್ನಲ್ಲಿ ಸ್ಪರ್ಧಿಸಿದ ಒಡಿಶಾದ ಕಿಶೋರ್ ಮೊದಲ ಯತ್ನದಲ್ಲಿ 75.72 ಮೀ. ಎಸೆದರೆ, 2ನೇ ಯತ್ನದಲ್ಲಿ ಫೈಲ್ ಮಾಡಿದರು. 3ನೇ ಯತ್ನದಲ್ಲಿ 76.31 ಮೀ. ಎಸೆದರೂ, ಅಗ್ರ 8ರಿಂದ ಹೊರಬಿದ್ದ ಕಾರಣ ಕೊನೇ 3 ಎಸೆತ ಎಸೆಯುವ ಅವಕಾಶ ತಪ್ಪಿಸಿಕೊಂಡರು.
ನೀರಜ್ ಥ್ರೋ
1. ಫೌಲ್
2. 84.93 ಮೀ.
3. 86.24 ಮೀ.
4. 86.18 ಮೀ.
5. 82.28 ಮೀ.
6. 86.36 ಮೀ.