ನವದೆಹಲಿ: ಗೌತಮ್ ಗಂಭೀರ್ ಕೋಚ್ ಆಗಿ ನೇಮಕಗೊಂಡರೆ, ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಜುಲೈ&ಆಗಸ್ಟ್ನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಪರ ಮರಳಿ ಕಣಕ್ಕಿಳಿಯುವ ಹಾದಿ ಸುಗಮವಾಗಲಿದೆ ಎನ್ನಲಾಗಿದೆ. ದೇಶೀಯ ಕ್ರಿಕೆಟ್ನಲ್ಲಿ ಆಡದೆ ಬಿಸಿಸಿಐ ಗುತ್ತಿಗೆಯಿಂದ ವಂಚಿತವಾಗಿದ್ದ ಶ್ರೇಯಸ್, ಗಂಭೀರ್ ಗರಡಿಯಲ್ಲಿ ಹೊಸ ಅವಕಾಶ ಪಡೆಯುವ ನಿರೀಕ್ಷೆ ಇದೆ. ಐಪಿಎಲ್ನಲ್ಲಿ ಕೆಕೆಆರ್ ಮೆಂಟರ್ ಆಗಿದ್ದ ಗಂಭೀರ್ ಜತೆಗೆ ಶ್ರೇಯಸ್ ಉತ್ತಮ ಬಾಂಧವ್ಯ ಹೊಂದಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಅವರ ವೃತ್ತೀಜಿವನಕ್ಕೆ ಮರುಹುಟ್ಟು ನೀಡಲು ನೆರವಾಗುವ ನಿರೀಕ್ಷೆ ಇದೆ.
ಟಿ20 ವಿಶ್ವಕಪ್ ನಂತರ ಭಾರತ ತಂಡ ಜುಲೈ 5ರಿಂದ ಜಿಂಬಾಬ್ವೆಯಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಕ್ಕೂ ಶ್ರೇಯಸ್ ಭಾರತದ ಟಿ20 ತಂಡದಲ್ಲಿ ಸ್ಥಾನ ಸಂಪಾದಿಸಿದರೆ ಅಚ್ಚರಿ ಇಲ್ಲವೆನಿಸಿದೆ.
ಐಪಿಎಲ್ನಲ್ಲಿ ಮಿಂಚಿದ ಅಭಿಷೇಕ್ ಶರ್ಮ, ರಿಯಾನ್ ಪರಾಗ್, ಮಯಾಂಕ್ ಯಾದವ್, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ವೈಶಾಕ್ ವಿಜಯ್ಕುಮಾರ್, ಯಶ್ ದಯಾಳ್ರಂಥ ಯುವ ಆಟಗಾರರಿಗೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಲಭಿಸುವ ನಿರೀಕ್ಷೆ ಇದೆ. ಜಿಂಬಾಬ್ವೆ ವಿರುದ್ಧ ಸರಣಿಗೆ ಮುಂದಿನ ವಾರ ಭಾರತ ತಂಡದ ಆಯ್ಕೆ ನಡೆಯುವ ಸಾಧ್ಯತೆ ಇದೆ. ರಿಂಕು ಸಿಂಗ್, ಶುಭಮಾನ್ ಗಿಲ್, ಆವೇಶ್ ಖಾನ್, ಖಲೀಲ್ ಅಹ್ಮದ್ ಕೂಡ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗುವ ನಿರೀಕ್ಷೆ ಇದೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ಗೆ ವಿಶ್ರಾಂತಿ ನೀಡದಿದ್ದರೆ, ನಾಯಕ ಮತ್ತು ಉಪನಾಯಕರಾಗಿ ನೇಮಕಗೊಳ್ಳುವ ನಿರೀಕ್ಷೆ ಇದೆ.
ರೋಹಿತ್, ವಿರಾಟ್, ಬುಮ್ರಾ ಇನ್ನು ಟೆಸ್ಟ್ ಕ್ರಿಕೆಟ್ನತ್ತ ಗಮನ
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾರಂಥ ಪ್ರಮುಖ ಆಟಗಾರರಿಗೆ ಜಿಂಬಾಬ್ವೆ-ಶ್ರೀಲಂಕಾ ವಿರುದ್ಧದ ಸರಣಿಗಳಿಂದ ವಿಶ್ರಾಂತಿ ನೀಡುವ ನಿರೀಕ್ಷೆ ಇದೆ. ಅಲ್ಲದೆ ಇವರ ಗಮನ ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ನತ್ತ ಇರಲಿದ್ದು, 2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಭಾರತ ತಂಡವನ್ನು ಮುನ್ನಡೆಸುವತ್ತ ಪ್ರಮುಖ ಗಮನ ಇರಲಿದೆ. 2024ರ ಸೆಪ್ಟೆಂಬರ್ನಿಂದ 2025ರ ಜನವರಿ ನಡುವೆ ಭಾರತ 9 ಟೆಸ್ಟ್ ಪಂದ್ಯಗಳನ್ನು ಆಡಲಿದೆ.