ಕ್ರೀಡೆ

ಶಮಿಯಂತಹ ಬೌಲರ್​ ಅಪರೂಪ ಆದರೆ... ನಾಯಕ ಶುಭಮಾನ್​ ಗಿಲ್ ಹೇಳಿಕೆ ವೈರಲ್​​! Shubman Gill

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಶುಕ್ರವಾರದಿಂದ ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ತಂಡಕ್ಕೆ ಅನುಭವಿ ವೇಗಿ ಮೊಹಮ್ಮದ್​ ಶಮಿ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಈಗಾಗಲೇ ಭಾರಿ ಟೀಕೆಗಳು ಎದುರಾಗಿವೆ. ಇದೇ ವಿಚಾರವಾಗಿ ನಾಯಕ ಶುಭಮಾನ್​ ಗಿಲ್ ( Shubman Gill )​ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದರು.

ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿರುವ ಶಮಿ, ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಸದ್ಯ ಫಿಟ್​ ಆಗಿದ್ದು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೂ, ಆಯ್ಕೆದಾರರು ಮಾತ್ರ ಅವರನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ಆಯ್ಕೆ ಸಮಿತಿಯ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ತಮ್ಮನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಶಮಿ ಕೂಡ ಅಸಮಾಧಾನ ಹೊರಹಾಕಿದ್ದರು. ಆದರೆ, ಆನಂತರದಲ್ಲಿ ಸುಮ್ಮನಾದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಟೆಸ್ಟ್​ ಆರಂಭವಾಗಲಿದ್ದು, ಶಮಿ ಪುನರಾಗಮನದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗಳಿಗೆ ಗಿಲ್ ಆಸಕ್ತಿದಾಯಕ ಉತ್ತರಗಳನ್ನು ನೀಡಿದ್ದಾರೆ.

ಶಮಿ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಗಿಲ್​, ಶಮಿಯಂತಹ ಬೌಲರ್‌ಗಳು ಬಹಳ ಅಪರೂಪ. ಅದೇ ಸಮಯದಲ್ಲಿ, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಬೌಲರ್‌ಗಳ ಪ್ರದರ್ಶನವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಶಮಿ ಅವರ ಆಯ್ಕೆಯ ಬಗ್ಗೆ ಆಯ್ಕೆದಾರರಿಗೆ ಚೆನ್ನಾಗಿ ತಿಳಿದಿದೆ ಎಂದು ಗಿಲ್​ ಹೇಳಿದರು.

ಇದೇ ವೇಳೆ ಹರಿಣಗಳ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ ಗಿಲ್, ಅವರನ್ನು ಎದುರಿಸುವುದು ಅಷ್ಟು ಸುಲಭವಲ್ಲ. ದಕ್ಷಿಣ ಆಫ್ರಿಕಾ ಉತ್ತಮ ತಂಡ. ಅಲ್ಲದೆ, ಅವರು ಕಳೆದ ಬಾರಿಯ ವಿಶ್ವ ಟೆಸ್ಟ್​ ಚಾಂಪಿಯನ್ ಆಗಿದ್ದಾರೆ. ಆದಾಗ್ಯೂ, ಕಠಿಣ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ ಎಂದು ಗಿಲ್​ ಹೇಳಿದರು.

2025-27ರ ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳು ಬಹಳ ಮುಖ್ಯ ಎಂದು ಗಿಲ್​ ಇದೇ ಸಂದರ್ಭದಲ್ಲಿ ತಿಳಿಸಿದರು. ಈ ಪಂದ್ಯಗಳಲ್ಲಿ ಗೆಲುವು ಸಾಧಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದರು. ಇದೇ ವೇಳೆ ಮೊದಲ ಟೆಸ್ಟ್ ಪಂದ್ಯವನ್ನು ಆಯೋಜಿಸಲಿರುವ ಈಡನ್​ ಗಾರ್ಡನ್​ ಪಿಚ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ವಿಶಿಷ್ಟ ಭಾರತೀಯ ಪಿಚ್ ಎಂದರು. (ಏಜೆನ್ಸೀಸ್​)