ಬೆಂಗಳೂರು: ಐಪಿಎಲ್ಗೆ ಮುನ್ನ ದೇಶೀಯ ಕ್ರಿಕೆಟ್ನಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿ, ಟೀಮ್ ಇಂಡಿಯಾದ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದಲೂ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಇದೀಗ ಕೆಕೆಆರ್ ನಾಯಕರಾಗಿ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಪುಟಿದೆದ್ದು ಬಂದಿದ್ದಾರೆ.
ಕೆಕೆಆರ್ ಯಶಸ್ಸಿನಲ್ಲಿ ಹೆಚ್ಚಿನ ಶ್ರೇಯವನ್ನು ಗೌತಮ್ ಗಂಭೀರ್ ಸಹಿತ ತರಬೇತಿ ಸಿಬ್ಬಂದಿ ಬಳಗ ಪಡೆದುಕೊಂಡಿರುವ ನಡುವೆ ನಾಯಕರಾಗಿ ಶ್ರೇಯಸ್ ಮೈದಾನದಲ್ಲಿ ತೆಗೆದುಕೊಂಡ ಕೆಲ ಚಾಣಕ್ಷ ನಿರ್ಧಾರಗಳೂ ಅಷ್ಟೇ ಅಮೂಲ್ಯವಾದುದು. ಏಕದಿನ ವಿಶ್ವಕಪ್ ಬಳಿಕ ಕಾಡಿದ ಬೆನ್ನುನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡರೂ, ಯಾರೂ ತಲೆಕೆಡಿಸಿಕೊಳ್ಳದ ಬಗ್ಗೆ ಫೈನಲ್ಗೆ ಮುನ್ನ ಬೇಸರಿಸಿದ್ದ ಶ್ರೇಯಸ್, 2 ಅರ್ಧಶತಕ 351 ರನ್ ಗಳಿಸಿ ಕೆಕೆಆರ್ ಪರ 4ನೇ ಸರ್ವಾಧಿಕ ಸ್ಕೋರರ್ ಎನಿಸಿದರು.
ಶ್ರೇಯಸ್ ಅಯ್ಯರ್ ಐಪಿಎಲ್ನಲ್ಲಿ ನಾಯಕರಾಗಿ ಆಡಿದ 70ನೇ ಪಂದ್ಯದಲ್ಲಿ ಟ್ರೋಫಿ ಎತ್ತಿದರು. ವಿರಾಟ್ ಕೊಹ್ಲಿ ಆರ್ಸಿಬಿ ನಾಯಕರಾಗಿ 143 ಪಂದ್ಯಗಳಲ್ಲಿ ಆಡಿಯೂ ಟ್ರೋಫಿ ಗೆಲ್ಲದಿರುವುದು ಗರಿಷ್ಠ. ಕೆಎಲ್ ರಾಹುಲ್ (64), ಸಂಜು ಸ್ಯಾಮ್ಸನ್ (61) ನಂತರದಲ್ಲಿದ್ದಾರೆ.