ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ಮೊದಲ ಪಂದ್ಯದಲ್ಲೇ ಗೆಲುವು ಕಾಣುವ ಮೂಲಕ ಆತಿಥೇಯರು ಮೇಲುಗೈ ಸಾಧಿಸಿದ್ದಾರೆ. ಐಪಿಎಲ್ನಲ್ಲಿ ಮಿಂಚಿದ್ದ ಯುವ ಆಟಗಾರರು ಮೊದಲ ಪಂದ್ಯದಲ್ಲೇ ವಿಫಲವಾಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಇನ್ನೂ ಈ ಕುರಿತು ಮಾತನಾಡಿರುವ ನಾಯಕ ಶುಭಮನ್ ಗಿಲ್ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಆತಿಥೇಯರನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಭಾರತ ತಂಡವು ಎದುರಾಳಿಗಳನ್ನು 20 ಓವರ್ಗಳಲ್ಲಿ 115 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸುಲಭ ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದ ಜಿಂಬಾಬ್ವೆ ಬೌಲರ್ಗಳು ಪ್ರವಾಸಿ ತಂಡವನ್ನು 19.5 ಓವರ್ಗಳಲ್ಲಿ 102 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಮೊದಲ ಪಂದ್ಯದಲ್ಲಿ ಸೋಲಿನ ಕುರಿತು ಮಾತನಾಡಿದ ನಾಯಕ ಶುಭಮನ್ ಗಿಲ್, ನಮ್ಮ ಬೌಲರ್ಗಳು ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಅದರ ಬಗ್ಗೆ ಎರಡು ಮಾತುಗಳಿಲ್ಲ. ಆದರೆ, ಬ್ಯಾಟಿಂಗ್ ವಿಚಾರಕ್ಕೆ ಬರುವುದಾದರೆ ನಾವು ಚೆನ್ನಾಗಿ ಆಡಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಎಲ್ಲರೂ ತುಕ್ಕು ಹಿಡಿದಂತೆ ಕಾಣುತ್ತಿದ್ದರು. ನಾವು ಗುರಿಯ ಅರ್ಧಕ್ಕೆ ಬರುವಷ್ಟರಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡಿದ್ದೆವು. ನಾನು ಕೊನೆಯವರೆಗೂ ಔಟಾಗದೆ ಉಳಿದುಕೊಂಡಿದ್ದರೆ ಪಂದ್ಯದ ದಿಕ್ಕು ಬದಲಾಗುತ್ತಿತ್ತು ಎಂಬ ಭಾವನೆ ಇದೆ.
ನಾನು ಔಟಾದ ರೀತಿ ಮತ್ತು ಉಳಿದ ಬ್ಯಾಟರ್ಗಳು ಔಟಾದ ರೀತಿಯಿಂದ ನನಗೆ ತುಂಬಾ ನಿರಾಸೆಯಾಗಿದೆ. ವಾಷಿಂಗ್ಟನ್ ಸುಂದರ್ ಮೇಲೆ ಭರವಸೆ ಇಟ್ಟುಕೊಂಡಿದ್ದೇವು. ಹೀಗಾಗಿ ಕೊನೆಯವರೆಗೂ ನಿರೀಕ್ಷೆಗಳಿದ್ದವು, ಆದರೆ ನೀವು 115 ರನ್‌ಗಳನ್ನು ಬೆನ್ನಟ್ಟುವಾಗ 10ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಮೇಲೆ ಗೆಲುವಿನ ನಿರೀಕ್ಷೆ ಇಟ್ಟರೆ, ಏನೋ ತಪ್ಪಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದರು.