ಕ್ರೀಡೆ

ರೋಹಿತ್​, ಕೊಹ್ಲಿ ನಿವೃತ್ತಿ ವರದಿಗಳ ಬಗ್ಗೆ ಶುಭಮಾನ್​ ಗಿಲ್​ ನೀಡಿದ ವಿವರಣೆ ಹೀಗಿದೆ...

ದುಬೈ: ಕಳೆದ ವರ್ಷ ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಚುಟುಕು ಕ್ರಿಕೆಟ್​ ಮಾದರಿಗೆ ವಿದಾಯ ಹೇಳಿದ್ದರು. ಈ ಸಲ ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ ರೋಹಿತ್​, ಕೊಹ್ಲಿ ಏಕದಿನ ಮಾದರಿಯಿಂದಲೂ ನಿವೃತ್ತಿ ಹೊಂದಿ 2027ರ ವಿಶ್ವಕಪ್​ಗೆ ತಂಡ ಕಟ್ಟಲು ಅನುವು ಮಾಡಿಕೊಡಲಿದ್ದಾರೆ ಎಂಬ ವರದಿಗಳು ಹರಡಿವೆ. ಆದರೆ ಶನಿವಾರ ಫೈನಲ್​ಗೆ ಮುನ್ನ ಸುದ್ದಿಗೋಷ್ಠಿಗೆ ಹಾಜರಾದ ಉಪನಾಯಕ ಶುಭಮಾನ್​ ಗಿಲ್​, ರೋಹಿತ್​-ಕೊಹ್ಲಿ ನಿವೃತ್ತಿ ಸಾಧ್ಯತೆಯನ್ನು ತಳ್ಳಿಹಾಕಿದರು.

"ಡ್ರೆಸ್ಸಿಂಗ್​ ರೂಮ್​ನಲ್ಲಿ ನಿವೃತ್ತಿ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ. ರೋಹಿತ್ ಫೈನಲ್​ ಪಂದ್ಯದ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ' ಎಂದು ಗಿಲ್​ ಸ್ಪಷ್ಟಪಡಿಸಿದರು.

ರೋಹಿತ್​, ಕೊಹ್ಲಿಗೆ 4ನೇ ಐಸಿಸಿ ಟ್ರೋಫಿ ನಿರೀಕ್ಷೆ

ಭಾರತ ಗೆದ್ದರೆ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಗರಿಷ್ಠ 4 ಐಸಿಸಿ ಟ್ರೋಫಿ ಗೆದ್ದ ಭಾರತೀಯ ದಾಖಲೆ ಬರೆಯಲಿದ್ದಾರೆ. ಸದ್ಯ ಇವರಿಬ್ಬರು ತಲಾ 3 ಬಾರಿ ಐಸಿಸಿ ಟ್ರೋಫಿ ಗೆದ್ದ ದಾಖಲೆಯನ್ನು ಎಂಎಸ್​ ಧೋನಿ, ಯುವರಾಜ್​ ಸಿಂಗ್​, ವೀರೇಂದ್ರ ಸೆಹ್ವಾಗ್​, ಹರ್ಭಜನ್​ ಸಿಂಗ್​ ಜತೆಗೆ ಹಂಚಿಕೊಂಡಿದ್ದಾರೆ. ರೋಹಿತ್​ ಈ ಮುನ್ನ 2007, 2024ರ ಟಿ20 ವಿಶ್ವಕಪ್​ ಮತ್ತು 2013ರ ಚಾಂಪಿಯನ್ಸ್​ ಟ್ರೋಫಿ ಗೆದ್ದಿದ್ದರೆ, ಕೊಹ್ಲಿ 2011ರ ಏಕದಿನ ವಿಶ್ವಕಪ್​, 2013ರ ಚಾಂಪಿಯನ್ಸ್​ ಟ್ರೋಫಿ, 2024ರ ಟಿ20 ವಿಶ್ವಕಪ್​ ಗೆದ್ದಿದ್ದಾರೆ.